ಕಟೀಲು ದುರ್ಗಾಪರಮೇಶ್ವರಿ ಭಕ್ತರಿಗೆ ಸಿಹಿ ಸುದ್ದಿ: ಯಕ್ಷಗಾನ ಮೇಳಕ್ಕೆ ಕಾಲಮಿತಿಯಿಂದ ಮುಕ್ತಿ
ಮಂಗಳೂರು, ಜನವರಿ 09: ಕಾಲಮಿತಿ ಪದ್ಧತಿಯಲ್ಲಿ ನಡೆಯುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಜನವರಿ 14ರಿಂದ ಮತ್ತೆ ಹಳೆಯ ಪದ್ಧತಿಯಲ್ಲಿ ಇಡೀ ರಾತ್ರಿ ಪ್ರದರ್ಶನ ಕಾಣಲಿದೆ.
ಕಳೆದ ವರ್ಷದಿಂದ ಕಾಲಮಿತಿಗೆ ಒಳಪಟ್ಟಿದ್ದ ಕಟೀಲು ಮೇಳ ಈ ಬಾರಿಯೂ ಸುಮಾರು ಒಂದೂವರೆ ತಿಂಗಳ ಕಾಲ ಕಾಲಮಿತಿಯಲ್ಲಿ ಪ್ರದರ್ಶನ ನೀಡಿದೆ. ಆದರೆ ಜನವರಿ 14ರಿಂದ ಕಟೀಲಿನ ಆರೂ ಮೇಳಗಳು ಇಡೀ ರಾತ್ರಿ ಪ್ರದರ್ಶನ ನಡೆಸಲಿದೆ.

ನ್ಯಾಯಾಲಯದ ಆದೇಶ ಮತ್ತು ಶ್ರೀ ಕ್ಷೇತ್ರ ಕಟೀಲು ಭಕ್ತರ ಅಪೇಕ್ಷೆ ಮೇರೆಗೆ ಜನವರಿ14ರ ಮಕರ ಸಂಕ್ರಮಣದಿಂದ ರಾತ್ರಿಯಿಂದ ಬೆಳಗ್ಗಿನವರೆಗೆ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಅನುವಂಶಿಕ ಮುಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಹಾಗೂ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದ್ದಾರೆ.
'ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್, ಪೂರ್ಣರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ತೊಂದರೆ ಇಲ್ಲ. ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿತ್ತು. ಶಬ್ದಮಾಲಿನ್ಯ ಉಂಟಾಗಲಾರದು, ಧ್ವನಿವರ್ಧಕ ಬಳಕೆಯಿಂದ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ನಗರದಲ್ಲಿ ಶಬ್ದಮಿತಿಯನ್ನು ನೋಡಿಕೊಳ್ಳಲಾಗುವುದು. ಇದು ಹರಕೆಯ ಆಟ ಪ್ರದರ್ಶನವಾಗುವುದರಿಂದ ಜನರಿಗೆ ಯಾವುದೇ ಸಮಸ್ಯೆಯೂ ಆಗಲಾರದು ಎಂದು ಸನತ್‌ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಕೊರೊನಾ ಮುಗಿದ ಬಳಿಕ ಯಕ್ಷಗಾನ ಪ್ರದರ್ಶನದ ಅವಧಿಯನ್ನು ಸಂಜೆ 5 ರಿಂದ ಮಧ್ಯರಾತ್ರಿ 12.30ಕ್ಕೆ ಸೀಮಿತಗೊಳಿಸುವಂತೆ ದಕ್ಷಿಣ ಕನ್ನಡದ ಅಂದಿನ ಜಿಲ್ಲಾಧಿಕಾರಿ 2022ರ ನವೆಂಬರ್ 15ರಂದು ಆದೇಶ ಮಾಡಿದ್ದರು. ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಧ್ವನಿಯು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ನಿಗದಿತ ಮಿತಿಗಿಂತ ಹೆಚ್ಚು ಇರುತ್ತದೆ ಎಂದು ಯಕ್ಷಗಾನ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಯಕ್ಷಗಾನ ಪ್ರದರ್ಶನವನ್ನು ಕೋವಿಡ್‌ಗೆ ಮುನ್ನ ಇದ್ದಂತೆ ರಾತ್ರಿ ಪೂರ್ತಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಬಹುದು. ನಿಯಮ ಉಲ್ಲಂಘನೆ ಆದರೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಅದರಂತೆ ಇದೀಗ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಜನವರಿ 14ರಿಂದ ಮತ್ತೆ ಇಡೀ ರಾತ್ರಿ ಪ್ರದರ್ಶನ ನೀಡಲು ಸಜ್ಜಾಗಿದೆ.












Click it and Unblock the Notifications