ಮಂಗಳೂರು: ಹಿಂದೂ ಕುಶಲಕರ್ಮಿಯಿಂದ ಮಸೀದಿಗೆ ಕಾಷ್ಠ ಶಿಲ್ಪ; ಸೌಹಾರ್ದ ಕೆಲಸಕ್ಕೆ ಮೆಚ್ಚಿದ ಮುಸ್ಲಿಮರು
ಮಂಗಳೂರು, ಏಪ್ರಿಲ್ 20: ರಾಜ್ಯದಲ್ಲಿ ಧರ್ಮ ದಂಗಲ್ ಹೆಚ್ಚಾಗುತ್ತಿದೆ. ಹಿಜಾಬ್ ಗಲಾಟೆಯಿಂದ ಆರಂಭವಾದ ಕೋಮು ದ್ವೇಷ, ಹುಬ್ಬಳ್ಳಿಯ ಗಲಭೆಯವರೆಗೂ ಮುಂದುವರಿಯುತ್ತಲೇ ಇದೆ. ಆದರೆ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಧರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಮೇಳೈಸುತ್ತಿದೆ. ಮಸೀದಿಗೆ ಹಿಂದೂ ಕುಶಲಕರ್ಮಿ ಕಾಷ್ಠ ಶಿಲ್ಪ ಮಾಡುವ ಮೂಲಕ ದ್ವೇಷದ ಗೆರೆ ಅಳಿಸಿದ್ದಾರೆ.
ಹಿಜಾಬ್, ವ್ಯಾಪಾರ ಬಹಿಷ್ಕಾರ, ಹಲಾಲ್, ಸೇರಿದಂತೆ ಹಲವು ವಿಚಾರಗಳ ಮೂಲಕ ಧರ್ಮ ಸಂಘರ್ಷದ ಕಿಡಿ ರಾಜ್ಯದಲ್ಲಿ ಹಬ್ಬಿದೆ. ಕೋಮು ಕಿಡಿ ಜ್ವಾಲೆಯಾಗಿ ಹಬ್ಬುವ ಆತಂಕದ ನಡುವೆಯೂ ಅಲ್ಲಲ್ಲಿ ಕೋಮು ಸಾಮರಸ್ಯವನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಅದರಲ್ಲೂ ಕೋಮು ವಿಚಾರಕ್ಕೆ ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ, ಸಹಬಾಳ್ವೆಯನ್ನು ಬೆಳಗಿಸುವಂತಹ ಕಾರ್ಯ ನಡೆದಿದೆ.

ನವೀಕೃತ ಬದ್ರಿಯಾ ಜುಮ್ಮಾ ಮಸೀದಿಗೆ ಕಾಷ್ಠ ಶಿಲ್ಪ
ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕೆರೆಯ ನವೀಕೃತ ಬದ್ರಿಯಾ ಜುಮ್ಮಾ ಮಸೀದಿಗೆ ಕಾಷ್ಠ ಶಿಲ್ಪವನ್ನು ಹಿಂದೂ ಕುಶಲಕರ್ಮಿ ಅತ್ಯದ್ಭುತವಾಗಿ ಮಾಡುವ ಮೂಲಕ ಸಾಮರಸ್ಯವನ್ನು ಸಾರಿದ್ದಾರೆ. ಮುಸ್ಲಿಮರು ಕೆತ್ತಿದ ಶಿಲ್ಪವನ್ನು ದೇವಳದಲ್ಲಿ ಪ್ರತಿಷ್ಠಾಪನೆ ಮಾಡಬಾರದು ಎಂಬ ಅಭಿಯಾನದ ನಡುವೆಯೂ ಹಿಂದೂ ಕುಶಲಕರ್ಮಿ ಹರೀಶ್ ಆಚಾರ್ಯ ನವೀಕೃತ ಮಸೀದಿಗೆ ಇಂಡೋ-ಇಸ್ಲಾಮಿಕ್ ಮಾದರಿಯಲ್ಲಿ ಅದ್ಭುತವಾಗಿ ಕಾಷ್ಠ ಶಿಲ್ಪ ಮಾಡಿದ್ದಾರೆ.
ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಸೀದಿ ನವೀಕರಣವಾಗಿದೆ. ಮಸೀದಿಯ ಮರದ ಕೆಲಸಕ್ಕೆ ಮಸೀದಿ ಆಡಳಿತ ಮಂಡಳಿ ಉತ್ತಮ ಕುಶಲಕರ್ಮಿಗಳನ್ನು ಹುಡುಕಾಟ ಮಾಡುತ್ತಿದ್ದ ಸಂದರ್ಭದಲ್ಲಿ, ಕಾಪುವಿನ ಮಸೀದಿಯೊಂದಕ್ಕೆ ಕಾಷ್ಠ ಶಿಲ್ಪ ಮಾಡಿದ ಹರೀಶ್ ಆಚಾರ್ಯ ಅವರನ್ನು ಸಂಪರ್ಕಿಸಿ ಮಸೀದಿ ಕಾಷ್ಠ ಶಿಲ್ಪದ ಕೆಲಸವನ್ನು ಮಾಡಿ ಕೊಡುವಂತೆ ಭಿನ್ನಹಿಸಿಕೊಂಡಿದ್ದಾರೆ.

ಇಂಡೋ-ಇಸ್ಲಾಮಿಕ್ ಶೈಲಿಯ ಕಾಷ್ಠ ಶಿಲ್ಪ
ಮಸೀದಿ ಆಡಳಿತ ಮಂಡಳಿಯ ಕೋರಿಕೆಯಂತೆ ಹರೀಶ್ ಆಚಾರ್ಯ ಇದೀಗ ಮಸೀದಿಯಲ್ಲಿ ಒಂದು ಸಾವಿರ ಚದರ ಅಡಿಯಲ್ಲಿ ಆಕರ್ಷಕವಾಗಿ ಮರದ ಕೆತ್ತನೆ ಕೆಲಸ ಮಾಡಿದ್ದಾರೆ.
ಹರೀಶ್ ಈವರೆಗೆ 25ಕ್ಕೂ ಅಧಿಕ ದೇವಸ್ಥಾನಗಳ ಮರದ ಕೆತ್ತನೆಯನ್ನು ಮಾಡಿದ್ದಾರೆ. ಒಂದು ಮಸೀದಿ ಕೆತ್ತನೆ ಮಾಡಿದ ಅನುಭವವೂ ಹರೀಶ್‌ಗೆ ಇದೆ. ಹರೀಶ್ ಇಂಡೋ-ಇಸ್ಲಾಮಿಕ್ ಶೈಲಿಯ ಕಾಷ್ಠ ಶಿಲ್ಪವನ್ನು ಅಧ್ಯಯನ ಮಾಡಿ ಮಾಡಿದ್ದಾರೆ. ತನ್ನ ಸಹೋದರರ ಜೊತೆಗೂಡಿ ಹರೀಶ್ ಮರದ ಕೆತ್ತನೆಯ ಕೆಲಸ ಮಾಡುತ್ತಾರೆ.

ಯಾವ ಸಮುದಾಯ ಅಂತಾ ನೋಡಿ ಕೆಲಸ ಮಾಡಿಲ್ಲ
ಮಸೀದಿಯಲ್ಲಿ ಮಾಡಿದ ಕಾಷ್ಠ ಶಿಲ್ಪದ ಬಗ್ಗೆ ಮಾತನಾಡಿದ ಕುಶಲಕರ್ಮಿ ಹರೀಶ್ ಆಚಾರ್ಯ, "ನಾನು ಯಾವ ಸಮುದಾಯ ಅಂತಾ ನೋಡಿ ಕೆಲಸ ಮಾಡಿಲ್ಲ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಭಾರತೀಯ ಕಾಷ್ಠ ಶಿಲ್ಪಕ್ಕೂ ಇಸ್ಲಾಮಿಕ್ ಶೈಲಿಗೂ ಬಹಳ ವ್ಯತ್ಯಾಸ ಇದೆ. ಕಾಪುವಿನಲ್ಲಿ ಮೊದಲ ಮಸೀದಿಯ ಕೆಲಸ ಮಾಡುವಾಗ ಬಹಳ ಚಾಲೆಂಜಿಂಗ್ ಅಂತಾ ಅನಿಸಿತ್ತು. ಬಳಿಕ ಮುಲ್ಕಿ ಮಸೀದಿ ಕೆಲಸ ಮಾಡಲು ಇಸ್ಲಾಮಿಕ್ ಶೈಲಿಯ ಬಗ್ಗೆ ಅಧ್ಯಯನ ಮಾಡಿ ಕೆಲಸ ಮಾಡಿದ್ದೇನೆ," ಎಂದು ಹೇಳಿದ್ದಾರೆ.

ಕೆಲಸ ನೋಡಲೆಂದೇ ಸಮುದಾಯದ ಯುವಕರು ಮಸೀದಿಯತ್ತ
ಇನ್ನು ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಮಹಮ್ಮದ್ ಮಾತನಾಡಿ, "ಪಕ್ಷಿಕೆರೆಯಲ್ಲಿ ಎಲ್ಲರೂ ಕೋಮುಸಾಮರಸ್ಯ, ಸಹಬಾಳ್ವೆಯೊಂದಿಗೆ ಜೀವನ ಮಾಡುತ್ತಿದ್ದೇವೆ. ಮಸೀದಿ ನವೀಕರಣಕ್ಕಾಗಿ ಕುಶಲಕರ್ಮಿಗಳನ್ನು ಹುಡುಕುತ್ತಿದ್ದಾಗ ಹರೀಶ್ ಅವರ ಸಂಪರ್ಕ ಆಯಿತು. ಹರೀಶ್ ಕೆಲಸ ಸಮುದಾಯದ ಎಲ್ಲರಿಗೂ ಇಷ್ಟವಾಗಿದೆ. ಹರೀಶ್ ಕೆಲಸ ನೋಡಲೆಂದೇ ಸಮುದಾಯದ ಯುವಕರು ಮಸೀದಿಯತ್ತ ಬರುತ್ತಿದ್ದಾರೆ," ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಧರ್ಮಗಳ ನಡುವೆ ಕಿಡಿ ಹಚ್ಚುತ್ತಿರುವ ಈ ಸಂದರ್ಭದಲ್ಲಿ ಮಸೀದಿಯ ಕಾಷ್ಠ ಶಿಲ್ಪವನ್ನು ಹಿಂದೂ ಕುಶಲಕರ್ಮಿ ಮಾಡುವ ಮೂಲಕ ಕೋಮು ದ್ವೇಷದ ಉರಿಯನ್ನು ತಣಿಸುವ ಕೆಲಸ ಮಾಡಿದ್ದಾರೆ.












Click it and Unblock the Notifications