ಅಕ್ರಮ ಮರಳುಗಾರಿಕೆಗೆ ಬೆಂಬಲ: ಕಂಕನಾಡಿ ಇನ್ಸ್‌ಪೆಕ್ಟರ್ ಎಸ್.ಎಚ್ ಭಜಂತ್ರಿ ಅಮಾನತು
ಮಂಗಳೂರು, ಜನವರಿ 19: ಕರ್ತವ್ಯ ಲೋಪ, ಹಿರಿಯ ಅಧಿಕಾರಿಗಳೊಂದಿಗೆ ಉಡಾಫೆಯ ವರ್ತನೆ, ಅಕ್ರಮ ಮರಳುಗಾರಿಕೆಯೊಂದಿಗೆ ಶಾಮೀಲು, ಸ್ಥಳೀಯರಿಗೆ ಕಿರಿಕಿರಿ ಆರೋಪದ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆ ಇನ್ಸ್‌ಪೆಕ್ಟರ್ ಎಸ್.ಎಚ್ ಭಜಂತ್ರಿ ಅವರನ್ನು ನಗರ ಪೊಲೀಸ್ ಕಮಿಷನರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ನಗರದ ಜೆಪ್ಪಿನ ಮೊಗರು ಬಳಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ದಾಳಿ ನಡೆಸಲು ಎಸಿಪಿ ಧನ್ಯಾ ನಾಯಕ್ ಅವರು ಇನ್ಸ್‌ಪೆಕ್ಟರ್ ಭಜಂತ್ರಿಗೆ ಸೂಚಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಜರಗಿಸದೆ ನಿರ್ಲಕ್ಷಿಸಿದ್ದಲ್ಲೇ, ಮೇಲಾಧಿಕಾರಿಗಳೊಂದಿಗೆ ಉಡಾಫೆಯಿಂದ ವರ್ತಿಸಿದ್ದರು ಎಂದು ಎಸಿಪಿಯವರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು.

ಅಲ್ಲದೆ ಭಜಂತ್ರಿಯವರು ತಮ್ಮ ಅಪಾರ್ಟ್‌ಮೆಂಟ್‌ನ ಇತರರೊಂದಿಗೆ ಕಿರಿಕಿರಿ ಆಗುವಂತೆ ವರ್ತಿಸುತ್ತಿದ್ದಾರೆಂದು ಅವರ ಮೇಲೆ ಆರೋಪ ಕೇಳಿ ಬಂದಿದೆ. ಆದ್ದರಿಂದ ಮರಳು ಮಾಫಿಯಾದೊಂದಿಗೆ ಶಾಮೀಲು, ಹಿರಿಯ ಅಧಿಕಾರಿಗಳ ಆದೇಶ ನಿರ್ಲಕ್ಷ್ಯ, ದೂರುದಾರರ ನಿರ್ಲಕ್ಷ್ಯ, ಅಪಾರ್ಟ್‌ಮೆಂಟ್‌ನ ಸಹವರ್ತಿಗಳೊಂದಿಗೆ ಅಗೌರವದಿಂದ ವರ್ತಿಸಿರುವ ಬಗ್ಗೆ ಖುದ್ದು ಎಸಿಪಿ ಧನ್ಯಾ ನಾಯಕ್ ಅವರೇ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು.
ಈ ಕುರಿತಂತೆ ಪೊಲೀಸ್ ಕಮಿಷನರ್ ವಿವರಣೆ ಕೇಳಿದಾಗಲೂ ಅವರೊಂದಿಗೂ ಭಜಂತ್ರಿಯವರು ಉಡಾಫೆಯಿಂದ ವರ್ತಿಸಿದ್ದಾರೆಂದು ತಿಳಿದು ಬಂದಿದೆ. ಆದ್ದರಿಂದ ಕಮಿಷನರ್ ಅನುಪಮ್ ಅಗ್ರವಾಲ್ ಅವರನ್ನು ಭಜಂತ್ರಿಯವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮಾದಕ ವಸ್ತು ಸೇವನೆ: ನಾಲ್ವರ ಬಂಧನ
ಬಸ್ ನಿಲ್ದಾಣ ಸೇರಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಜೋಕಟ್ಟೆ ಕ್ರಾಸಿನ ಬಳಿ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನದ ಮೇಲೆ ಗುರುದೀಪ್ ಸಿಂಗ್ (23) ಮತ್ತು ರಾಹುಲ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದ್ದು, ಆರೋಪಿಗಳ ವಿರುದ್ಧ ಪ್ರಕರಣದ ದಾಖಲಾಗಿದೆ.
ಮಂಗಳೂರು ನಗರದ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣದ ಬಳಿ ವ್ಯಕ್ತಿಯೊಬ್ಬ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಆರೋಪದ ಮೇಲೆ ಕೆ.ಪಿ. ಹೈದರ್ ಆಲಿ ಮೊಹಮ್ಮದ್ (53) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಳಚ್ಚಿಲ್ ಬಳಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಮನಾಜ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications