ಕದ್ರಿ ಪೊಲೀಸ್ ಠಾಣೆಯಲ್ಲಿ ವಕೀಲರು, ಪೊಲೀಸರ ಜಟಾಪಟಿ
ಮಂಗಳೂರು, ಆಗಸ್ಟ್ 1 : ವಿಚಾರಣೆಗೆ ಬಂದ ವ್ಯಕ್ತಿಯ ಜೊತೆ ಬಂದಿದ್ದ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕದ್ರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ.
ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಶುಕ್ರವಾರ ಸಂಜೆ ಠಾಣೆಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ಪೊಲೀಸರು ಮತ್ತು ವಕೀಲರಿಂದ ಆರೋಪ ಮತ್ತು ಪ್ರತ್ಯಾರೋಪ ಕೇಳಿ ಬಂದಿತು.

ಘಟನೆ ವಿವರ : ದೂರಿನ ವಿಚಾರಣೆಗಾಗಿ ಸಂದೀಪ್ ಅವರು ಕದ್ರಿ ಪೊಲೀಸ್ ಠಾಣೆಗೆ ಶುಕ್ರವಾರ ಮಧ್ಯಾಹ್ನ ಬಂದಿದ್ದರು. ಅವರ ಜೊತೆ ಮಂಗಳೂರಿನ ವಕೀಲ ಉತ್ತಮ್ ಸಹ ಬಂದಿದ್ದರು. ಈಗ ಊಟದ ಸಮಯ ಸಂಜೆ ಬನ್ನಿ ಠಾಣೆಯ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಅವರು ವಕೀಲರಿಗೆ ತಿಳಿಸಿದಾಗ ಮಾತಿನ ಚಕಮಕಿ ನಡೆದಿದೆ.
ಆರೋಪ-ಪ್ರತ್ಯಾರೋಪ : ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ. 'ಸಂದೀಪ್ ಅವರನ್ನು ವಿಚಾರಣೆಗಾಗಿ ನಾನು ಠಾಣೆಗೆ ಬರ ಹೇಳಿದ್ದೆ. ಮಧ್ಯಾಹ್ನ ಠಾಣೆಗೆ ಬಂದಾಗ ವಕೀಲ ಉತ್ತಮ್ ಜತೆಗಿದ್ದರು. ವಿಚಾರಣೆಯ ಸಂದರ್ಭ ಉತ್ತಮ್ ಅವರು ಸಂದೀಪ್ ಅವರನ್ನು ಮಾತನಾಡಲು ಬಿಡುತ್ತಿರಲಿಲ್ಲ' ಎಂಬುದು ಪೊಲೀಸರ ಆರೋಪ.

'ಈಗ ಊಟದ ಸಮಯ, ಸಂಜೆ ಬನ್ನಿ ಎಂದಾಗ ಅದು ಸಾಧ್ಯವಿಲ್ಲ, ಈಗಲೇ ವಿಚಾರಣೆ ನಡೆಸಬೇಕೆಂದು ಉತ್ತಮ್ ಪಟ್ಟು ಹಿಡಿದರು. ನಾನು ಅಲ್ಲಿಂದ ಹೊರಡಲು ಯತ್ನಿಸಿದಾಗ ಅಡ್ಡ ನಿಂತು ತಡೆದು, ನನ್ನ ಮೇಲೆ ಹಲ್ಲೆ ಮಾಡಿದರು' ಎಂದು ಇನ್ಸ್‌ಪೆಕ್ಟರ್ ನಾಗರಾಜ್ ಆರೋಪಿಸಿದ್ದಾರೆ.

'ಪೊಲೀಸರು ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ವಕೀಲ ಉತ್ತಮ್‌ರನ್ನು ಪೊಲೀಸರು ಹೀನಾಯವಾಗಿ ನಡೆಸಿಕೊಂಡಿದ್ದು, ಅವರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿ ಸೆಲ್‌ನಲ್ಲಿ ಕೂರಿಸಿದ್ದಾರೆ ಎಂಬುದು ವಕೀಲರ ಆರೋಪ.
ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ ಅವರ ನೇತೃತ್ವದಲ್ಲಿ ಠಾಣೆಯ ಮುಂಭಾಗ ಪ್ರತಿಭಟನೆ ನಡೆಯಿತು. ಅಂತಿಮವಾಗಿ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಅವರನ್ನು ಅಮಾನತು ಮಾಡಲಾಯಿತು.












Click it and Unblock the Notifications