ಚಾರ್ಮಾಡಿ ಘಾಟ್ ರಸ್ತೆಗೆ ತುರ್ತು ದುರಸ್ತಿ ಭಾಗ್ಯ
ಮಂಗಳೂರು, ಜ. 14 : ಶಿರಾಡಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡ ನಂತರ ಚಾರ್ಮಾಡಿ ಘಾಟ್‌ಅನ್ನು ಹೆಚ್ಚಿನ ವಾಹನಗಳು ಅವಲಂಬಿಸಿವೆ. ಆದರೆ, ಚಾರ್ಮಾಡಿಯಲ್ಲಿ ರಸ್ತೆಗಳು ಹದಗೆಟ್ಟಿವೆ. ಜ.31ರೊಳಗೆ ರಸ್ತೆಯನ್ನು ದುರಸ್ತಿ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಾರ್ಮಾಡಿ ಘಾಟ್‌ನಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದರೂ ರಸ್ತೆಗಳು ಹಾಳಾಗಿವೆ. ವಾಹನ ಸಂಚಾರಕ್ಕೆ ಇದರಿಂದ ಅಡ್ಡಿ ಉಂಟಾಗುತ್ತಿದೆ. ಆದ್ದರಿಂದ, ರಸ್ತೆಯ ಇಕ್ಕೆಲಗಳಲ್ಲಿ ಹಾಕಿರುವ ಮಣ್ಣಿನ ಮೇಲೆ ಕೆಂಪು ಕಲ್ಲಿನ ಹಾಸನ್ನು ಹಾಕಿ ಗಟ್ಟಿಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಜ.31ರೊಳಗೆ ದುರಸ್ತಿ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದ್ದಾರೆ. [ಶಿರಾಡಿ ಬಂದ್, ಚಾರ್ಮಾಡಿಯಲ್ಲಿ ಟ್ರಾಫಿಕ್ ಜಾಮ್]
ಮಾಣಿ-ಮೈಸೂರು ರಸ್ತೆಯಲ್ಲಿ ಮಲ್ಟಿ ಆಕ್ಸಿಲ್ ಲಾರಿಗಳು ಸಂಚರಿಸುತ್ತಿವೆ. ಇದರಿಂದ ಸೂಪರ್ ಡೀಲಕ್ಸ್ ಹಾಗೂ ವೋಲ್ವೊ ಬಸ್ಸುಗಳ ಸಂಚಾರಕ್ಕೆ ತೊಡಕು ಉಂಟಾಗುವ ಅಪಾಯವಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು. ಈ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಮಲ್ಟಿ ಆಕ್ಸಿಲ್ ಟ್ರಕ್‌ಗಳ ಸಂಚಾರ ನಿಷೇಧಿಸುವುದು ಉತ್ತಮ ಎಂದು ಸಲಹೆ ನೀಡಿದರು. [ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು]
ಚಾರ್ಮಾಡಿ ಘಾಟ್‌ನಲ್ಲಿ ಕೆಲವು ಕಡೆ ರಸ್ತೆ ಪಕ್ಕದ ಮೋರಿಗಳು ಕುಸಿದಿವೆ. ಈ ಪ್ರದೇಶಗಳಲ್ಲಿ ವಾಹನಗಳು ಪ್ರಪಾತಕ್ಕೆ ಬೀಳುವ ಅಪಾಯವಿದೆ. ಮೋರಿಗಳನ್ನು ದುರಸ್ತಿಪಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ತಿಳಿಸಿದರು.
ಸಿಬ್ಬಂದಿ ನೇಮಿಸಲಾಗಿದೆ : ಚಾರ್ಮಾಡಿ ಘಾಟ್‌ನಲ್ಲಿ ವಾಹನಗಳ ಸುಗಮ ಸಂಚಾರದ ವ್ಯವಸ್ಥೆ ನೋಡಿಕೊಳ್ಳಲು. ಬೆಳ್ತಂಗಡಿ ಪೊಲೀಸ್ ಠಾಣೆಯ 5 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ವಿವಿಧ ಪಾಳಿಗಳಲ್ಲಿ ಇವರು ಕೆಲಸ ನಿರ್ವಹಿಸಲಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಪೊಲೀಸ್ ಇಲಾಖೆ ವತಿಯಿಂದ ಚಾರ್ಮಾಡಿಯಲ್ಲಿ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸಲಾಗುತ್ತದೆ. ಘಾಟ್‌ನಲ್ಲಿರುವ 11 ಹಿಮ್ಮುರಿ ತಿರುವುಗಳಲ್ಲಿ ನಿಮ್ನ ಮಸೂರಗಳನ್ನು (ಕಾನ್‌ವೆಕ್ಸ್ ಲೆನ್ಸ್) ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ಘಾಟ್‌ನಲ್ಲಿ ಮೂಲಸೌಕರ್ಯ ಕಲ್ಪಿಸುವುದಕ್ಕೆ 5 ಲಕ್ಷ ಬಿಡುಗಡೆ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.












Click it and Unblock the Notifications