ಮಂಗಳೂರಲ್ಲಿ ಹನಿಟ್ರಾಪ್ ಪ್ರಕರಣ 6 ಜನರ ಬಂಧನ
ಮಂಗಳೂರು, ಮಾರ್ಚ್ 23: ನಿವೃತ್ತ ಸರಕಾರಿ ಅಧಿಕಾರಿಯೊಬ್ಬರನ್ನು ಹನಿಟ್ರಾಪ್ ಜಾಲದಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಸಾಜ್ ನೆಪದಲ್ಲಿ ನಿವೃತ್ತ ಅಧಿಕಾರಿಯನ್ನು ಹನಿಟ್ರಾಪ್ ಮಾಡಿದ ಆರೋಪದ ಮೇಲೆ 3 ಮಂದಿ ಯುವತಿಯರು ಸೇರಿದಂತೆ ಒಟ್ಟು 6 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು ಬೆನ್ನು ನೋವಿನಿಂದ ಬಳಲುತ್ತಿದ್ದು ನೋವು ನಿವಾರಣೆಗೆ ಮಸಾಜ್ ಮಾಡುವ ನೆಪದಲ್ಲಿ ನಗರದ ಮೇರಿಹಿಲ್ ನ ಮನೆಯೊಂದಕ್ಕೆ ಬರಲು ಹೇಳಲಾಗಿತ್ತು. ನಿವೃತ್ತ ಅಧಿಕಾರಿ ಮನೆಗೆ ಹೋದ ಕೂಡಲೇ 3 ಮಂದಿ ಅಪರಿಚಿತ ಯುವಕರು ಏಕಾಏಕಿ ಮನೆಗೆ ಪ್ರವೇಶಿಸಿ ಬೆದರಿಸಿದ್ದಾರೆ ಎಂದು ಹೇಳಲಾಗಿದೆ. ನಂತರ ಅವರನ್ನು ಬಲತ್ಕಾರವಾಗಿ ನಗ್ನಗೊಳಿಸಿ ಯುವತಿಯರ ಜೊತೆ ವೀಡಿಯೋ ಹಾಗೂ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಕೂಡಲೇ 3 ಲಕ್ಷ ರೂಪಾಯಿ ಹಣ ನೀಡದಿದ್ದರೆ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.

ಯುವಕರ ಬೆದರಿಕೆ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿ 3 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ನಂತರ ಈ ಘಟನೆಯ ಕುರಿತು ಸಂತ್ರಸ್ತ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಸಿದ ಮಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಯುವತಿಯರು ಸೇರಿದಂತೆ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಮಂಗಳೂರಿನ ಜಿಲ್ಲೆಯ ಮೂಡಗೆರೆ ನಿವಾಸಿ ರವಿ ಗೌಡ (42), ಮಂಗಳೂರಿನ ಬಿಜೈ ನಿವಾಸಿ ಪ್ರೀತೇಶ್ (36), ಮಂಗಳೂರಿನ ಪಡೀಲ್ ನಿವಾಸಿ ರಮೇಶ್ (35) ಎಂದು ಗುರುತಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಕೃತ್ಯದಲ್ಲಿ ಭಾಗಿಯಾದ 3 ಯುವತಿರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಪೈಕಿ ರವಿ ಗೌಡ ಈ ಹಿಂದೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಹಾಗೂ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಆರೋಪಿಗಳು ಈ ಹಿಂದೆಯೂ ಹಲವಾರು ವ್ಯಕ್ತಿಗಳನ್ನು ಹನಿಟ್ರಾಪ್ ನಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಂಧಿತ ಆರೋಪಿಗಳಿಂದ 1.5 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications