ತುಂಬಾ ಖುಷಿಯಾದಾಗ ಗಾಳಿಯಲ್ಲಿ ಗುಂಡು ಹಾರಿಸುವ ಸಂಪ್ರದಾಯವಿದೆ: ಸಚಿವ ಆರಗ ಜ್ಞಾನೇಂದ್ರ

ಮಂಗಳೂರು, ಆಗಸ್ಟ್ 20: ಯಾದಗಿರಿಯಲ್ಲಿ ಕೇಂದ್ರ ಸರ್ಕಾರದ ಜನಾಶೀರ್ವಾದ ಯಾತ್ರೆಯ ವೇಳೆ ಕೇಂದ್ರ ಸಚಿವ ಭಗವಂತ ಖೂಬಾರನ್ನು ನಾಡಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಮಾಡಿರುವ ಬಗ್ಗೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗಿದ್ದರೂ, ಗೃಹ ಸಚಿವ ಆರಗ ಜ್ಞಾನೇಂದ್ರ ಮಾತ್ರ ಗುಂಡು ಹಾರಿಸಿದವರ ಪರ ಬ್ಯಾಟಿಂಗ್ ಮಾಡಿದ್ದಾರೆ.

"ಗಾಳಿಯಲ್ಲಿ ಗುಂಡು ಹಾರಿಸುವುದು ಸಂಪ್ರದಾಯ, ಅದೇ ಸಂಪ್ರದಾಯವನ್ನು ಅಲ್ಲೂ ಪಾಲಿಸಿರಬಹುದು," ಎಂದು ಮಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳೂರಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದರ ಬಗ್ಗೆ ಹೇಳಿಕೆ ನೀಡಿದ್ದಾರೆ.

Home Minister Araga Jnanendra Defended Gun Firing Welcome To Union Minister Bhagwanth Khuba

"ಮಲೆನಾಡು, ಕೊಡಗು ಭಾಗದಲ್ಲಿ ತುಂಬಾ ಖುಷಿಯಾದಾಗ, ವಿಜಯೋತ್ಸವ ಆಚರಿಸುವಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಅದೇ ರೀತಿ ಯಾದಗಿರಿಯಲ್ಲೂ ಗುಂಡು ಹಾರಿಸಿರಬಹುದು. ದಸರಾ ಮತ್ತಿತರ ಸಂದರ್ಭದಲ್ಲೂ ಸಂಪ್ರದಾಯದ ಪ್ರಕಾರ ಗಾಳಿಯಲ್ಲಿ ಗುಂಡು ಹಾರಿಸಲಾಗುತ್ತದೆ. ಯಾರದರೂ ಮರಣ ಹೊಂದಿದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೆ ಸಾರ್ವಜನಿಕವಾಗಿ ಗುಂಡು ಹಾರಿಸಿರುವುದು ತಪ್ಪು. ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ. ಅವರು ಮುಂದಿನ ತನಿಖೆ ಮಾಡುತ್ತಾರೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಆಗಸ್ಟ್ 18 ರಂದು ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ಮಾಡಿದ್ದರು. ಈ ವೇಳೆ ಗುಂಡಿನ ಸದ್ದು ಮೊಳಗಿತ್ತು. ಕೇಂದ್ರ ಸಚಿವ ಭಗವಂತ ಖೂಬಾಗೆ ನಾಡ ಬಂದೂಕಿನಿಂದ ಸ್ವಾಗತಿಸಲಾಗಿದೆ. ಸುಮಾರು ನಾಲ್ಕಕ್ಕೂ ಹೆಚ್ಚು ಜನ ಭಗವಂತ ಖೂಬಾ ಆಗಮಿಸುವ ವೇಳೆ ನಾಡ ಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದರ ಬಗ್ಗೆ ಭಾರೀ ವಿರೋಧ ವ್ಯಕ್ತವಾಯಿತು. ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ ನಾಲ್ವರ ಮೇಲೆ ಎಫ್ಐಆರ್ ದಾಖಲಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿತ್ತು.

Home Minister Araga Jnanendra Defended Gun Firing Welcome To Union Minister Bhagwanth Khuba

ಇದಾದ ಬಳಿಕವೂ ಕೆಲ ಬಿಜೆಪಿ ನಾಯಕರು ಈ ವಿಚಾರವನ್ನು ಸಮರ್ಥಿಸಿಕೊಂಡು ಬರುತ್ತಿದ್ದಾರೆ. ಕೇಸ್ ದಾಖಲಿಸುವುದಕ್ಕೂ ಅಷ್ಟಾಗಿ ಮುತುವರ್ಜಿ ತೋರದ ಗೃಹ ಸಚಿವ ಆರಗ ಜ್ಞಾನೇಂದ್ರ ವರ್ತನೆ ಈಗ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಸಂಪ್ರದಾಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದಾ ಅಂತಾ ವಿರೋಧ ಪಕ್ಷಗಳು ಪ್ರಶ್ನೆ ಮಾಡಿದೆ.

ಬಿಜೆಪಿ ಹೈಕಮಾಂಡ್ ತನ್ನ ನೂತನ ಸಚಿವರಿಗೆ ಜನಾಶೀರ್ವಾದ ಯಾತ್ರೆ ಮೂಲಕ ಮೊದಲ ಟಾಸ್ಕ್ ನೀಡಿತ್ತು. ಕೇಂದ್ರ ಸರ್ಕಾರದ ನೂತನ ಸಚಿವರಿಗೆ ದೇಶಾದ್ಯಂತ ಪ್ರವಾಸ ಕೈಗೊಂಡು, ಸರ್ಕಾರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಸ್ಟ್ 16 ರಿಂದ ಅಗಸ್ಟ್ 19ರವರೆಗೆ ನೂತನ ಕೇಂದ್ರ ಸಚಿವರುಗಳು ಯಾತ್ರೆ ಕೈಗೊಂಡು ಸಭೆ, ಸಂವಾದಗಳನ್ನು ಮಾಡಿದ್ದರು. ಆದರೆ ಭಗವಂತ ಖೂಬಾ ಬೆಂಬಲಿಗರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಘಟನೆ ಗಂಭೀರತೆ ಪಡೆಯುತ್ತಿದ್ದಂತೆಯೇ ಎಚ್ಚೆತ್ತಿರುವ ಯಾದಗಿರಿ ಜಿಲ್ಲಾ ಪೊಲೀಸರು, ಯಾದಗಿರಿ ಜಿಲ್ಲೆಯ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಯಾವ ಉದ್ದೇಶಕ್ಕೆ ಗನ್ ಪರವಾನಗಿ ಪಡೆಯಲಾಗಿದೆಯೋ ಆ ಉದ್ದೇಶಕ್ಕೆ ಮಾತ್ರ ಗನ್ ಬಳಕೆ ಮಾಡಿಕೊಳ್ಳಬೇಕು. ಗನ್‌ಗಳ ದುರ್ಬಳಕೆ ಮಾಡಿದರೆ ಗನ್ ಪರವಾನಗಿ ರದ್ದು ಮಾಡಲಾಗುತ್ತದೆ. ಭಾರತೀಯ ಶಸ್ತ್ರಾಸ್ತ್ರ ಅಧಿನಿಯಮ ಸೆಕ್ಷನ್ 25ರಡಿ ಎಫ್ಐಆರ್ ದಾಖಲಿಸಿ ಬಂಧನ ಮಾಡಲಾಗುತ್ತದೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Home Minister Araga Jnanendra Defended Gun Firing Welcome To Union Minister Bhagwanth Khuba

ಬೆಳೆ ರಕ್ಷಣೆಗೆ ತೆಗೆದುಕೊಂಡು ಹೋದರೆ ಅವುಗಳಿಗೆ ಮಾತ್ರ ತೆಗೆದುಕೊಂಡು ಹೋಗಬೇಕು. ಜಾತ್ರೆ, ಯಾರನ್ನಾದರು ಸ್ವಾಗತ ಮಾಡಲು ಗನ್ ದುರ್ಬಳಕೆ ಮಾಡಿದರೆ ಗನ್‌ಗಳ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ದುರ್ಬಳಕೆ ಮಾಡಿಕೊಂಡರೆ ಎಫ್ಐಆರ್ ದಾಖಲಿಸಿ ಅರೆಸ್ಟ್ ಮಾಡಿ ಗನ್‌ಗಳ ಜಪ್ತಿ ಮಾಡಲಾಗುತ್ತದೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ಇನ್ನು ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೇಂದ್ರ ಸಚಿವರ ಸ್ವಾಗತ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರತೆಗೆ ನಿಯೋಜನೆಯಾಗಿದ್ದ, ವಿರೇಶ್, ಸಂತೋಷ, ಮೆಹಬೂಬ್ ಎಂಬ ಮೂವರು ಪೊಲೀಸ್ ಕಾನ್ಸ್‌ಟೆಬಲ್‌ಗಳನ್ನು ಅಮಾನತು ಮಾಡಲಾಗಿತ್ತು.

ಸಾರ್ವಜನಿಕವಾಗಿ ನಾಡ ಬಂದೂಕು ಹಿಡಿದು ಓಡಾಡುತ್ತಿದ್ದರೂ, ಅವರನ್ನು ತಡೆಯುವ ಪ್ರಯತ್ನ ಪೊಲೀಸರು ವಿಫಲರಾದ ಹಿನ್ನಲೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್‌ಗಳನ್ನು ಅಮಾನತು ಮಾಡಲಾಗಿತ್ತು. ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದರೂ, ಕೇವಲ ಪೊಲೀಸ್ ಕಾನ್ಸ್‌ಟೆಬಲ್‌ಗಳಿಗೆ ಅಮಾನತು ಶಿಕ್ಷೆ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+