24 ಗಂಟೆಗಳಲ್ಲಿ ಭಾರೀ ಮಳೆ, ಕರಾವಳಿಯಲ್ಲಿ ಹೈ ಅಲರ್ಟ್
ಮಂಗಳೂರು, ಆಗಸ್ಟ್ 14 : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ತುರ್ತು ಮುನ್ನೆಚ್ಚರಿಕೆ ಸಂದೇಶ ರವಾನಿಸಿರುವ ಇಲಾಖೆ ಮೀನುಗಾರರು ಸಮುದ್ರ ಅಥವಾ ನದಿಗಳಲ್ಲಿ ಮೀನುಗಾರಿಕೆಗೆ ತೆರಳಬಾರದು ಎಂದು ಎಚ್ಚರಿಸಿದೆ.
ತಗ್ಗು ಪ್ರದೇಶ ಮತ್ತು ನದಿ ತೀರದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಮಕ್ಕಳು ನೀರು ತುಂಬಿರುವ ತಗ್ಗು ಪ್ರದೇಶ ಅಥವಾ ನದಿ ತೀರಕ್ಕೆ ತೆರಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಕರೆ ನೀಡಿದ್ದಾರೆ.
ಸಾರ್ವಜನಿಕರಿಗೆ ಮಳೆಯಿಂದ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 1077 ಗೆ ಕರೆಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಮಳೆಯಿಂದಾಗಿ ಮಂಗಳೂರಿನ ನದಿ ಪಾತ್ರದ 70 ಮನೆಗಳು ಜಲಾವೃತಗೊಂಡಿವೆ. ನಗರದ ಪಾಂಡೇಶ್ವರದ ಹೊಯಿಗೆ ಬೈಲ್ ಬಜಾರ್ ನ ತಮಿಳು ಕಾಲೋನಿಯ 70 ಮನೆಗಳಿಗೆ ನೇತ್ರಾವತಿ ನದಿ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆಯಾಗಿದೆ. ವಾಡಿಕೆಯಲ್ಲಿ ಜಿಲ್ಲೆಯಲ್ಲಿ 2779 ಮಿ.ಮಿ ಮಳೆಯ ಅಗಬೇಕು. ಆದರೆ, ಈ ಬಾರಿ ವಾಡಿಕೆ ಗಿಂತ ಹೆಚ್ಚು 3564 ಮಿ.ಮಿ ಮಳೆಯಾಗಿದೆ. ಮಳೆಗೆ ಜಿಲ್ಲೆಯಲ್ಲಿ ಈ ವರೆಗೆ 11 ಜನರು ಬಲಿಯಾಗಿದ್ದು 12 ಜಾನುವಾರುಗಳು ಮೃತ ಪಟ್ಟಿವೆ . 1292 ಮನೆಗಳಿಗೆ ಹಾನಿಯಾಗಿದೆ.
ಈ ನಡುವೆ ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಶಿರಾಡಿ ಘಾಟ್ ಹಾಗೂ ಸಂಪಾಜೆ ಘಾಟ್ ನಲ್ಲಿ ನಿರಂತರ ಗುಡ್ಡ ಕುಸಿತ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಳೆ ಕಡಿಮೆ ಯಾಗುವ ವರೆಗೆ ಶಿರಾಡಿ, ಸಂಪಾಜೆ ಘಾಟ್ ಬದಲು ಚಾರ್ಮಾಡಿ ಘಾಟ್ ರಸ್ತೆ ಬಳಸುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications