ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ
ಮಂಗಳೂರು, ಮಾರ್ಚ್ 26: ಬಜ್ಪೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಪ್ರವೀಣ್ ಎಂಬಾತನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ, ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಗೆ ಹಾಜರುಪಡಿಸುವಾಗ ಕೋರ್ಟ್ ನ ನಾಲ್ಕನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಗಾಯಗೊಂಡ ಪ್ರವೀಣ್‌ನನ್ನು ತಕ್ಷಣ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಂಜೇಶ್ವರ ನಿವಾಸಿಯಾಗಿದ್ದ ಪ್ರವೀಣ್ ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮಹಿಳೆ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದ ಬಗ್ಗೆ ಈ ಹಿಂದೆಯೂ ಈತನ ವಿರುದ್ಧ ಆರೋಪ ಕೇಳಿಬಂದಿತ್ತು.[ಪುತ್ತೂರು: ಕೃಷ್ಣ ಮೃಗ ಚರ್ಮ ಸಾಗಿಸುತ್ತಿದ್ದ ಇಬ್ಬರ ಬಂಧನ]

ಈತನ ವಿರುದ್ಧ ಕ್ರಮಕ್ಕಾಗಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆಗ ಪ್ರವೀಣನಿಗೆ ಪೊಲೀಸ್ ಅಧಿಕಾರಿಗಳು ಬುದ್ಧಿಮಾತು ಹೇಳಿ, ಎಚ್ಚರಿಕೆ ನೀಡಿದ್ದರು. ಗುರುವಾರ ರಾತ್ರಿ ಕೂಡ ಮಹಿಳೆ ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದ. ಅದನ್ನು ನೋಡಿದ ಆಕೆಯ ಪುತ್ರಿ ತಾಯಿಗೆ ಮಾಹಿತಿ ನೀಡಿದ್ದಳು.
ಶನಿವಾರ ಈ ಬಗ್ಗೆ ಮಹಿಳೆ ಬಜ್ಪೆ ಠಾಣಾಧಿಕಾರಿಗೆ ದೂರು ನೀಡಿದ್ದರು. ಆರೋಪಿಯು ಬಾಲಕಿಗೂ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಪೇದೆ ಪ್ರವೀಣ್‌ನ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.[ಪುತ್ತೂರು: ಗರ್ಭಿಣಿ ಸಾವು ಪ್ರಕರಣ, ಆಸ್ಪತ್ರೆಗೆ 17 ಲಕ್ಷ ರು ದಂಡ]
ಪ್ರವೀಣ್ ನನ್ನು ಶನಿವಾರ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆರೋಪಿಯನ್ನು 3ನೇ ಮಹಡಿಯಲ್ಲಿರುವ ಎರಡನೇ ಹೆಚ್ಚುವರಿ ಕೋರ್ಟ್ ಗೆ ಹಾಜರುಪಡಿಸಬೇಕಿತ್ತು. ಆದರೆ 3ನೇ ಮಹಡಿಯಲ್ಲಿ ಲಿಫ್ಟ್ ನಿಲ್ಲದೆ ನಾಲ್ಕನೆ ಮಹಡಿಗೆ ಬಂದಿತ್ತು. ಲಿಫ್ಟ್ ನಿಂದ ಹೊರಬಂದ ಪ್ರವೀಣ್ ಏಕಾಏಕಿ ಮೆಟ್ಟಲಿನಿಂದ ಜಿಗಿದಿದ್ದ.












Click it and Unblock the Notifications