ಶಿವಾಜಿ ವಂಶಸ್ಥರಿಂದ ತುಳುನಾಡಿನಲ್ಲಿ ಗೋಂದೊಳು ಪೂಜೆ: ಕರಾವಳಿಯಲ್ಲಿ ಮರಾಠಿಗರ ವಿಶೇಷ ಆರಾಧನೆ
ಮಂಗಳೂರು, ಜನವರಿ 31: ತುಳುನಾಡಿನ ವಿಶೇಷ ಆಚರಣೆಯಲ್ಲಿ ಗೋಂದೋಳು ಪೂಜೆಯೂ ಒಂದು. ಮಹಾರಾಷ್ಟ್ರದಿಂದ ಕರಾವಳಿಗೆ ವಲಸೆ ಬಂದ ಮರಾಠಿ ನಾಯ್ಕ್ ಸಮಾಜ ಈ ಗೋಂದೋಳು ಪೂಜೆಯನ್ನು ನೆರವೇರಿಸುತ್ತಾರೆ. ಹೆಚ್ಚಾಗಿ ದೈವಾರಾಧನೆ ನಡೆಯುವ ಕಡೆಯಲ್ಲಿ ಈ ಗೋಂದೋಳು ಪೂಜೆ ನೆರವೇರುತ್ತಿದ್ದು, ಅಸುರ ಮತ್ತು ದೇವ ಕ್ರೀಯೆಯಲ್ಲಿ ಈ ಪೂಜೆ ನೆರವೇರುತ್ತದೆ.
ಶಿವಾಜಿ ಮಹಾರಾಜ್ ಅನುವಂಶಸ್ಥರಾದ ಮರಾಠಿ ನಾಯ್ಕ್ ಹಿಂದೆ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನಾಂಗವಾಗಿದ್ದು, ಜೀವನಕ್ಕಾಗಿ ಕೃಷಿ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಭತ್ತ ಬೇಸಾಯ ಸೇರಿದಂತೆ ವಿವಿಧ ಕೃಷಿ ಮಾಡುತ್ತಿದ್ದ ಸಂದರ್ಭದಲ್ಲಿ ಕೃಷಿಗೆ ಪ್ರಾಣಿಗಳ ಕಾಟ ಬಹಳಷ್ಟು ಕಾಡುತ್ತಿತ್ತು. ಈ ಸಂಕಷ್ಟದಿಂದ ಪಾರು ಮಾಡಲು ಭೈರವನ ಮತ್ತು ಮಹಾಮ್ಮಾಯಿ ದೇವಿಯ ಮೊರೆ ಹೋಗಿದ್ದರು.

ಬೆಳೆಗೆ ತೊಂದರೆ ಕೊಡುತ್ತಿದ್ದ ಹಂದಿಗಳನ್ನು ಕೊಂದು ಅದನ್ನು ಅಡುಗೆ ಮಾಡಿ ತಿನ್ನುವ ಮೊದಲು ಭೈರವನಿಗೆ ಮತ್ತು ದೇವಿಗೆ ಅರ್ಪಿಸುತ್ತಿದ್ದರು. ಗೋಂದೋಳು ಪೂಜೆಯ ನರ್ತಕರು ವೃತ್ತಾಕಾರ ಮಾಡಿ ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆ ಮಾಡಿ ದೇವಿಯನ್ನು ವಿಶೇಷ ರೀತಿಯಲ್ಲಿ ಪ್ರಾರ್ಥಿಸುತ್ತಾರೆ. 9 ಸುತ್ತುಗಳ ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆ ಸೇವೆ ನೆರವೇರುತ್ತಿದ್ದು, ಬಳಿಕ ದೇವಿಗೆ ಪೂಜೆ ನೆರವೇರಿಸಿ ಬಂದ ಭಕ್ತಾಧಿಗಳಿಗೆಲ್ಲಾ ಪ್ರಸಾದವನ್ನು ಹಂಚಲಾಗುತ್ತಿತ್ತು.
ಈ ಸೇವೆ ನೆರವೇರಿಸಿದ ಬಳಿಕ ಕೃಷಿಗೆ ತೊಂದರೆ ಕೊಡುತ್ತಿದ್ದ ಪ್ರಾಣಿಗಳ ಸಮಸ್ಯೆ ಕಡಿಮೆಯಾಗಿತ್ತಂತೆ. ಅಲ್ಲದೆ ಈ ಪೂಜೆಯ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆದರೆ ಕಾಲು ನೋವು, ಮಾರಿ ಸೇರಿದಂತೆ ಹಲವು ಸಮಸ್ಯೆಗಳು ದೂರವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಪೂಜೆಗೆ ಆಗಮಿಸುವ ಭಕ್ತರು ಗೋಂದೋಳು ಪೂಜೆಯ ನರ್ತನದ ಸೇವೆ ಮಾಡುವವರ ಕೈಯಲ್ಲಿರುವ ದೀವಟಿಕೆಗೆ ಎಣ್ಣೆ ಮತ್ತು ಇತರ ವಸ್ತುಗಳನ್ನು ನೀಡುವ ಹರಕೆಯನ್ನೂ ಹೊತ್ತುಕೊಳ್ಳುತ್ತಾರೆ.
ಪುತ್ತೂರಿನ ಕಲ್ಲೇಗದ ಕಲ್ಕುಡ ಮತ್ತು ಕಲ್ಲುರ್ಟಿ ದೈವಸ್ಥಾನದಲ್ಲೂ ಇದೇ ಗೋಂದೋಳು ಪೂಜೆಯನ್ನು ಕಳೆದ ಹಲವು ವರ್ಷಗಳಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ. ಸಂಪೂರ್ಣ ದೇವಿ ಕ್ರಿಯೆಯಲ್ಲಿ ನಡೆಯುವ ಈ ಪೂಜೆಯಲ್ಲಿ ಭಾಗವಹಿಸಿದ ಭಕ್ತಾಧಿಗಳಿಗೆ ದೇವಿಯ ಪ್ರಸಾದವನ್ನು ನೀಡಲಾಗುತ್ತಿದೆ.

ಗೋಂದೋಳು ಪೂಜೆ ಮಾಡಲೆಂದೇ ಮರಾಟಿ ನಾಯ್ಕ ಸಮಾಜದಲ್ಲಿ ಕೆಲವು ಮನೆತನಗಳು ಗುರುತಿಸಿಕೊಂಡಿವೆ. ಆ ಮನೆತನಕ್ಕೆ ಸಂಬಂಧಪಟ್ಟವರು ಈ ಸೇವೆಯನ್ನು ನಡೆಸಿಕೊಂಡು ಬರುತ್ತಾರೆ. ದೂರದ ಮಹಾರಾಷ್ಟ್ರದಿಂದ ಬಂದು ತುಳುನಾಡಿನಲ್ಲಿ ನೆಲೆಸಿ ಇಂದು ತುಳುನಾಡಿನ ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬೆರೆತು ಹೋಗಿರುವ ಗೋಂದೋಳು ಪೂಜೆ ಆರಾಧನೆಯ ಜೊತೆಗೆ ಭಾತೃತ್ವದ ಸಂದೇಶವನ್ನು ಸಾರುತ್ತದೆ.












Click it and Unblock the Notifications