Breaking News: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ, ಸೇತುವೆ ಮೇಲೆ ಕಾರು ಪತ್ತೆ
ಮಂಗಳೂರು, ಅಕ್ಟೋಬರ್ 06: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ಮುಮ್ತಾಜ್ ಅಲಿ (52) ನಾಪತ್ತೆಯಾಗಿದ್ದಾರೆ. ಮಂಗಳೂರು ನಗರದ ಕೂಳೂರಿನ ಸೇತುವೆ ಮೇಲೆ ಅಪಘಾತವಾದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ನದಿಗೆ ಹಾರಿದ್ದಾರೆಯೇ? ಎಂದು ಹುಡುಕಾಟವನ್ನು ನಡೆಸುತ್ತಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ಸಹ ಸ್ಥಳಕ್ಕೆ ಆಗಮಿಸಿದ್ದಾರೆ.
ಸೋಮವಾರದ ಅಪ್‌ಡೇಟ್: ನಾಪತ್ತೆಯಾಗಿದ್ದ ಉದ್ಯಮಿ ಮುಮ್ತಾಜ್ ಅಲಿ ಶವ ಸೋಮವಾರ ಬೆಳಗ್ಗೆ ಕೂಳೂರಿನ ಸೇತುವೆ ಸಮೀಪ ಪತ್ತೆಯಾಗಿದೆ. ಫಲ್ಗುಣಿ ನದಿಯಲ್ಲಿ ಶವ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉದ್ಯಮಿಯಾಗಿರುವ ಮುಮ್ತಾಜ್ ಅಲಿ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದರು. ಅವರಿಗೆ ಸೇರಿದ ಬಿಎಂಡಬ್ಲ್ಯು ಕಾರು ಡ್ರೈವರ್ ಭಾಗದಲ್ಲಿ ಅಪಘಾತವಾದ ಸ್ಥಿತಿಯಲ್ಲಿ 5 ಗಂಟೆಗೆ ಪತ್ತೆಯಾಗಿದೆ. ಆದರೆ ಕಾರಿನಲ್ಲಿ ಮುಮ್ತಾಜ್ ಅಲಿ ಅವರಿಲ್ಲ, ಸುತ್ತಮುತ್ತ ಹುಡುಕಿದರೂ ಸಹ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಕೂಳೂರಿನ ಸೇತುವೆ ಮೇಲೆ ಕಾರು ಪತ್ತೆಯಾದ ಮಾಹಿತಿ ತಿಳಿದ ಪುತ್ರಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿರುವ ಶಂಕೆ ಇದೆ. ಈ ಹಿನ್ನಲೆಯಲ್ಲಿ ಪೊಲೀಸರು, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.
ಕಾರು ಪತ್ತೆಯಾದ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಮೊಯ್ದಿನ್ ಬಾವ ಕುಟುಂಬದವರು, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ಆಗಮಿಸಿದ್ದಾರೆ. ನದಿಗೆ ಹಾರಿದ್ದಾರೆಯೇ? ಎಂದು ಹುಡುಕಾಟವನ್ನು ನಡೆಸಲಾಗುತ್ತಿದೆ. ಕಾರು ನಿಲ್ಲಿಸಿ ಎಲ್ಲಿಗೆ ಹೋಗಿದ್ದಾರೆ? ಎಂದು ಪೊಲೀಸರು ತನಿಖೆಯನ್ನು ಸಹ ಕೈಗೊಂಡಿದ್ದಾರೆ. ಕಾರು ಅಪಘಾತವಾದ ಸ್ಥಿತಿಯಲ್ಲಿ ಸಿಕ್ಕಿರುವುದು ಆತಂಕವನ್ನು ಹೆಚ್ಚಿಸಿದೆ.
ಮಂಗಳೂರು ನಗರದಲ್ಲಿ ವಿವಿಧ ಉದ್ಯಮ ನಡೆಸುತ್ತಿರುವ ಮುಮ್ತಾಜ್ ಅಲಿ ಮಸೀದಿ ಸಮಿತಿಗಳಲ್ಲಿ ಸಹ ಸಕ್ರಿಯರಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮುಂಜಾನೆ 3 ಗಂಟೆಗೆ ಮನೆಯಿಂದ ಕಾರಿನಲ್ಲಿ ಹೊರಟ ಅವರು ನಗರದ ಹಲವು ಭಾಗದಲ್ಲಿ ಸುತ್ತಾಟ ನಡೆಸಿದ್ದಾರೆ. ಬಳಿಕ 5 ಗಂಟೆ ಸುಮಾರಿಗೆ ಕಾರು ಕೂಳೂರಿನ ಸೇತುವೆ ಮೇಲೆ ನಿಂತಿದೆ.
ನಗರ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ಮಾತನಾಡಿ, "ಭಾನುವಾರ ಮುಂಜಾನೆ ಉದ್ಯಮಿ ಮುಮ್ತಾಜ್ ಅಲಿ ವಾಹನ ಕೂಳೂರಿನ ಸೇತುವೆ ಮೇಲೆ ಪತ್ತೆಯಾಗಿದೆ. ಅವರು ಸೇತುವೆಯಿಂದ ನದಿಗೆ ಜಿಗಿದಿರಬಹುದು ಎಂಬ ಶಂಕೆ ಇದೆ. ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ" ಎಂದರು.
"ಪ್ರಾಥಮಿಕವಾಗಿ 3 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದಾರೆ ಎಂಬ ಮಾಹಿತಿ ಇದೆ. 5 ಗಂಟೆ ಸುಮಾರಿಗೆ ಸೇತುವೆ ಮೇಲೆ ಕಾರು ನಿಲ್ಲಿಸಿದ್ದಾರೆ. ನಂತರ ಮಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಸ್‌ಡಿಆರ್‌ಎಫ್ ಮತ್ತು ಕೋಸ್ಟ್ ಗಾರ್ಡ್ ತಂಡಗಳು ನದಿಯಲ್ಲಿ ಹುಡುಕಾಟ ನಡೆಸುತ್ತಿವೆ" ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.












Click it and Unblock the Notifications