Dharmasthala: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಿ.ಎಸ್ ಯಡಿಯೂರಪ್ಪ ಭೇಟಿ: ವಿಶೇಷ ಪ್ರಾರ್ಥನೆ
ಮಂಗಳೂರು, ಜೂನ್ 24: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರದ ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಮಂಜುನಾಥ ಸ್ವಾಮಿಗೆ ವಿಶೇಷ ಸಲ್ಲಿಸಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿರುವ ಯಡಿಯೂರಪ್ಪ ಅವರಿಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಗೌರವಿಸಿದರು. ಬಳಿಕ ಕೆಲವು ವಿಚಾರಗಳ ಬಗ್ಗೆ ಕೆಲ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಧರ್ಮಸ್ಥಳ ದೇವಸ್ಥಾನದ ವ್ಯವಸ್ಥಾಪಕ ಪಾರ್ಶನಾಥ್ ಉಪಸ್ಥಿತರಿದ್ದರು.

ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಯಡಿಯೂರಪ್ಪ ಅವರು ಅಲ್ಲಿ ನಾಣ್ಯಗಳ ತುಲಾಭಾರ ಸೇವೆ ಸಲ್ಲಿಸಿದರು. ದೇವಾಲಯದ ಅರ್ಚಕರಾದ ಸತ್ಯನಾರಾಯಣ ನೂರಿತ್ತಾಯ ಅವರು ತುಲಾಭಾರ ಸೇವೆಯನ್ನು ನೆರವೇರಿಸಿದರು. ಅಲ್ಲದೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಯಡಿಯೂರಪ್ಪ ಅವರನ್ನು ಸ್ವಾಗತಿಸಿ ಗೌರವಿಸಲಾಯಿತು. ಈ ವೇಳೆ ಮಾಜಿ ಸಚಿವ ಅಂಗಾರ, ಮೋಹನ್ ರಾಮ ಸುಳ್ಳಿ ಮತ್ತು ದೇವಸ್ಥಾನದ ಸಮಿತಿಯವರು ಉಪಸ್ಥಿತರಿದ್ದರು.
ಬಳಿಕ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಸೌತಡ್ಕ ದೇವಾಲಯಕ್ಕೆ ಭೇಟಿ ನೀಡಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಯಡಿಯೂರಪ್ಪ ಮಧ್ಯಾಹ್ನ ಸುಳ್ಯದ ಬಿಜೆಪಿ ಕಛೇರಿ ಉದ್ಘಾಟಿಸಲಿದ್ದಾರೆ.

ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ , ಬಹಳ ವರ್ಷಗಳ ನಂತರ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದೇನೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದವನ್ನು ಪಡೆದಿದ್ದೇನೆ. ನಮ್ಮ ಭಾಗದಲ್ಲಿ ಒಂದು ರೀತಿಯ ಬರಗಾಲವಿದ್ದು, ಸಕಾಲದಲ್ಲಿ ಮಳೆ ಬೆಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಮುಂದೆ ಬರುವ ದಿನಗಳು ಒಳ್ಳೆ ದಿನಗಳಾಗಿರುತ್ತದೆ ಎಂದು ಹೇಳಿದರು.












Click it and Unblock the Notifications