23 ಮಕ್ಕಳ ತಂದೆಯಿಂದ ಬಾಲಕಿಗೆ ಲೈಂಗಿಕ ಕಿರುಕುಳ
ಮಂಗಳೂರು, ಜ.30 : 23 ಮಕ್ಕಳ ತಂದೆಯೊಬ್ಬ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಆರೋಪಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಕೊಳ್ನಾಡು ಗ್ರಾಮದ ಕಾರಾಜೆ ನಿವಾಸಿ ರಝಬ್ (50) ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿ. ಈತನಿಗೆ ನಾಲ್ವರು ಪತ್ನಿಯರು ಮತ್ತು 23 ಮಕ್ಕಳಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಬಾಲಕಿ ತಾಯಿ ರಝಬ್ ವಿರುದ್ಧ ದೂರು ನೀಡಿದ್ದು, ವಿಟ್ಲ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಜನವರಿ 23ರಂದು ಮಧ್ಯಾಹ್ನ ಕಾರಾಜೆ ಗ್ರಾಮದ 10 ವರ್ಷದ ಬಾಲಕಿಯನ್ನು ಮನೆಗೆ ಕರೆಸಿಕೊಂಡ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯ ತಂದೆ ಕೆಲಸದ ನಿಮಿತ್ತ ದೂರದೂರಿಗೆ ಹೋಗಿದ್ದರಿಂದ ಅವರು ಬಂದ ಬಳಿಕ ದೂರು ನೀಡಿದ್ದಾರೆ. [ಮಂಗಳೂರು : ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ತಂದೆ]
ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿಭಿನ್ನ ಕೋಮಿಗೆ ಸಂಬಂಧಿಸಿದ ಪ್ರಕರಣವಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.












Click it and Unblock the Notifications