ಮಂಗಳೂರಿನಲ್ಲಿ ತಂದೆ, ಮಗಳು ಅನುಮಾನಾಸ್ಪದ ಸಾವು
ಮಂಗಳೂರು, ಮಾರ್ಚ್ 24: ತಂದೆ ಹಾಗೂ ಮಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ. ಬಿ.ಸಿ.ರೋಡಿನ ವಸತಿ ಸಂಕೀರ್ಣವೊಂದರಲ್ಲಿ ಈ ಘಟನೆ ನಡೆದಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಹಾಗೂ ಆಕೆಯ ತಂದೆ ವಸತಿ ಸಂಕೀರ್ಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಬಿ.ಸಿ.ರೋಡಿನ ವಿವೇಕ ನಗರದ ಖಾಸಗಿ ವಸತಿ ಸಂಕೀರ್ಣವೊಂದರ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಪಟ್ಟವರನ್ನು ಪ್ರಭಾಕರ (45) ಮತ್ತು ಪ್ರಮಣ್ಯ (12) ಎಂದು ಗುರುತಿಸಲಾಗಿದೆ. ನಿನ್ನೆ ಅಪ್ಪ ಹಾಗೂ ಮಗಳು ಇಬ್ಬರು ವಿಷ ಸೇವಿಸಿ ಸಾವನ್ನಪ್ಪಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ಪ್ರಭಾಕರ ಮೊದಲು ಮಗಳಿಗೆ ವಿಷವಿಕ್ಕಿ ನಂತರ ತಾನೂ ವಿಷ ಸೇವಿಸಿದ್ದಾರೆ ಎಂದು ಅನುಮಾನಿಸಲಾಗಿದೆ. ಇನ್ನೇನಾದರೂ ಕಾರಣಗಳಿವೆಯೇ? ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಭಾಕರ್ 3 ವರ್ಷಗಳಿಂದೀಚೆಗೆ ಈ ಮನೆ ಬಾಡಿಗೆ ಪಡೆದಿದ್ದರು. ಹಿಂದೆ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಪ್ರಭಾಕರ ಈಗ ಬಿ.ಸಿ.ರೋಡ್ ನಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಮಗಳು ಪ್ರಣಮ್ಯ ಬಂಟ್ವಾಳ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಲ್ಕನೆ ತರಗತಿ ವಿದ್ಯಾರ್ಥಿನಿಯಾಗಿದ್ದು, ಪ್ರತಿಭಾವಂತೆಯಾಗಿದ್ದಳು.
ಶುಕ್ರವಾರ ಹಾಗೂ ಶನಿವಾರ ಆಕೆ ಶಾಲೆಗೆ ಹೋಗಿರಲಿಲ್ಲ ಎನ್ನಲಾಗಿದೆ. ನಿನ್ನೆ ಸಂಜೆ ತಂದೆ ಮತ್ತು ಮಗಳು ಮೃತಪಟ್ಟ ವಿಷಯ ಗೊತ್ತಾಗಿದ್ದು, ಕೂಡಲೇ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು.












Click it and Unblock the Notifications