Y Bharath Shetty Net Worth: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಆಸ್ತಿಯಲ್ಲಿ ಕುಸಿತ
ಮಂಗಳೂರು, ಏಪ್ರಿಲ್ 19: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಭರತ್ ಶೆಟ್ಟಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರು ಅವರು ತಮ್ಮ ಬಳಿ ₹ 8.03 ಕೋಟಿ ಆಸ್ತಿ ಇರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಭರತ್ ಶೆಟ್ಟಿ (52) ಅವರ ಬಳಿ ₹ 4.16 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹ 3.87 ಕೋಟಿ ಮೌಲ್ಯದ ಸ್ಥಿರಾಸ್ಥಿ ಇದೆ. ಅವರ ಪತ್ನಿ ಅಸಾವರಿ ದೇಸಾಯಿ ಶೆಟ್ಟಿ ಅವರ ₹ 3.34 ಕೋಟಿ ಆಸ್ತಿ ಹಾಗೂ ಮಗ ಕಾನಿಷ್ಕ್ ಶೆಟ್ಟಿ ಹೆಸರಿನಲ್ಲಿ ₹ 2 ಲಕ್ಷ ಚರಾಸ್ತಿ ಸೇರಿ ಅವರ ಕುಟುಂಬವು ₹ 11.39 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಭಂಡಾರಿ ಕನ್ಸ್ಟ್ರಕ್ಷನ್ಸ್‌ನಿಂದ ಪಡೆದ ₹ 10 ಲಕ್ಷ ಸಾಲವೂ ಸೇರಿ ಒಟ್ಟು ₹ 96.48 ಲಕ್ಷ ಸಾಲವನ್ನು ಹೊಂದಿದ್ದಾರೆ.

ಉದ್ಯಮಿಯಾಗಿರುವ ಭರತ್ ಶೆಟ್ಟಿ ಅವರು ವಾರ್ಷಿಕ ₹ 1.59 ಕೋಟಿ ಹಾಗೂ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಪತ್ನಿ ₹ 15.39 ಲಕ್ಷ ವಾರ್ಷಿಕ ವರಮಾನವನ್ನು ಹೊಂದಿದ್ದಾರೆ. ಭರತ್ ಬಳಿ ₹80,300 ಹಾಗೂ ಪತ್ನಿ ಬಳಿ ₹ 30,200 ನಗದು ಇದೆ.
ಭರತ್ ಶೆಟ್ಟಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು ₹ 2.47 ಕೋಟಿ ಠೇವಣಿ, ಬಾಂಡ್, ಡಿಬೆಂಚರ್ ಹಾಗೂ ಷೇರುಗಳ ರೂಪದಲ್ಲಿ ₹ 11.59 ಲಕ್ಷ, ರಾಷ್ಟ್ರೀಯ ಉಳಿತಾಯ ಪತ್ರವೂ ಸೇರಿದಂತೆ ವಿವಿಧ ಹೂಡಿಕೆಗಳ ರೂಪದಲ್ಲಿ ₹ 15.54 ಲಕ್ಷ ಇದೆ. ಅವರು ಒಟ್ಟು ₹ 1.18 ಕೋಟಿ ಸಾಲವನ್ನು ನೀಡಿದ್ದಾರೆ. ಅವರ ಪತ್ನಿ ವಿವಿಧ ಬ್ಯಾಂಕ್‌ಗಳಲ್ಲಿ₹ 50.97 ಲಕ್ಷ, ಬಾಂಡ್, ಡಿಬೆಂಚರ್ ಹಾಗೂ ಷೇರುಗಳಲ್ಲಿ ₹ 44.55 ಲಕ್ಷ ಹಾಗೂ ಉಳಿತಾಯ ರೂಪದಲ್ಲಿ ₹ 24.92 ಲಕ್ಷ ಹೂಡಿಕೆ ಮಾಡಿದ್ದಾರೆ.
ಭರತ್ ಅವರ ಬಳಿ ₹ 1.14 ಲಕ್ಷ ಮೌಲ್ಯದ ಟೊಯೊಟಾ ಇನೋವಾ, ₹ 14.98 ಲಕ್ಷ ಮೌಲ್ಯದ ಪೋರ್ಡ್ ಎಂಡ್ಯೂವರ್ ಕಾರು ಹಾಗೂ ₹ 4.68 ಲಕ್ಷ ಮೌಲ್ಯದ ಕ್ರೇನ್ ಇದೆ. ಅವರ ಪತ್ನಿ ಬಳಿ ₹ 4 ಲಕ್ಷ ಮೌಲ್ಯದ ಹ್ಯುಂಡೈ ಗ್ರಾಂಡ್ ಕಾರು ಇದೆ.
ಭರತ್ ಅವರು ಉಡುಪಿ ಮಣೂರು ಗ್ರಾಮದಲ್ಲಿ 93 ಸೆಂಟ್ಸ್ ಕೃಷಿ ಜಮೀನನ್ನು 2012ರಲ್ಲಿ ₹ 4.6 ಲಕ್ಷಕ್ಕೆ ಖರೀದಿಸಿದ್ದು, ಅದರ ಈಗಿನ ಬೆಲೆ ₹ 18.48 ಲಕ್ಷ. ಉಡುಪಿ ಜಿಲ್ಲೆಯ ಎಲ್ಲೂರು, ಬಡಾ, ವಡೇರ ಹೋಬಳಿ, ಬೈಂದೂರು ಗ್ರಾಮಗಳಲ್ಲಿ ಹಾಗೂ ಮಂಗಳೂರು ತಾಲ್ಲೂಕಿನ ನೀರುಮಾರ್ಗ, ಇಡ್ಯಾ ಗ್ರಾಮಗಳಲ್ಲಿ ಕೃಷಿಯೇತರ ಜಮೀನು ಹೊಂದಿದ್ದು, ಅದರ ಒಟ್ಟು ಮೌಲ್ಯ ₹ 56.03 ಲಕ್ಷ. ಸುರತ್ಕಲ್‌ನಲ್ಲಿ ನಾಲ್ಕು ವಾಣಿಜ್ಯ ಕಟ್ಟಡಗಳನ್ನು 2022ರ ಮೇ 12ರಂದು ₹22.87 ಲಕ್ಷಕ್ಕೆ ಖರೀದಿಸಿದ್ದರು.

ಒಂದೇ ವರ್ಷದಲ್ಲಿ ಅದರ ಬೆಲೆ ₹ 98.55 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದು ಅವರು ಪ್ರಮಾಣಪತ್ರದಲ್ಲಿ ಹೇಳಿಕೊಂಡಿದ್ದಾರೆ. ಕದ್ರಿ ದೇರೇಬೈಲ್‌ನ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಅವರ ಮತ್ತು ಪತ್ನಿ ಜಂಟಿ ಮಾಲೀಕತ್ವದಲ್ಲಿ 2,584 ಚದರ ಅಡಿ ವಿಸ್ತೀರ್ಣದ ವಸತಿ ಕಟ್ಟಡವಿದೆ. ₹26.74 ಲಕ್ಷಕ್ಕೆ ಅದನ್ನು ಖರೀದಿಸಿದ್ದು ಈಗ ಅದರ ಬೆಲೆ ₹ 76 ಲಕ್ಷ ಎಂದು ತಿಳಿಸಿದ್ದಾರೆ. ಅಷ್ಟೇ ಪಾಲು ಅವರ ಪತ್ನಿಯದ್ದು ಇದೆ.
ಅವರ ಪತ್ನಿ ಉಡುಪಿ ತಾಲ್ಲೂಕಿನ ಬೈರಂಪಳ್ಳಿ ಗ್ರಾಮದಲ್ಲಿ 5 ಎಕರೆ 93 ಸೆಂಟ್ಸ್ ಹಾಗೂ 73 ಸೆಂಟ್ಸ್ ಕೃಷಿ ಜಮೀನನ್ನು 2012ರಲ್ಲಿ ₹ 15 ಲಕ್ಷಕ್ಕೆ ಖರೀದಿಸಿದ್ದಾರೆ. ಇದರ ಬೆಲೆ ಈಗ ₹ 75.92 ಲಕ್ಷ. ಪುಣೆಯ ಕೋತ್ರೂಡ್ ಬಳಿ 730 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್ ಹೊಂದಿದ್ದಾರೆ. ಇವೆರಡರ ಒಟ್ಟು ಮೌಲ್ಯ ಅದರ ಈಗಿನ ಬೆಲೆ ₹53.23 ಲಕ್ಷವಾಗಿದೆ. ಭರತ್ ಶೆಟ್ಟಿ ಅವರಿಗೆ 2018ರಲ್ಲಿ ₹ 12.14 ಕೋಟಿ ಆಸ್ತಿ ಇತ್ತು ಎಂದು ವರದಿಯಾಗಿದೆ.












Click it and Unblock the Notifications