ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ; ಸುಗಮ ಸಂಚಾರ ವ್ಯವಸ್ಥೆ ಮಾಡಿದ 'ಶೌರ್ಯ'
ಮಂಗಳೂರು, ಡಿಸೆಂಬರ್ 10; ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ 2023ರ ಸಂಭ್ರಮ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಡಿಸೆಂಬರ್ 8 ರಿಂದ 12ರವರೆಗೆ ಲಕ್ಷದೀಪೋತ್ಸವ 2023ರ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಲಕ್ಷದೀಪೋತ್ಸವ 2023ರ ಸಂಭ್ರಮ ಕಣ್ತುಂಬಿಕೊಳ್ಳಲು ಮತ್ತು ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯದತ್ತ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ. ಅಲ್ಲದೇ ವಾಹನಗಳಲ್ಲಿಯೂ ಸಹ ಜನರು ಆಗಮಿಸುತ್ತಿದ್ದು, ಸಂಚಾರ ದಟ್ಟಣೆ ನಿರ್ವಹಣೆ ಸಹ ಸವಾಲಾಗಿದೆ.
'ಶೌರ್ಯ' ತಂಡದಿಂದ ಸುಗಮ ಸಂಚಾರ ವ್ಯವಸ್ಥೆ; ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಾಲಯದಿಂದ ಧರ್ಮಸ್ಥಳದವರೆಗಿನ ಪಾದಯಾತ್ರೆ ಸಂದರ್ಭದಲ್ಲಿ ಜನ ದಟ್ಟಣೆ ಹಾಗು ವಾಹನ ಸಂಚಾರವನ್ನು ನಿಯಂತ್ರಿಸುವಲ್ಲಿ 'ಶೌರ್ಯ' ವಿಪತ್ತು ನಿರ್ವಹಣಾ ತಂಡ ಯಶಸ್ವಿಯಾಗಿದೆ.
ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಭಕ್ತಾದಿಗಳ ದಂಡು ಸಾಗರೋಪಾದಿಯಲ್ಲಿ ಹರಿದುಬರುತ್ತದೆ. ಇದರ ಪ್ರಯುಕ್ತ ಮೊದಲನೇಯ ದಿನದ ಪಾದಯಾತ್ರೆಯುಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಯಾತ್ರಿಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು 'ಶೌರ್ಯ' ತಂಡದ ಸದಸ್ಯರು ಕಾರ್ಯಪ್ರವೃತ್ತರಾಗಿದ್ದರು.
'ಶೌರ್ಯ' ತಂಡವು ಒಂದು ತಾಲೂಕಿನಲ್ಲಿ ಹಲವು ಗುಂಪುಗಳಾಗಿ ಕಾರ್ಯ ನಿರ್ವಹಿಸುತ್ತವೆ. ನಾವುರು, ಐನಬೆಟ್ಟು, ದೆತ್ತಬಾಗಿಲು, ಬೆಳ್ತಂಗಡಿ, ಧರ್ಮಸ್ಥಳ, ಮಲವಂತಿಗೆ, ಮಂಜಟ್ಟಿ, ಲೈಲಾ ಸೇರಿದಂತೆ ಹಲವಾರು ಭಾಗದಿಂದ ತಂಡದ ಕಾರ್ಯಕರ್ತರು ಆಗಮಿಸಿದ್ದರು.
ಈ ತಂಡದಲ್ಲಿ ಪುರುಷರು ಹಾಗು ಮಹಿಳೆಯರು ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಸುಮಾರು 100ಕ್ಕೂ ಹೆಚ್ಚಿನ ಜನರು ಈ ಸಂದರ್ಭದಲ್ಲಿದ್ದು ಶಾಂತಿ, ಸುವ್ಯವಸ್ಥೆ, ವಾಹನ ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಸಿದರು. ಭಕ್ತಾದಿಗಳು ತಂಡ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿರಿದಾದ ಹಾಗೂ ವಾಹನ ದಟ್ಟಣೆಯಾಗುವ ಸ್ಥಳಗಳಾದ ನೇತ್ರಾವತಿ ಸ್ನಾನ ಘಟ್ಟ, ಉಜಿರೆಯ ವೃತ್ತ, ಧರ್ಮಸ್ಥಳದ ಸಮೀಪದ ಸ್ಥಳಗಳಲ್ಲಿ'ಶೌರ್ಯ' ತಂಡವು ಕಾರ್ಯ ನಿರ್ವಹಿಸಿದೆ. ವಾಹನ ಸಂಚಾರಕ್ಕೆ ಮತ್ತು ಪಾದಯಾತ್ರಿಗಳಿಗೆ ಅನುಕೂಲಕರವಾಗುವಂತೆ ತಂಡವು ಕಾರ್ಯ ಕೆಲಸ ಮಾಡುತ್ತಿದೆ.
ಲಕ್ಷದೀಪೋತ್ಸವ 2023ರ ಕಾರ್ಯಕ್ರಮಗಳು; ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ 2023ರ ಕಾರ್ಯಕ್ರಮಗಳಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ಡಿಸೆಂಬರ್ 10ರ ಭಾನುವಾರ ಸಂಜೆ 7 ರಿಂದ 10ರ ವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದ ಕಾರ್ಯಕ್ರಮವಿದೆ.
ಡಿಸೆಂಬರ್ 11ರ ಸೋಮವಾರ ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಅಂಕಣಕಾರ, ಖ್ಯಾತ ವಾಗ್ಮಿ ಡಾ. ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿಸೆಂಬರ್ 12ರ ಮಂಗಳವಾರ ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಇಸ್ರೋದ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟಿಸುವರು. ಬೆಂಗಳೂರಿನ ಖ್ಯಾತ ಗಮಕಿ ಡಾ. ಎ. ವಿ. ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿಸೆಂಬರ್ 12ರ ಮಂಗಳವಾರ ರಾತ್ರಿ 12 ಗಂಟೆ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ. ಲಕ್ಷಕ್ಕೂ ಅಧಿಕ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಕೆಎಸ್ಆರ್‌ಟಿಸಿ ಸಹ ರಾಜ್ಯದ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಬರಹ
ದಿವ್ಯಶ್ರೀ ಹೆಗಡೆ
ಪ್ರಥಮ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ












Click it and Unblock the Notifications