ಮಂಗಳೂರು ತಣ್ಣೀರು ಬಾವಿ ಬೀಚ್ ಪ್ರವಾಸಿಗರಿಗೆ ಇನ್ನಷ್ಟು ಸೌಲಭ್ಯಗಳು
ಮಂಗಳೂರು, ಜನವರಿ 09: 'ಒನ್ ನೇಷನ್ ಒನ್ ಡೆಸ್ಟಿನೇಷನ್' ಯೋಜನೆಯಡಿ ಮಂಗಳೂರಿನ ತಣ್ಣೀರು ಬಾವಿ ಬೀಚ್ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಈ ಕಡಲ ಕಿನಾರೆಯ ನಿರ್ವಹಣೆಯನ್ನು ನಡೆಸಲು ಮತ್ತೊಂದು ಟೆಂಡರ್ ಅನ್ನು ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಪುಣೆ ಮೂಲದ ಬಿವಿಜಿ ಇಂಡಿಯಾ ಲಿಮಿಟೆಡ್ ಎಂಬ ಕಂಪನಿಯು 7.56 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ.
ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಹಿಲನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯುವ ಉದ್ದೇಶದಿಂದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈಗ ಕಾಮಗಾರಿಗಳು ಪೂರ್ಣಗೊಂಡಿದೆ. ಕಾಮಗಾರಿಗಳನ್ನು 10 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು ಎಂದು ಈ ಹಿಂದೆಯೇ ಸೂಚನೆ ನೀಡಲಾಗಿತ್ತು.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ತಣ್ಣೀರು ಬಾವಿ ಬೀಚ್‌ನಲ್ಲಿ 7.59 ಕೋಟಿ ರೂ. ಅನುದಾನವನ್ನು ವಿವಿಧ ಕಾಮಗಾರಿಗೆ ನೀಡಿತ್ತು. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕಾಮಗಾರಿಯನ್ನು ಕೈಗೊಂಡು ಈಗ ಪೂರ್ಣಗೊಳಿಸಲಾಗಿದೆ.
ಯಾವ-ಯಾವ ಸೌಲಭ್ಯಗಳು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತಣ್ಣೀರು ಬಾವಿ ಬೀಚ್‌ನಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಪ್ಪಂದದ ಪ್ರಕಾರ ಈ ಕಾಮಗಾರಿಗಳ ನಿರ್ವಹಣೆಗೆ ಮೊದಲ ವರ್ಷ ಟೆಂಡರ್ ಪಡೆದವರು 50 ಲಕ್ಷ ರೂ.ಗಳನ್ನು ನೀಡಬೇಕು, 10 ವರ್ಷಕ್ಕೆ ಈ ಅನುದಾನ 2 ಕೋಟಿ ರೂ.ಗೆ ಏರಿಕೆಯಾಗಲಿದೆ.
ಬೀಚ್‌ಗೆ ಬರುವ ಪ್ರವಾಸಿಗರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗದಿ ಮಾಡುವ ಪ್ರವೇಶ ಶುಲ್ಕವನ್ನು ವಸೂಲಿ ಮಾಡುವ ಅವಕಾಶವನ್ನು ಟೆಂಡರ್ ಪಡೆದವರಿಗೆ ನೀಡಲಾಗುತ್ತದೆ. ಸದ್ಯ ಬೀಚ್ ನಿರ್ವಹಣೆ ಮಾಡುವ ಗುತ್ತಿಗೆ ಅವಧಿ ಅಂತ್ಯವಾಗಿದೆ. ಆದ್ದರಿಂದ ಹೊಸ ಟೆಂಡರ್ ಆಹ್ವಾನಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇಷ್ಟು ದಿನ ತಣ್ಣೀರು ಬಾವಿ ಬೀಚ್‌ಗೆ ತೆರಳುವ ಪ್ರವಾಸಿಗರಿಗೆ ವೃಕ್ಷೋದ್ಯಾನವೇ ಪ್ರಮುಖ ಆಕರ್ಷಣೆಯಾಗಿತ್ತು. ಸಸಿಹಿತ್ಲು, ಪಣಂಬೂರು ಬೀಚ್‌ಗೆ ಹೋಲಿಕೆ ಮಾಡಿದರೆ ಇಲ್ಲಿ ಹೆಚ್ಚಿನ ಆಕರ್ಷಣೆಗಳು, ಸೌಲಭ್ಯಗಳು ಇಲ್ಲ ಎಂಬ ಆರೋಪವಿತ್ತು. ಆದ್ದರಿಂದ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ಬೇಕಾದ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ.
ಬೀಚ್ ಕಸ ನಿರ್ವಹಣೆಗೆ ಘನತ್ಯಾಜ್ಯ ನಿರ್ವಹಣೆ ಘಟಕ, ಶೌಚಾಲಯಗಳ ನಿರ್ವಹಣೆ, ಬಟ್ಟೆ ಬದಲಾಯಿಸುವ ಕೊಠಡಿ, ಬಿದಿರಿನ ತಾತ್ಕಾಲಿಕ ಮನೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಬೀಚ್‌ನಲ್ಲಿ ಒದಗಿಸಲಾಗಿದೆ.
ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಥಮ ಚಿಕಿತ್ಸೆ ಕೊಠಡಿ, ಸಿಸಿಟಿವಿ ಕ್ಯಾಮರಾ ನಿಯಂತ್ರಣ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಬೀಚ್ ಸ್ವಚ್ಛತಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಬೀಚ್ ಆವರಣದಲ್ಲಿ ಆಹಾರ ಮಳಿಗೆಗಳು, ಸಮುದ್ರ ವೀಕ್ಷಣೆ ಮಾಡಲು ಫ್ರೇಮ್ ಮುಂತಾದ ಕಾಮಗಾರಿಗಳನ್ನು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಲಾಗುತ್ತಿದೆ. ಬೀಚ್‌ನಲ್ಲಿ ಬಿದಿರು ಮನೆಗಳು ನಿರ್ಮಾಣವಾಗಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡಲಿವೆ. ಬೀಚ್‌ನಲ್ಲಿ ಹುಲ್ಲಿನ ಕೊಡೆಗಳ ಕೆಳಗೆ ಕುಳಿತು ಸಮುದ್ರ ವೀಕ್ಷಣೆ ಮಾಡಲು ಅವಕಾಶವನ್ನು ಸಹ ಮಾಡಿಕೊಡಲಾಗಿದೆ.












Click it and Unblock the Notifications