ಉಡುಪಿ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ
ಮಂಗಳೂರು, ಮಾರ್ಚ್ 22: ಉಡುಪಿಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳೆಂದೇ ಪ್ರಸಿದ್ಧವಾದ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಮಂಗಳಾದೇವಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧ ಹೇರಲಾಗಿದೆ.
ಪುತ್ತೂರಿನ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅನ್ಯಕೋಮಿನ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಎಪ್ರಿಲ್ 10ರಿಂದ 25 ರವರೆಗೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ ನಡೆಯಲಿದ್ದು, ಈ ವೇಳೆ ನೂರಾರು ಜಾತ್ರಾ ಮಳಿಗೆಗಳು ದೇವಸ್ಥಾನದ ಬಾಕಿ ಮಾರುಗದ್ದೆಯಲ್ಲಿ ಇರಲಿದೆ. ಈ ಜಾತ್ರಾ ಮಳಿಗೆಗಳಲ್ಲೂ ಹಿಂದೂಯೇತರರು ವ್ಯಾಪಾರ ಮಾಡಲು ಅವಕಾಶ ನಿರಾಕರಿಸಲಾಗಿದೆ.

ಇನ್ನು ಜಾತ್ರೋತ್ಸವದ ಪ್ರಯುಕ್ತ ದೇವಸ್ಥಾನದ ಸಭಾಭವನದಲ್ಲಿ ಪುತ್ತೂರು ವ್ಯವಹಾರ ಮೇಳವೂ ನಡೆಯಲಿದ್ದು, ಈ ಮೇಳದಲ್ಲಿ ಭಾಗವಹಿಸಲು ವ್ಯಾಪಾರಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಕರೆ ನೀಡಿದೆ. ಈ ಸಂಬಂಧ ಮುಂಗಡವಾಗಿ ಮಳಿಗೆಗಳನ್ನು ಬುಕ್ ಮಾಡಲು ದಿನಪತ್ರಿಕೆಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಜಾಹೀರಾತು ನೀಡಿದ್ದು, ಜಾಹೀರಾತಿನಲ್ಲೂ ಹಿಂದೂಗಳಿಗೆ ಮಾತ್ರ ಅವಕಾಶ ಎಂದು ಪ್ರಕಟಪಡಿಸಿದೆ.
ಇನ್ನು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಜಾತ್ರೋತ್ಸವದಲ್ಲೂ ಜಾತ್ರಾ ಮಳಿಗೆಗಳನ್ನೇ ನಿಷೇಧ ಮಾಡಲಾಗಿದೆ. ಜಾತ್ರೋತ್ಸವದ ಪ್ರಯುಕ್ತ ದೇವಸ್ಥಾನದ ಆಡಳಿತ ಮಂಡಳಿ ನಡೆಸಿದ ಸಭೆಯಲ್ಲಿ ಜಾತ್ರೋತ್ಸವದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ. ಆದರೆ ಈ ವಿಚಾರ ವಿವಾದವಾಗುವುದನ್ನು ತಪ್ಪಿಸಲು ದೇವಸ್ಥಾನದ ಆಡಳಿತ ಮಂಡಳಿ ಜಾತ್ರೋತ್ಸವದ ಜಾತ್ರಾ ಮಳಿಗೆಗಳನ್ನೇ ನಿರ್ಬಂಧ ಮಾಡಿದೆ.

ಇನ್ನು ಮಂಗಳೂರು ನಗರ ಹೊರವಲಯದ ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಗಳ ಜಾತ್ರೋತ್ಸವದಲ್ಲೂ ಹಿಂದೂಯೇತರರಿಗೆ ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಸಂಬಂಧ ದೇವಸ್ಥಾನಗಳ ಮುಂಭಾಗ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು, ಬ್ಯಾನರ್‌ನಲ್ಲಿ ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ, ಸಂವಿಧಾನಕ್ಕೆ ವಿರುದ್ಧವಾದವರಿಗೆ, ಗೋ ಕಟುಕರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಬ್ಯಾನರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ, ತಹಶೀಲ್ದಾರ ಜೊತೆ ಮಾತನಾಡಿದ್ದೇವೆ. ಬ್ಯಾನರ್ ಯಾರು ಹಾಕಿದ್ದಾರೆ ಎಂಬುವದರ ಬಗ್ಗೆ ತನಿಖೆ ಮಾಡುತ್ತೇವೆ. ಆಡಳಿತ ಮಂಡಳಿ ಈ ಬಗ್ಗೆ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಕಾನೂನು ತಜ್ಞರ ಬಳಿ ಮಾಹಿತಿ ಕೇಳಿದ್ದೇವೆ. ಬಪ್ಪನಾಡು ಆಡಳಿತ ಮಂಡಳಿ ನಿಯಮದ ಪ್ರಕಾರ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ ಅಂತಾ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.












Click it and Unblock the Notifications