ಕಾಂಗ್ರೆಸ್ ಕಾರ್ಪೊರೇಟರ್ ಪ್ರತಿಭಾ ಮೇಲೆ ಹಲ್ಲೆ
ಮಂಗಳೂರು, ಏ.3: ಹಿಂದೂ ಪರ ಸಂಘಟನೆಗೆ ಸೇರಿದ ಯುವಕರ ಗುಂಪೊಂದು ಸ್ಥಳೀಯ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ಮೇಲೆ ದೈಹಿಕ ಕಿರುಕುಳ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನಾರ್ದನ ಪೂಜಾರಿ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಪ್ರತಿಭಾ ಅವರ ಜತೆ ಯುವಕರು ಅನುಚಿತವಾಗಿ ವರ್ತಿಸಿರುವ ವಿಡಿಯೋ ಕಳೆದೆರಡು ದಿನಗಳಿಂದ ವಾಟ್ಸ್ಯಾಪ್ ನಲ್ಲಿ ಹರಿದಾಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಪ್ರತಿಭಾ ಕುಳಾಯಿ ಅವರು ತಮಗಾದ ಅವಮಾನ, ಹಿಂಸೆ, ದುಃಖವನ್ನು ತೋಡಿಕೊಂಡರು. ಹಿಂದೂ ಜಾಗರಣ ವೇದಿಕೆಗೆ ಸೇರಿರುವ ಯುವಕರ ಗುಂಪೊಂದು ಕೊಡಿಕೆರೆ ಬಳಿ ಮತಯಾಚನೆಗೆ ತೆರಳಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಅದರಲ್ಲಿ ಒಬ್ಬ ಯುವಕ ನನಗೆ ದೈಹಿಕವಾಗಿ ಕಿರುಕುಳ ನೀಡಿದ. ಕಾಂಗ್ರೆಸ್ ನವರು ಇಲ್ಲಿ ಬರಬಾರದು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನನ್ನನ್ನು ಬೈಯ್ದರು. ಮಾನಸಿಕ ಹಿಂಸೆ ಅನುಭವಿಸಿದ ನಾನು ಇಂದು ಈ ಬಗ್ಗೆ ಮಾತನಾಡಲೇಬೇಕಿದೆ ಎಂದರು.
ಮಂಗಳೂರಿನಲ್ಲಿ ಸದ್ಯ ಕದ್ರಿ ಪದವು ವಾರ್ಡ್(22) ನ ಮಹಾಬಲ ಮಾರ್ಲ ಅವರು ಮೇಯರ್ ಆಗಿದ್ದಾರೆ. ಪ್ರತಿಭಾ ಕುಳಾಯಿ ಅವರು ನಗರ ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದು ಕಾರ್ಪೊರೇಟರ್ ಆಗಿ ಉತ್ತಮ ಹೆಸರು ಗಳಿಸಿದ್ದಾರೆ. ಪ್ರತಿಭಾ ಅವರು ಈಗ ತಮಗಾದ ಅವಮಾನಕ್ಕೆ ಹಿಂದೂ ಜಾಗರಣ ವೇದಿಕೆ ಹಾಗೂ ಸ್ಥಳೀಯ ಟಿವಿ ಚಾನೆಲ್ ವಿರುದ್ಧ ಆರೋಪ ಹೊರೆಸಿದ್ದಾರೆ. ಈ ಬಗ್ಗೆ ವಿವರ ಮುಂದೆ ...

ಮನೋಜ್ ಎಂಬಾತ ಮೇಲೆ ಆರೋಪ
ಇತ್ತೀಚೆಗೆ ಸ್ಥಳೀಯ ಮಾಧ್ಯಮವೊಂದರಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನಗೆ ಅಂದು ಬಂದ ಫೋನ್ ಕರೆ ಗಳು ಕೆಟ್ಟ ಮನಸ್ಥಿಯುಳ್ಳ ವ್ಯಕ್ತಿಗಳದ್ದಾಗಿತ್ತು. ಮನೋಜ್ ಎಂಬ 17 ವರ್ಷದ ಯುವಕ ಸ್ಥಳೀಯ ಮಾಧ್ಯಮವೊಂದರ ನೆರವು ಪಡೆದುಕೊಂಡು ಫೋನ್ ಕರೆ ಮಾಡಿಸಿ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಹಾಗೂ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಬಿಂಬಿಸುವುದು ಅವರ ಉದ್ದೇಶವಾಗಿತ್ತು ಎಂದು ಪ್ರತಿಭಾ ಆರೋಪಿಸಿದ್ದಾರೆ.

ಕೋಡಿಕೆರೆಯಲ್ಲಿ ಲೈಂಗಿಕ ಕಿರುಕುಳ ಆರೋಪ
ಇದಾದ ಮೇಲೆ ಕೋಡಿಕೆರೆಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ಸುಮಾರು 30ಕ್ಕೂ ಅಧಿಕ ಬೈಕ್ ಗಳಲ್ಲಿ ಬಂದಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರು ಮನೋಜ್ ನಂಥ ಅಪ್ರಾಪ್ತನನ್ನು ಬಳಸಿಕೊಂಡು ಕಿರುಕುಳ ನೀಡಲು ಯತ್ನಿಸಿದರು.
ನನ್ನ ಮೇಲೆ ನಡೆದ ಕಿರುಕುಳವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ವ್ಯಾಟ್ಸ್ಯಾಪ್ ನಲ್ಲಿ ಹಂಚುತ್ತಿರುವುದು ಕಂಡು ಬಂದಿದೆ. ನನಗೆ ಪುಟ್ಟ ಮಕ್ಕಳಿದ್ದಾರೆ. ನಾನು ಸಂಸಾರಸ್ಥೆ ನನ್ನ ಮಾನ ಹರಾಜಾಗುತ್ತಿದೆ. ನನಗೆ ರಕ್ಷಣೆ ಬೇಕಿದೆ. ನನಗೇನಾದರೂ ತೊಂದರೆಯಾದರೆ ಅದಕ್ಕೆ ಕೋಡಿಕೆರೆ ಗ್ಯಾಂಗ್ ಕಾರಣ.

ರಕ್ಷಣೆ ಸಿಗದಿದ್ದರೆ ರಾಜಕೀಯಕ್ಕೆ ಗುಡ್ ಬೈ
ನನಗೆ ರಕ್ಷಣೆ ಸಿಗದಿದ್ದರೆ ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತೇನೆ. ಪಬ್ಲಿಕ್ ನಲ್ಲಿ ಒಬ್ಬ ಜನಪ್ರತಿನಿಧಿಗೆ ಈ ರೀತಿ ಅವಮಾನವಾಗಿದ್ದರೂ ಯಾರೂ ನನ್ನ ಬೆಂಬಲಕ್ಕೆ ಬಂದಿಲ್ಲ. ನನಗಾದ ನೋವು ಯಾರಿಗೂ ಆಗುವುದು ಬೇಡ. ನಾನು ಹೆಜ್ಜೆ ಹಿಂದೆ ಇಡುತ್ತಿಲ್ಲ. ಘಟನೆ ನಡೆದ ಸಂದರ್ಭದಲ್ಲೇ ಎಸಿಪಿ ಅವರಿಗೆ ಕರೆ ಮಾಡಿ ನೆರವು ಕೋರಿದೆ. ಆದರೆ, ಸ್ಥಳಕ್ಕೆ ಆಗಮಿಸಿದ ಇಬ್ಬರು ಪೊಲೀಸರು ಕೂಡಾ ಅಸಹಾಯಕರಾಗಿ ನಡೆದ ಜಗಳವನ್ನು ವೀಕ್ಷಿಸಿದರು. ಕಾಂಗ್ರೆಸ್ ಗೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸಬೇಕಿದೆ ಎಂದರು.

ಪೊಲೀಸರಿಂದ ಸೂಕ್ತ ರಕ್ಷಣೆ ಭರವಸೆ
ಸುದ್ದ್ಗಿಗೋಷ್ಠಿಯಲ್ಲಿದ್ದ ಮಂಗಳೂರು ಉತ್ತರ ಶಾಸಕ ಮೊಯಿದ್ದೀನ್ ಬಾವಾ ಅವರು ಇತ್ತೀಚೆಗೆ ಕೋಡಿಕೆರೆ ನಿವಾಸಿಗಳ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪ್ರತಿಭಾ ಅವರ ಮೇಲೆ ಹಲ್ಲೆ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಆದರೆ, ಇದನ್ನು ಅಲ್ಲಗೆಳೆದಿರುವ ಹೊಸಬೆಟ್ಟು ಕಾಂಗ್ರೆಸ್ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಕೊಡಿಕೇರಿ ನಿವಾಸಿಗಳು ಒಳ್ಳೆ ಜನ ಪಾಪದವರು ಆದರೆ, ಈ ಹಿಂದೂ ಪರ ಸಂಘಟನೆ ಯುವಕರು ಮಾಡಿದ ಘಟನೆಗೆ ನ್ಯಾಯ ಸಿಗಬೇಕಿದೆ ಎಂದಿದ್ದಾರೆ. ಪೊಲೀಸರು ಪ್ರತಿಭಾ ಅವರಿಗೆ ಭದ್ರತೆ ಒದಗಿಸಿದ್ದು ಮಹಿಳಾ ಪೇದೆಯೊಬ್ಬರು ಪ್ರತಿಭಾ ಅವರ ರಕ್ಷಣೆಗೆ ನಿಯೋಜಿಸಲಾಗಿದೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications