ಪಾತಾಳಕ್ಕೆ ಕುಸಿದ ಮತ್ಸ್ಯೋದ್ಯಮ: ಸಮುದ್ರದಲ್ಲಿ ಕಂಡು ಕೇಳರಿಯದ ಮತ್ಸ್ಯಕ್ಷಾಮ
ಮಂಗಳೂರು, ನವೆಂಬರ್ 27: ಮೀನುಗಾರಿಕೆ ಆರಂಭವಾಗಿ ಇನ್ನೇನು ಮೂರು ತಿಂಗಳಾಗಿದೆಯಷ್ಟೇ. ಆದರೆ ಈಗಲೇ ಶೇಕಡಾ 80ರಷ್ಟು ಬೋಟುಗಳು ದಡದಲ್ಲಿ ಲಂಗರು ಹಾಕುವ ಸ್ಥಿತಿ ನಿರ್ಮಾಣವಾಗಿದ್ದು, ಸಮುದ್ರದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮತ್ಸ್ಯಕ್ಷಾಮವೇ ಇದಕ್ಕೆ ಕಾರಣವಾಗಿದೆ.
ಕರಾವಳಿಯ ಸಮುದ್ರದಲ್ಲಿ ಸದ್ಯ ಮತ್ಸ್ಯಕ್ಷಾಮದ ಭೀತಿ ಎದುರಾಗಿದ್ದು, ಮೀನುಗಾರಿಕೆಯ ಖರ್ಚು ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗದೆ ಬೋಟುಗಳು ಅವಧಿಗೆ ಮುನ್ನವೇ ಕಡಲ ಕಿನಾರೆಯಲ್ಲಿ ಲಂಗರು ಹಾಕಲು ಆರಂಭಿಸಿದೆ. ಕಳೆದೊಂದು ತಿಂಗಳಿನಿಂದ ಪರ್ಸಿನ್ ಬೋಟ್‌ಗಳು ಸಮುದ್ರಕ್ಕಿಳಿಯುತ್ತಿಲ್ಲ.

ಮತ್ಸ್ಯಕ್ಷಾಮಕ್ಕೆ ತಲೆದೋರಲು ಪ್ರಮುಖ ಕಾರಣ ಹವಾಮಾನ ವೈಪರೀತ್ಯ. ಈ ಬಾರಿ ಮಳೆಗಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಕಾಲ. ಈ ವೇಳೆ ಮಳೆ ನೀರಿನೊಂದಿಗೆ ಆಹಾರವೂ ಸಮುದ್ರ ಸೇರುತ್ತದೆ. ಆದರೆ ಮುಂಗಾರು ಕ್ಷೀಣಗೊಂಡಿದ್ದಲ್ಲದೆ, ಮೀನು ಸಂತತಿ ದಡದ ಬಳಿಗೆ ಬರಲು ಪೂರಕವಾಗುವಂತೆ ಸಮುದ್ರ ಮಂಥನವಾಗದಿರುವುದು ಮತ್ಸ್ಯಕ್ಷಾಮಕ್ಕೆ ಕಾರಣವಾಗಿದೆ.
ಕೈಗಾರಿಕೆಗಳ ಕಲುಷಿತ ನೀರು ಸೇರಿದಂತೆ ಹಲವಾರು ಕಾರಣಗಳಿಂದ ಸಮುದ್ರ ಮಲಿನವಾಗುತ್ತಿದೆ. ಅಲ್ಲದೆ ಅವೈಜ್ಞಾನಿಕ ಮೀನುಗಾರಿಕೆಯು ಮತ್ತ್ಯಕ್ಷಾಮಕ್ಕೆ ಕಾರಣವಾಗುತ್ತಿದೆ. ಜೂನ್, ಜುಲೈನಲ್ಲಿ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆ ಸ್ಥಗಿತದ ಬಳಿಕ ಆಗಸ್ಟ್‌ನಿಂದ ಮೀನು ಹೇರಳವಾಗಿ ಸಿಗುವ ಕಾಲ. ಅದರಲ್ಲೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಯಥೇಚ್ಛವಾಗಿ ಮೀನುಗಳು ಸಿಗುವ ಸಮಯ. ಆದರೆ ಈ ಅವಧಿಯಲ್ಲೇ ಮತ್ಸಕ್ಷಾಮ ಎದುರಾಗಿರುವುದು ಮೀನುಗಾರರಲ್ಲಿ ಮಾತ್ರವಲ್ಲದೆ, ಮೀನುಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ.
ಈ ಬಾರಿಯ ಮೀನುಗಾರಿಕಾ ಋತು ಆರಂಭಗೊಂಡಾಗ ಮೀನುಗಾರರು ಮಂಜುಗಡ್ಡೆ ಸಮಸ್ಯೆಯನ್ನು ಎದುರಿಸಿದ್ದರು. ಸದ್ಯ ಒಂದು ತಿಂಗಳಿನಿಂದ ಬೋಟ್‌ಗಳು ಸಾಕಷ್ಟು ಮೀನು ಸಿಗದೆ ವಾಪಸಾಗುತ್ತಿವೆ. ಅಲ್ಲದೆ ರಪ್ತಾಗುವ ಮಾಂಜಿ, ಅಂಜಲ್, ಮದಿಮಲ್ ಮೀನುಗಳ ಕೊರತೆಯಿಂದ ಮೀನುಗಾರರ ಜೇಬು ತುಂಬುತ್ತಿಲ್ಲ. ಇದರಿಂದ ದೋಣಿಗಳನ್ನು ಸಮುದ್ರಕ್ಕಿಳಿಸಲು ದೋಣಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಬೋಟ್ ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ತವರಿನತ್ತ ಮುಖ ಮಾಡಿದ್ದಾರೆ.

ಸೀಸನ್ ಕಾಲದಲ್ಲಿಯೇ ಮತ್ಸ್ಯಕ್ಷಾಮಕ್ಕೆ ಕಾರಣವಾಗಿ ಬೋಟ್‌ಗಳು ಅವಧಿಗೆ ಮುನ್ನವೇ ಲಂಗರು ಹಾಕಿದ್ದು, ಬೋಟ್ ಮಾಲಕರು, ಕಾರ್ಮಿಕರನ್ನು ಕಂಗೆಡಿಸುವಂತೆ ಮಾಡಿದೆ. ಮೀನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದ ಕಡಲ ಮಕ್ಕಳು ಅತಂತ್ರರಾಗಿದ್ದಾರೆ. ಕರಾವಳಿಯ ಆರ್ಥಿಕತೆಯ ಜೀವನಾಡಿಯಾದ ಮತ್ಸ್ಯೋದ್ಯಮವೇ ಕುಸಿದಿದ್ದು ಸರ್ಕಾರ ನೆರವಿಗೆ ಬರಬೇಕಾಗಿದೆ.











Click it and Unblock the Notifications