ಕರಾವಳಿಯಲ್ಲೂ ಪೌರತ್ವ ಕಾಯ್ದೆ ಹೋರಾಟ: ಮಂಗಳೂರಿನಲ್ಲಿ ನಿಷೇಧಾಜ್ಞೆ
ಮಂಗಳೂರು, ಡಿಸೆಂಬರ್.18: ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರ ದೆಹಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಷ್ಟೇ ಅಲ್ಲ. ಕರ್ನಾಟಕದಲ್ಲೂ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜ್ಯ ಕರಾವಳಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಪಡೆದುಕೊಂಡಿದೆ.
ಡಿಸೆಂಬರ್.19 ಹಾಗೂ ಡಿಸೆಂಬರ್.20ರಂದು ಜಿಲ್ಲೆಯಲ್ಲಿನ ವಿದ್ಯಾರ್ಥಿ ಸಂಘಟನೆ, ಸಂಘ-ಸಂಸ್ಥೆ ಹಾಗೂ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ. ಈ ಹಿನ್ನೆಲೆ ಮುಂದಿನ ಎರಡು ದಿನಗಳ ಕಾಲ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಘೋಷಿಸಲಾಗಿದೆ.
ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಡಿಸೆಂಬರ್.18ರ ರಾತ್ರಿ 9 ಗಂಟೆಯಿಂದ ಡಿಸೆಂಬರ್.20ರವರೆಗೂ ನಿಷೇಧಾಜ್ಞೆಯನ್ನು ಘೋಷಿಸಲಾಗಿದೆ. ಈ ಸಂಬಂಧ ನಗರ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಹೊರಡಿಸಿದ್ದಾರೆ.

ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಇದರಿಂದ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದರು. ಇದನ್ನು ವಿರೋಧಿಸಿ ಮಂಗಳೂರು ನಗರದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಯಾವುದೇ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿತ್ತು.
ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿತ್ತು. ಇದೀಗ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲು ಮಂಗಳೂರು ಜಿಲ್ಲಾ ಖಾಝಿ ಶೈಖನಾ ತ್ವಾಕ್ ಅಹ್ಮದ್ ಮುಸ್ಲಿಯಾರ್ ಕರೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ನಗರದಲ್ಲಿ ನಿಷೇಧಾಜ್ಞೆ ಘೋಷಿಸಿದ್ದಾರೆ.
ನಿಷೇಧಾಜ್ಞೆ ಸಂದರ್ಭದಲ್ಲಿ ಗುಂಪು-ಗುಂಪಾಗಿ ಸೇರುವಂತಿಲ್ಲ. ಹಲ್ಲೆಗೆ ಬಳಸುವಂತಾ ದೊಣ್ಣೆ, ಕತ್ತಿ, ಗದೆ, ಈಟಿ, ಬಂದೂಕು ಸೇರಿದಂತೆ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ. ಅಲ್ಲದೇ ಯಾವುದೇ ರೀತಿಯ ಪ್ರತಿಭಟನಾ ಮೆರವಣಿಗೆ, ಜಾಥಾ, ಧರಣಿ, ಮುಷ್ಕರ ಹಾಗೂ ಸಾರ್ವಜನಿಕ ಮತ್ತು ರಾಜಕೀಯ ಸಮಾರಂಭಗಳನ್ನು ನಡೆಸುವಂತಿಲ್ಲ.












Click it and Unblock the Notifications