ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಕತ್ರಿನಾ ಕೈಫ್: ಸರ್ಪ ಸಂಸ್ಕಾರ ವಿಶೇಷ ಪೂಜೆ
ಬಾಲಿವುಡ್ ನಟ-ನಟಿಯರು ಇತ್ತೀಚಿಗೆ ಕರ್ನಾಟಕದ ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ದೇವಾಲಯಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಕಳೆದ ವಾರವಷ್ಟೇ ಬಾಲಿವುಡ್ ನಟಿ ಸಂಸದೆ ಕಂಗನಾ ರಣಾವತ್ ಉಡುಪಿ ಹಾಗೂ ದಕ್ಷಿಣ ಕನ್ನಡದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದರು. ಇದೀಗ ಮತ್ತೊಬ್ಬ ಪ್ರಸಿದ್ಧ ಬಾಲಿವುಡ್ ನಟಿ ದಕ್ಷಿಣ ಕನ್ನಡದ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಸುಮಾರು 5,000 ವರ್ಷಗಳ ಇತಿಹಾಸ ಇರುವ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಆಗಮಿಸಿದ್ದಾರೆ. ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನಿನ್ನೆ ತಡರಾತ್ರಿ ಆಗಮಿಸಿರುವ ನಟಿ ಕತ್ರಿನಾ ಕೈಫ್ ಇಂದು (ಮಾರ್ಚ್ 11) ಮಂಗಳವಾರ ಮತ್ತು ನಾಳೆ( ಮಾರ್ಚ್ 12) ಬುಧವಾರ ಕ್ಷೇತ್ರದಲ್ಲೇ ಇದ್ದು ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

ನಾಗ ದೋಷ ನಿವಾರಣೆ ಹಾಗೂ ಸರ್ಪ ಸಂಸ್ಕಾರದಿಂದ ಮದುವೆಯಾಗಲು ಹಾಗೂ ಮಗುವಾಗಲು ಸಮಸ್ಯೆ ಇರುತ್ತದೆ. ಹೀಗಾಗಿ ಅನೇಕರು ನಾಗಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂತಾನ ಪ್ರಾಪ್ತಿಗಾಗಿ ಸರ್ಪ ಸಂಸ್ಕಾರ ವಿಶೇಷ ಪೂಜೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ನಟಿ ಕತ್ರಿನಾ ಕೈಫ್ ದೇವರ ದರ್ಶನಕ್ಕೆ ತೆರಳುತ್ತಿರುವ ಕೆಲವು ಫೋಟೋಗಳು ವೈರಲ್ ಆಗಿದೆ.
ಕರಾವಳಿಯಲ್ಲಿ ಕಂಗನಾ ರಣಾವತ್ ಟೆಂಪಲ್ ರನ್
ಇನ್ನು ಕಳೆದ ವಾರ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಉಡುಪಿಗೆ ಭೇಟಿ ನೀಡಿದ್ದಾರೆ. ಇತ್ತೀಚಿಗಷ್ಟೆ ಬಹುಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಕಾಪು ಮಾರಿಯಮ್ಮನ ದೇವಾಲಯಕ್ಕೆ ತೆರಳಿದ್ದ ನಟಿ ಕಂಗನಾ ರಣಾವತ್ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಮಾರಿಯಮ್ಮ ದೇವಿಯ ದರ್ಶನ ಪಡೆದ ನಂತರ ಕಂಗನಾ ರಣಾವತ್ ಹಿರಿಯ ಆರ್‌ಎಸ್‌ಎಸ್ ಮುಖಂಡ ಬಿ.ಎಲ್ ಸಂತೋಷ್ ಭಾಗಿಯಾಗಿರುವ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡಿದ್ದರು.

ಮಾರನೇ ದಿನ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಮಧ್ಯಾಹ್ನದ ಮಹಾ ಪೂಜೆಯಲ್ಲಿ ಭಾಗಿಯಾಗಿದ್ದ ನಟಿ ಕಂಗನಾ ರಣಾವತ್, ದೇವಸ್ಥಾನದಲ್ಲೇ ಅನ್ನ ಪ್ರಸಾದ ಸ್ವೀಕರಿಸಿದ್ದರು. ಉಡುಪಿ ಹಾಗೂ ದಕ್ಷಿಣ ಕನ್ನಡ ಭೇಟಿಯ ವಿಶೇಷ ಕ್ಷಣಗಳನ್ನು ಕಂಗನಾ ರಣಾವತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.












Click it and Unblock the Notifications