ಮಂಗಳೂರು : ಸೂರಿಂಜೆ ಬಳಿ ಬಿಜೆಪಿ ಮುಖಂಡನ ಹತ್ಯೆ
ಮಂಗಳೂರು, ಜ.6 : ಬ್ಯಾಡ್ಮಿಂಟನ್ ಆಡಲು ಹೋಗುತ್ತಿದ್ದ ಬಿಜೆಪಿ ಮುಖಂಡನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಸೂರಿಂಜೆ ಸಮೀಪ ನಡೆದಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯಾದವರನ್ನು ಸ್ಥಳೀಯ ಬಿಜೆಪಿ ಮುಖಂಡ ಹಾಗೂ ವ್ಯಾಪಾರಿ ಕೇಶವ ಶೆಟ್ಟಿ (39) ಎಂದು ಗುರುತಿಸಲಾಗಿದೆ. ಸೂರಿಂಜೆ ಸಮೀಪವಿರುವ ಮೈದಾನಕ್ಕೆ ಮಂಗಳವಾರ ಬೆಳಗ್ಗೆ ಕೇಶವ ಶೆಟ್ಟಿ ಅವರು ಆಟವಾಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆ.

ದುಷ್ಕರ್ಮಿಗಳು ಲಾಂಗು,ಮಚ್ಚುಗಳಿಂದ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಕೇಶವ ಶೆಟ್ಟಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರತಿದಿನ ಕೇಶವ ಶೆಟ್ಟಿ ಅವರು ಬೆಳಗ್ಗೆ 6 ಗಂಟೆಗೆ ಆಟವಾಡಲು ಆಗಮಿಸುತ್ತಾರೆ ಎಂಬ ಖಚಿತ ಮಾಹಿತಿ ಪಡೆದ ದುಷ್ಕರ್ಮಿಗಳು ಈ ಕೊಲೆ ಮಾಡಿದ್ದಾರೆ.
ಸೂರಿಂಜೆಯಲ್ಲಿ ಸಣ್ಣ ವ್ಯಾಪಾರ ಮಾಡಿಕೊಂಡಿದ್ದ ಕೇಶವ ಶೆಟ್ಟಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು. ಸೂರತ್ಕಲ್ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಾಂಜಾ ಮಾರಾಟದ ಬಗ್ಗೆ ಕೇಶವ ಶೆಟ್ಟಿ ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು. ಆದ್ದರಿಂದ ಅವರು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]













Click it and Unblock the Notifications