ಬಂಟ್ವಾಳ: ನಿಧಿ ಆಸೆಗೆ ಮನೆ ಮಂದಿಯನ್ನು ಕಟ್ಟಿ ಹಾಕಿದ್ದ ಆರೋಪಿಗಳ ಬಂಧನ
ಮಂಗಳೂರು, ಫೆಬ್ರವರಿ. 05 : ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿ ಜನವರಿ 24ರಂದು ನಡೆದಿದ್ದ ನಿಧಿ ಶೋಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ಪೈವಳಿಕೆ ನಿವಾಸಿ ಆಶಿಕ್ ಪಿ. (19), ಬಂಟ್ವಾಳ ತಾಲೂಕು ಕನ್ಯಾನ ಗ್ರಾಮ ಇಕ್ಬಾಲ್ ಯಾನೆ ಇಕ್ಕು (22), ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಯಾನೆ ಅಲಿ ಮೋನು (29), ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಅಬ್ಬಾಸ್ (26), ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಅಶ್ರಫ್ ಯಾನೆ (ಎಲ್‌ಟಿಟಿ ಅಶ್ರಫ್) (21) ಎಂದು ಗುರುತಿಸಲಾಗಿದೆ. [ನಿಧಿ ಆಸೆಗೆ ಮನೆ ಮಂದಿಯನ್ನು ಕಟ್ಟಿ ಹಾಕಿದ ಭಲೇ ಕಿಲಾಡಿಗಳು!]

ಬಂಧಿತರಿಂದ ಒಂದು ಇನ್ನೋವಾ, ಒಂದು ಆಲ್ಟೊ ಕಾರು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಪೈವಳಿಕೆ ವಾಸಿ ಶಫಿ ಯಾನೆ ಎಂಎಲ್ ಎ ಶಫಿ, ಕೇರಳದ ಶಫಿ ಯಾನೆ ಚೋಟು ಶಫಿ, ಮಿತ್ತನಡ್ಕ ಹ್ಯಾರಿಸ್ ಸಹಿತ ಕೆಲವರಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಎರಡು ಕಾರುಗಳಲ್ಲಿ ಬಂದಿದ್ದ ತಂಡ ಎರಡು ಗಂಟೆಗಳ ಕಾಲ ಭೂಮಿ ಅಗೆದು ಬೆಳಗ್ಗೆ 4.30 ಕ್ಕೆ ಬರಿಗೈಲಿ ತೆರಳಿದ್ದರು. ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಸಿಸಿ ಕ್ಯಾಮಾರದ ಡಿವಿಆರ್ ಹಾಗೂ ಎರಡು ಮೊಬೈಲ್‌ನಲ್ಲಿದ್ದ ನಾಲ್ಕು ಸಿಮ್ ಗಳನ್ನು ಕದ್ದಿದ್ದರು. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜನವರಿ 24ರಂದು ಕರೋಪಾಡಿ ಗ್ರಾಮದ ಅರಸಳಿಕೆ ವಿಘ್ನರಾಜ ಭಟ್ ಮನೆಗೆ ನುಗ್ಗಿ, ಮನೆಯವರನ್ನು ಬೆದರಿಸಿ ನಿಧಿಶೋಧಕ್ಕೆ ಮುಂದಾಗಿದ್ದರು. ಬಳಿಕ ಅಲ್ಲಿ ನಿಧಿ ಸಿಗದೆ ಬರಿಗೈನಲ್ಲಿ ಪರಾರಿಯಾಗಿದ್ದರು.












Click it and Unblock the Notifications