ಮಂಗಳೂರು; ಬಜರಂಗದಳದಿಂದ ಮತ್ತೆ ಪಬ್ ಮೇಲೆ ದಾಳಿ
ಮಂಗಳೂರು, ಜುಲೈ 26; ಮಂಗಳೂರಿನ ಪಬ್‌ನಲ್ಲಿ ಪಾರ್ಟಿಯಲ್ಲಿ ನಿರತರಾಗಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಬಜರಂಗದಳ ಕಾರ್ಯಕರ್ತರು ತಡೆದ ಘಟನೆ ನಡೆದಿದೆ.
ಮಂಗಳೂರಿನ ರಿ-ಸೈಕಲ್ ದಿ ಲಾಂಜ್ ಪಬ್‌ನಲ್ಲಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದರು. ಕಾಲೇಜು ಫೇರ್‌ವೆಲ್ ನೆಪದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಮಾಹಿತಿ ಇದೆ. ಈ ವೇಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಣಿತ, ಮೋಜು, ಮಸ್ತಿಯಲ್ಲಿ ತೊಡಗಿದ್ದರು ಆರೋಪಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಪಬ್ ಒಳ ಹೊಕ್ಕು ಪಾರ್ಟಿ ನಿಲ್ಲಿಸುವಂತೆ ಸೂಚಿಸಿ ಬೈದು ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದಾರೆ. ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದ್ದಾರೆ. ಸದ್ಯ ಪಾರ್ಟಿ ಅರ್ಧದಲ್ಲೇ ಮೊಟಕುಗೊಳಿಸಿ ವಿದ್ಯಾರ್ಥಿಗಳು ಅಲ್ಲಿಂದ ಹೋಗಿದ್ದಾರೆ. ತುಂಡುಡುಗೆ ತೊಟ್ಟು, ಕುಡಿದು ವಿದ್ಯಾರ್ಥಿಗಳು ಮೋಜು ಮಸ್ತಿಯಲ್ಲಿ ತೊಡಗಿದ್ದರು ಎಂದು ದೂರಲಾಗುತ್ತಿದೆ.

ಬಜರಂಗದಳ ಮುಖಂಡ ಪುನೀತ್ ಅತ್ತಾವರ ನೇತೃತ್ವದಲ್ಲಿ ಕಾರ್ಯಕರ್ತರು ಪಬ್ ಮೇಲೆ ದಾಳಿ ಮಾಡಿದ್ದಾರೆ. ಇತ್ತೀಚೆಗೆ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಕಿಸ್ ಪಂದ್ಯವನ್ನು ವಿರೋಧಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾಲೇಜಿನ ಆಡಳಿತ ಮಂಡಳಿಗೆ ನೇರ ಎಚ್ಚರಿಕೆಯನ್ನು ನೀಡಿತ್ತು.
ಕಾಲೇಜಿನ ಮಕ್ಕಳನ್ನು ಶಿಸ್ತು ಬದ್ಧವಾಗಿ ಇಡಬೇಕು ಮತ್ತು ಅವರು ನೆಲೆಸುವ ಪಿಜಿ ಮತ್ತು ರೂಂಗಳಲ್ಲಿ ಕಡ್ಡಾಯವಾಗಿ ಶಿಸ್ತು ನಿಯಮಗಳನ್ನು ತರಬೇಕು ಎಂದು ಬಜರಂಗದಳ ಆಗ್ರಹಿಸಿತ್ತು.

ಸೋಮವಾರ ರಾತ್ರಿ ವಿದ್ಯಾರ್ಥಿಗಳೆಲ್ಲರೂ ಎಂಟು ಗಂಟೆಗೆ ಪಬ್‌ಗೆ ಹೋಗಿದ್ದರು. ವಿದ್ಯಾರ್ಥಿನಿಯರು ತುಂಡುಡುಗೆಯನ್ನು ಧರಿಸಿದ್ದರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಬ್‌ನಲ್ಲಿ ಅಸಭ್ಯವಾಗಿ ವರ್ತನೆ ಮಾಡಿದ್ದರು ಎಂದು ಬಜರಂಗದಳ ಆರೋಪ ಮಾಡಿದೆ.












Click it and Unblock the Notifications