ಬಾರದ ಏರ್ ಇಂಡಿಯಾ ಪೈಲಟ್:ಇಡೀ ರಾತ್ರಿ ವಿಮಾನದಲ್ಲೇ ಕಳೆದ ಪ್ರಯಾಣಿಕರು
ಮಂಗಳೂರು, ಮಾರ್ಚ್ 28:ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಪೈಲಟ್ ಬಾರದ ಕಾರಣ ಪ್ರಯಾಣಿಕರು ರಾತ್ರಿಯಿಡೀ ವಿಮಾನದಲ್ಲೇ ಕಳೆದ ಪ್ರಸಂಗ ಬೆಳಕಿಗೆ ಬಂದಿದೆ.
ದುಬೈಯಿಂದ-ಮಂಗಳೂರಿಗೆ ನಿನ್ನೆ ರಾತ್ರಿ ಆಗಮಿಸಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್ ಬಾರದ ಕಾರಣ ಮಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ರಾತ್ರಿ ವಿಮಾನ ದಲ್ಲೇ ಕಳೆದಿದ್ದಾರೆ.
ದುಬೈ-ಮಂಗಳೂರು ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿನ್ನೆ ರಾತ್ರಿ (ಮಾ.27 )11:40ಕ್ಕೆ ದುಬೈಯಿಂದ ಹೊರಡಬೇಕಿತ್ತು. ನಿಗದಿಯಂತೆ ಪ್ರಯಾಣಿಕರೆಲ್ಲರೂ ವಿಮಾನ ಏರಿದ ಬಳಿಕ ವಿಮಾನ ಟೆಕ್ ಆಫ್ ಗಾಗಿ ಕಾಯುತ್ತಿದ್ದರು. ಆದರೆ ನಿಗದಿತ ಸಮಯಕ್ಕೆ ಪೈಲಟ್ ಆಗಮಿಸಲೇ ಇಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆವರೆಗೂ ಪ್ರಯಾಣಿಕರು ವಿಮಾನ ದಲ್ಲೇ ಕಾಲ ಕಳೆದಿದ್ದಾರೆ.

ಏರ್ ಇಂಡಿಯಾ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಪೈಲಟ್ ಆಗಮಿಸಿದ್ದು, ವಿಮಾನ ಮಂಗಳೂರಿನತ್ತ ಪಯಣ ಆರಂಭಿಸಿದೆ ಎಂದು ಹೇಳಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರಯಾಣಿಕರಿಗೆ ತಂಗಲು ಯಾವುದೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸದೆ ವಿಮಾನದಲ್ಲೇ ಪ್ರಯಾಣಿಕರನ್ನು ಉಳಿಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಸಂಕಷ್ಟಪಡಬೇಕಾಯಿತು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳ ಪ್ರಕಾರ ಕೊನೆಯ ಕ್ಷಣದಲ್ಲಿ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷ ವಿಮಾನ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ ಪ್ರಯಾಣಿಕರಿಗೆ ತಂಗಲು ಪ್ರತ್ಯೇಕ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ.












Click it and Unblock the Notifications