ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ.27ರಂದು ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 22: ಶ್ರೀಕ್ಷೇತ್ರ ಧರ್ಮಸ್ಥಳ ಅಂದರೆ ಅದು ಧರ್ಮದ ನೆಲೆವೀಡು. ಭಕ್ತ ಕೋಟಿಯ ಆರಾಧನಾ ತಾಣ. ಬೇಡಿದ ಬಯಕೆ ಈಡೇರಿಸುವ ಮಂಜುನಾಥ. ಹೀಗೆ ಕೋಟಿ ಕೋಟಿ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಾರೆ.

ಹಬ್ಬ, ಹರಿದಿನ, ಜನುಮದಿನ, ಮದುವೆಯ ಕಾರ್ಯ ಎಲ್ಲದಕ್ಕೂ ಶ್ರೀ ಕ್ಷೇತ್ರವನ್ನೇ ಆರಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಕ್ಷೇತ್ರವೂ ಕೂಡ ಸಾಮಾಜಿಕ ಕೆಲಸಗಳಿಂದ ಹೆಸರುವಾಸಿಯಾಗಿದೆ. ಅದರಲ್ಲೂ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡುವ ಮಂಜುನಾಥನೆಂದೇ ಹೆಸರುವಾಸಿಯಾಗಿದ್ದಾರೆ. ಕ್ಷೇತ್ರದ ಚತುರ್ದಾನ ಪರಂಪರೆಯನ್ನು ಪಾಲಿಸಿಕೊಂಡು ಬರುತ್ತಿರುವ ಖಾವಂದರು ಜನರ ಕಷ್ಟ, ನೋವು, ಸಾಲದ ಹೊರೆಯನ್ನು ಮನಗಂಡು ತನ್ನ ಕಿರಿಯ ವಯಸ್ಸಿನಲ್ಲೇ ಅಂದರೆ 1972ರಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಿದರು.

 ಸುತ್ತೂರಿನ ಸಾಮೂಹಿಕ ವಿವಾಹದಲ್ಲಿ ಯುವಜನತೆಗೆ ಕಿವಿ ಮಾತು ಹೇಳಿದ ವೀರೇಂದ್ರ ಹೆಗ್ಗಡೆ ಸುತ್ತೂರಿನ ಸಾಮೂಹಿಕ ವಿವಾಹದಲ್ಲಿ ಯುವಜನತೆಗೆ ಕಿವಿ ಮಾತು ಹೇಳಿದ ವೀರೇಂದ್ರ ಹೆಗ್ಗಡೆ

 1972ರಿಂದ ಆರಂಭವಾದ ಸಾಮೂಹಿಕ ವಿವಾಹ ಕಾರ್ಯಕ್ರಮ

1972ರಿಂದ ಆರಂಭವಾದ ಸಾಮೂಹಿಕ ವಿವಾಹ ಕಾರ್ಯಕ್ರಮ

ಹೀಗೆ ಸಾಗಿ ಬಂದ ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯ ಏಪ್ರಿಲ್ 27ರಂದು 50ನೇ ವರ್ಷವನ್ನು ಕಾಣಲಿದೆ. ಈ ಬಾರಿ 200 ಜೋಡಿ ಗೃಹಸ್ಥಾಶ್ರಮಕ್ಕೆ ಪ್ರವೇಶ ಮಾಡಲಿದ್ದಾರೆ. 1972ರಿಂದ ಆರಂಭವಾದ ಮಹಾನ್ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. 12,393 ಜೋಡಿ ಈಗಾಗಲೇ ದಾಂಪತ್ಯ ಜೀವನವನ್ನು ಬಹಳ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ) ಧರ್ಮಸ್ಥಳ ಇದರ ಆಶ್ರಯದಲ್ಲಿ 2022ರ ಏಪ್ರಿಲ್ 27ರಂದು 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಈ ಬಾರಿ 200 ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.

 ಏಪ್ರಿಲ್ 27ರ ಬುಧವಾರ ಸಂಜೆ 6.50ರ ಗೋಧೂಳಿ ಲಗ್ನ ಸುಮೂಹೂರ್ತ

ಏಪ್ರಿಲ್ 27ರ ಬುಧವಾರ ಸಂಜೆ 6.50ರ ಗೋಧೂಳಿ ಲಗ್ನ ಸುಮೂಹೂರ್ತ

ಏಪ್ರಿಲ್ 27ರ ಬುಧವಾರ ಸಂಜೆ 6.50ರ ಗೋಧೂಳಿ ಲಗ್ನ ಸುಮೂಹೂರ್ತದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯ ನೆರವೇರಲಿದೆ. ವಧುವರರಿಗೆ ಕ್ಷೇತ್ರದಿಂದ ಕರಿಮಣಿ, ತಾಳಿ ಮತ್ತು ವಧುವರರ ಉಡುಪು ಮತ್ತು ಹೂವಿನ ಮಾಲೆಯನ್ನು ವಿತರಿಸಲಿದ್ದಾರೆ. 50ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವವರಿಗೆ ಕ್ಷೇತ್ರದಿಂದ ತಲಾ 5000 ಮೊತ್ತದ ವಿಶೇಷ ಉಡುಗೊರೆಯೂ ಲಭ್ಯವಾಗಲಿದೆ. ಈ ಉಡುಗೊರೆಯಲ್ಲಿ ಡೈನಿಂಗ್ ಸೆಟ್, ಡಿನ್ನರ್ ಸೆಟ್ ಸೇರಿದಂತೆ ಅಡುಗೆಯ ಪರಿಕರಗಳನ್ನು ಒದಗಿಸಲಿದ್ದಾರೆ.

50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಗೋಲ್ಡನ್ ಸ್ಟಾರ್ ಖ್ಯಾತಿಯ ಕನ್ನಡ ಚಲನಚಿತ್ರ ನಟ ಗಣೇಶ್ ಭಾಗಿಯಾಗಲಿದ್ದಾರೆ. ಇವರ ಜೊತೆ ನಟ, ನಿರ್ದೇಶಕ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಿ ವಧು-ವರರಿಗೆ ಶುಭ ಹಾರೈಸಲಿದ್ದಾರೆ.

 ಅಮೃತವರ್ಷಿಣಿ ಸಭಾಭವನದವರೆಗೆ ವೈಭವದ ಮೆರೆವಣಿಗೆ

ಅಮೃತವರ್ಷಿಣಿ ಸಭಾಭವನದವರೆಗೆ ವೈಭವದ ಮೆರೆವಣಿಗೆ

ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವ ನವ ಜೋಡಿಗಳನ್ನು ಧರ್ಮಸ್ಥಳದ ವೈಶಾಲಿ ಅತಿಥಿಗೃಹ ಬಳಿಯಿಂದ ಅಮೃತವರ್ಷಿಣಿ ಸಭಾಭವನದವರೆಗೆ ವೈಭವದ ಮೆರೆವಣಿಗೆ ನಡೆಯಲಿದೆ. ಈ ಕಾರ್ಯಕ್ರಮ ಸಂಜೆ 5ರಿಂದ ಆರಂಭವಾಗಲಿದೆ. ಆರಂಭದಲ್ಲಿ ಬಡವರ್ಗದವರಿಗಾಗಿ ಅನ್ನುವ ಯೋಚನೆ ಇತ್ತಾದರೂ ಕ್ರಮೇಣ ಸರಳ ಮದುವೆಯಾಗಲು ಬಯಸುವವರೂ ಕೂಡ ಧರ್ಮಸ್ಥಳದ ಸಾಮೂಹಿಕ ವಿವಾಹದತ್ತ ಆಕರ್ಷಿತರಾಗಿದ್ದಾರೆ. ಈ ಬಾರಿಯೂ ಕೂಡ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಇಂಜಿನಿಯರ್ಸ್, ಪ್ರೋಫೆಸರ್, ವಿಶೇಷ ಚೇತನರು, ಮಧ್ಯಮ ವರ್ಗ, ಬಡವರ್ಗದವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹದಂದು ಅನ್ನಪೂರ್ಣ ಛತ್ರದಲ್ಲಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಬಾರಿಯೂ ಕೂಡ ಮದುವೆಯ ಊಟ ಅನ್ನಪೂರ್ಣದಲ್ಲಿ ಸಿದ್ಧವಾಗಲಿದೆ.

 ಕೊರೊನಾ ಮಧ್ಯೆಯೂ ವಧು ವರರ ಮನೆಯಲ್ಲಿ ವಿವಾಹ

ಕೊರೊನಾ ಮಧ್ಯೆಯೂ ವಧು ವರರ ಮನೆಯಲ್ಲಿ ವಿವಾಹ

ನಿರಂತರವಾಗಿ ನಡೆದುಕೊಂಡು ಬರುತ್ತಿದ್ದ ಸಾಮೂಹಿಕ ವಿವಾಹಕ್ಕೆ 2020ರಲ್ಲಿ ಕೊರೊನಾ ಅಡ್ಡಿಯಾಯಿತು. ಈ ಹಿನ್ನಲೆಯಲ್ಲಿ 2021ರಲ್ಲೂ ನಿರ್ಬಂಧ ಮುಂದುವರೆದಾಗ ಧರ್ಮಾಧಿಕಾರಿಗಳು ವಿವಾಹವನ್ನು ನಡೆಸಲು ಹೊಸ ಯೋಜನೆ ರೂಪಿಸಿದರು. 23 ಜಿಲ್ಲೆಗಳಲ್ಲಿ ಸೇರಿದ ವಧು ವರರ ಮನೆಯಲ್ಲಿ ವಿವಾಹ ನೆರವೇರಿಸಲು ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳ ಮೂಲಕ ವ್ಯವಸ್ಥೆ ಮಾಡಿಸಿದರು. 2021ರ ಏಪ್ರಿಲ್ 30ರಂದು ಆಯಾ ಜೋಡಿಗಳ ಒಪ್ಪಿಗೆಯಂತೆ ಹಿರಿಯರ ನೇತೃತ್ವದಲ್ಲಿ ಅವರವರ ಊರುಗಳಲ್ಲಿಯೇ ವಿವಾಹ ನಡೆಸಲು ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಹೊಸ ಜೋಡಿ ಒಂದುಗೂಡಲು ವೇದಿಕೆಯೊದಗಿಸಿದರು. 2021ರಲ್ಲಿ 131 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಹೀಗೆ 2022ರ ಏಪ್ರಿಲ್ 27ರಂದು ಕೂಡ ವೈಭವದ ಸಾಮೂಹಿಕ ವಿವಾಹಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಂಜುನಾಥನ ಕೃಪೆ, ಖಾವಂದರ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು 200ರಷ್ಟು ಜೋಡಿಗಳು ಕಾಯುತ್ತಿದ್ದಾರೆ.

Recommended Video

DC vs RR ಪಂದ್ಯದಲ್ಲಿ ಅಸಲಿಗೆ ನಡೆದಿದ್ದೇನು | Oneindia Kannada

English summary
The Mass Wedding Ceremony in Dharmasthala which began in 1972, will kick off on April 27 for the 50th year. This time 200 couples are getting married.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X