ಮಂಗಳೂರು: ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ 27 ನೌಕರರ ರಕ್ಷಣೆ
ಮಂಗಳೂರು, ಜೂನ್ 4: ಕಡಲ್ಕೊರೆತ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಚೀನಾ ಮೂಲದ ಕಂಪೆನಿಯ ಬಾರ್ಜ್ ಶನಿವಾರ ದುರಂಥಕ್ಕೀಡಾಗಿತ್ತು. ಇದೀಗ ಬಾರ್ಜ್ ನಲ್ಲಿದ್ದ ಎಲ್ಲಾ 27 ನೌಕರರನ್ನು ರಕ್ಷಿಸಲಾಗಿದೆ. ನಿನ್ನೆ ರಾತ್ರಿಯವರೆಗೆ 4 ಮಂದಿಯನ್ನು ಮಾತ್ರ ರಕ್ಷಿಸಲಾಗಿತ್ತು. ಇಂದು ಮುಂಜಾನೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಮತ್ತೆ ಕಾರ್ಯಾಚರಣೆ ಮುಂದುವರಿಸಿ ಎಲ್ಲರನ್ನೂ ರಕ್ಷಿಸಿದ್ದಾರೆ.
ಉಳ್ಳಾಲದ ಮೊಗವೀರ ಪಟ್ಟಣದ ಅರಬ್ಬೀ ಸಮುದ್ರದಲ್ಲಿ ಬಾರ್ಜ್ ಅಪಘಾತಕ್ಕೀಡಾಗಿತ್ತು. ಬಾರ್ಜ್ ನಲ್ಲಿದ್ದ ಎಲ್ಲಾ 27 ನೌಕರರನ್ನು ರಕ್ಷಿಸಲಾಗಿದೆ. ಕೋಸ್ಟ್‌ಗಾರ್ಡ್ ಮತ್ತು ಅಧಿಕಾರಿಗಳಪ್ರಕಾರ ಬಾರ್ಜ್ ಭಾಗಶಃ ಹಾನಿಗೊಂಡಿದ್ದು, ಬಾರ್ಜ್‌ನೊಳಗೆ ನೀರು ನುಗ್ಗಿಲ್ಲ. ಬಾರ್ಜ್ ಮುಳುಗಡೆಯಾಗದು ಎಂದು ಅಧಿಕಾರಿಗಳು ಹೇಳಿದ್ದು ಬಾರ್ಜನ್ನೂ ಎಳೆದು ತರುವ ಕಾರ್ಯಾಚರಣೆ ನಡೆಯುತ್ತಿದೆ.[ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ]

ಇನ್ನು ಒಂದೊಮ್ಮೆ ಇಂದು ಬಾರ್ಜ್‌ನೊಳಗೆ ಸಿಲುಕಿಕೊಂಡಿದ್ದ ಸಿಬ್ಬಂದಿಗಳ ರಕ್ಷಣೆಗೆ ಅಗತ್ಯ ಬಿದ್ದರೆ ಹೆಲಿಕಾಪ್ಟರ್ ಬಳಸಲು ಯೋಚಿಸಲಾಗಿತ್ತು. ಇದಕ್ಕಾಗಿ "ರಾಜ್ಯದ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅವರೊಂದಿಗೆ ಮಾತನಾಡಿ ಗೋವಾ ಮತ್ತು ದೆಹಲಿಯಿಂದ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗಾಗಿ ಸಿದ್ಧಗೊಳಿಸಲಾಗಿತ್ತು . ಅಗತ್ಯಬಿದ್ದರೆ ಉಳ್ಳಾಲಕ್ಕೆ ಹೆಲಿಕಾಫ್ಟರ್ ತರಿಸುವುದಾಗಿ ನಾನು ತೀರ್ಮಾನಿಸಿದ್ದೆ," ಎಂದು ಸಚಿವ ಯುಟಿ ಖಾದರ್ 'ಒನ್ ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿದ್ದಾರೆ.

"60 ಕಿ.ಮೀ. ವೇಗದಲ್ಲಿ ಸಮುದ್ರದಲ್ಲಿ ಬೀಸುತ್ತಿದ್ದ ಬಿರುಸಿನ ಗಾಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೋಸ್ಟ್‌ಗಾರ್ಡ್‌ನವರು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿನ್ನೆ ಸ್ಥಗಿತಗೊಳಿಸಿದ್ದರು. ಗಾಳಿಯ ವೇಗ ಕಡಿಮೆಯಾದ ನಂತರ ಮತ್ತೆ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸುವಲ್ಲಿ ಕೋಸ್ಟ್‌ಗಾರ್ಡ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ," ಎಂದು ಖಾದರ್ ಹೇಳಿದ್ದಾರೆ.

ಶನಿವಾರ ಉಳ್ಳಾಲ ಮೊಗವೀರಪಟ್ಣದ ಸಮುದ್ರ ತೀರದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಬಾರ್ಜ್ ಅಪಾಯಕ್ಕೆ ಸಿಲುಕಿಕೊಂಡಿತ್ತು. ಎಡಿಬಿ ಯೋಜನೆಯಡಿಯಲ್ಲಿ 223 ಕೋಟಿ ವೆಚ್ಚದಲ್ಲಿ ಕಡಲ್ಕೊರೆತ ತಡೆಗೋಡೆ ನಿರ್ಮಾಣ ಕಾಮಾಗಾರಿಗಾಗಿ ಈ ಬಾರ್ಜ್ ಬಂದಿತ್ತು. ಬಾರ್ಜ್ ಸಮುದ್ರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿದ್ದರಿಂದ ಅದರಲ್ಲಿದ್ದ 27 ಮಂದಿ ಅಪಾಯಕ್ಕೆ ಸಿಲುಕ್ಕಿಕೊಂಡಿದ್ದರು.












Click it and Unblock the Notifications