ಕುಮಾರಧಾರಾ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಸಾವು
ಮಂಗಳೂರು, ಸೆಪ್ಟೆಂಬರ್ 6 : ಸ್ನಾನಕ್ಕೆಂದು ನದಿಗೆ ಇಳಿದ ಇಬ್ಬರು ನೀರು ಪಾಲಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕುದ್ಮಾರು ಗ್ರಾಮದ ಶಾಂತಿಮೊಗೇರು ಸೇತುವೆಯ ಸಮೀಪ ಈ ಘಟನೆ ನಡೆದಿದೆ.
ಕಡಬದ ಕುಟ್ರಿಪ್ಪಾಡಿ ನಿವಾಸಿಗಳಾದ ಹರಿ ಮತ್ತು ಸತ್ಯ ಮಂಗಳವಾರ ಸಂಜೆ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ . ಘಟನಾ ಸ್ಥಳದಲ್ಲಿ ಸ್ಥಳೀಯರು ಹಾಗೂ ಅಗ್ನಿಶಾಮಕದಳದವರಿಂದ ಶೋಧ ಕಾರ್ಯ ನಡೆಯಿತು.

ಕಳೆದ ಶನಿವಾರದಂದು ಕುಮಾರಧಾರಾ ನದಿಗೆ ಸ್ಥಾನಕ್ಕೆಂದು ಬಂದ ಬಂಟ್ವಾಳದ ಪೊಳಲಿ ನಿವಾಸಿ ಹರಿ ಎಂಬವರು ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಯುತ್ತಿದ್ದ ಸಮಯದಲ್ಲೇ ಮಂಗಳವಾರ ಮತ್ತೆ ಇಬ್ಬರು ನದಿ ಪಾಲಾಗಿದ್ದಾರೆ.
ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದರೂ ಅದನ್ನು ನಿರ್ಲಕ್ಷಿಸಿ ಜನರು ಈಜಲು ಹಾಗೂ ಸ್ನಾನ ಮಾಡಲು ತೆರಳುತ್ತಿರುವುದಾದರೂ ಏಕೆ ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications