ಮಂಗಳೂರು: ಗೂಡ್ಸ್ ರೈಲಿನಡಿ ಸಿಲುಕಿ 17 ಎಮ್ಮೆಗಳ ದಾರುಣ ಸಾವು
ಮಂಗಳೂರು, ಮೇ 15: ಗೂಡ್ಸ್ ರೈಲಿನಡಿ ಸಿಲುಕಿ 17 ಎಮ್ಮೆಗಳು ದಾರುಣವಾಗಿ ಮೃತಪಟ್ಟ ಘಟನೆ ಜೋಕಟ್ಟೆ ಅಂಗರಗುಂಡಿ ಬಳಿ ನಡೆದಿದೆ. ಮೇ.14ರ ಭಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಟ್ಟು 17 ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದಾರೆ. ಕೆಲವು ಎಮ್ಮೆಗಳು ಸುಮಾರು 25 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದ್ದು, ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮೂರು ಎಮ್ಮೆಗಳನ್ನು ರಕ್ಷಿಸಿದ್ದಾರೆ.

ದಕ್ಷಿಣ ಕನ್ನಡ: ವ್ಯಕ್ತಿ ಮೃತದೇಹದೊಂದಿಗೆ 6.65 ಲಕ್ಷ ರೂಪಾಯಿ ಪತ್ತೆ
ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ದೂರವಾಣಿ ವಿನಿಮಯ ಕೇಂದ್ರದ ಸಮೀಪ ವ್ಯಕ್ತಿಯೋಬ್ಬರ ಶವ ಪತ್ತೆಯಾಗಿದ್ದು, ಮೃತದೇಹದ ಬಳಿ ಆರು ಲಕ್ಷಕ್ಕೂ ಅಧಿಕ ಮೊತ್ತ ಪತ್ತೆಯಾಗಿದೆ ಎನ್ನಲಾಗಿದೆ. ಮಡಿಕೇರಿ ಕುಶಾಲನಗರ ಮೂಲದ ತಮ್ಮಯ್ಯ (55) ಮೃತ ವ್ಯಕ್ತಿ ಎನ್ನಲಾಗಿದೆ.
ಉಜಿರೆಯಲ್ಲಿ ಬಹಳ ಸಮಯದಿಂದ ವಾಸವಿದ್ದ ತಮ್ಮಯ್ಯ ಬಸ್ ತಂಗುದಾಣ, ಮುಚ್ಚಿದ ಅಂಗಡಿಗಳ ಮುಂದೆ ಮಲಗುತ್ತಿದ್ದರು. ಶುಕ್ರವಾರ ಸಂಜೆ ಇವರ ಮೃತದೇಹ ದೂರವಾಣಿ ವಿನಿಮಯ ಕೇಂದ್ರದ ಬಳಿ ಪತ್ತೆಯಾಗಿದೆ. ಪೊಲೀಸರ ಸಮ್ಮುಖದಲ್ಲಿ ಕುಟುಂಬದವರ ಪತ್ತೆಗಾಗಿ ವ್ಯಕ್ತಿಯ ಮೃತದೇಹದ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಸುಮಾರು 6.65 ಲಕ್ಷ ರೂ. ಹಣ ಪತ್ತೆಯಾಗಿದೆ. ತಮ್ಮಯ್ಯ ವಾರಸುದಾರರ ಕುರಿತು ಯಾರಿಗೂ ಮಾಹಿತಿ ಇಲ್ಲದ ಕಾರಣ ಹಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದು ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಆರಕ್ಷಕ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications