11 ನಿಮಿಷ ತಡವಾಗಿದ್ದಕ್ಕೆ ಒಂದು ಗಂಟೆಯ ಸ್ಯಾಲರಿ ಕಟ್‌!ಕಂಪನಿಯ ನಿಯಮಾನುಸಾರವೇ ತಕ್ಕ ಉತ್ತರ ಕೊಟ್ಟ ಉದ್ಯೋಗಿ

ಕಚೇರಿಯಲ್ಲಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಉದ್ಯೋಗಿಯ ಜವಾಬ್ದಾರಿ. ಆದರೆ ನಿಯಮಗಳ ಮೂಟೆಯನ್ನು ಉದ್ಯೋಗಿಗಳ ಮೇಲೆ ಮಾತ್ರ ಹೊರಿಸಿ ಕಂಪನಿ ಅವುಗಳನ್ನು ನಿರ್ಲಕ್ಷಿಸಿದರೆ ಏನಾಗಬಹುದು? ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ಘಟನೆ ಈ ಪ್ರಶ್ನೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಕಂಪನಿ ಕಟ್ಟುನಿಟ್ಟಿನ ಹಾಜರಾತಿ ನೀತಿಯನ್ನು ಒಳಗೊಂಡಿತ್ತು. ಅಲ್ಲಿ ಉದ್ಯೋಗಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕು. ಇಲ್ಲವಾದರೆ ಸಂಬಳಕ್ಕೆ ಕತ್ತರಿ ಹಾಕುವಲ್ಲಿ ಮುಲಾಜೇ ಇಲ್ಲ. ಜೆನ್‌ ಝೀ ಉದ್ಯೋಗಿ ಕೇವಲ 11 ನಿಮಿಷ ತಡವಾಗಿ ಬಂದ ಕಾರಣ ನೀಡಿ ಕಂಪನಿ ಒಂದು ಗಂಟೆಯ ಸಂಪೂರ್ಣ ಸಂಬಳವನ್ನು ಕಟ್‌ ಮಾಡುತ್ತದೆ. ಉದ್ಯೋಗಿಗೆ ಈ ವಿಷಯ ತಿಳಿಸಿದಾಗ ಅವರು ವಾದಕ್ಕೆ ಇಳಿಯಲಿಲ್ಲ, ಬದಲಾಗಿ ಸರಿ ಎಂದು ಸುಮ್ಮನಾಗುತ್ತಾರೆ. ಆದರೆ ಕೆಲವು ದಿನಗಳ ನಂತರ, ಕಂಪನಿಯ ನಿಯಮವನ್ನು ಅದರ ವಿರುದ್ದವೇ ಬಳಸುತ್ತಾರೆ.

Gen Z Reaction

ಪ್ರತಿ 10 ನಿಮಿಷ ವಿಳಂಬಕ್ಕೆ 1 ಗಂಟೆ ವೇತನ ಕಡಿತ:

ಈ ಸಂಪೂರ್ಣ ಘಟನೆಯನ್ನು X ಬಳಕೆದಾರ ವುಲ್ಫ್ ಎಂಬುವವರು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕಂಪನಿಯು ಇತ್ತೀಚೆಗೆ ಹೊಸ ಹಾಜರಾತಿ ನೀತಿಯನ್ನು ಜಾರಿಗೆ ತಂದಿದೆ ಎಂದು ಅವರು ವಿವರಿಸಿದ್ದಾರೆ. ಈ ನಿಯಮದ ಪ್ರಕಾರ, ಒಬ್ಬ ಉದ್ಯೋಗಿ 10 ನಿಮಿಷ ತಡವಾಗಿ ಬಂದರೆ, ಅವರ ಒಂದು ಗಂಟೆಯ ವೇತನಕ್ಕೆ ಕತ್ತರಿ ಹಾಕುವ ನಿರ್ಧಾರಕ್ಕೆ ಕಂಪನಿ ಬಂದಿತ್ತು. ಇನ್ನು ಮುಂದೆ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು ಅತ್ಯಗತ್ಯ ಮತ್ತು ಎಲ್ಲಾ ಉದ್ಯೋಗಿಗಳು ಈ ನಿಯಮವನ್ನು ತಪ್ಪದೇ ಪಾಲಿಸಬೇಕು ಎಂದು ಕಂಪನಿ ಹೇಳಿದೆ. ಆದರೆ, ಅನೇಕ ಉದ್ಯೋಗಿಗಳಿಗೆ ಕಂಪನಿಯ ಈ ನೀತಿ ಇಷ್ಟವಾಗಲಿಲ್ಲ.

ಪೋಸ್ಟ್ ಪ್ರಕಾರ, ಕಂಪನಿಯ ಜೆನ್‌ ಝೀ ಉದ್ಯೋಗಿಯೊಬ್ಬರು, ಸೋಮವಾರ ಕಚೇರಿಗೆ 11 ನಿಮಿಷ ತಡವಾಗಿ ಬಂದರು. ನಿಯಮಗಳ ಪ್ರಕಾರ, ಅವರ ಒಂದು ಗಂಟೆಯ ಸಂಬಳವನ್ನು ಕಡಿತಗೊಳಿಸಲಾಯಿತು. ಆದರೆ, ಆ ಉದ್ಯೋಗಿ ಆಡಳಿತ ಮಂಡಳಿಯೊಂದಿಗೆ ವಾದ ಮಾಡಲಿಲ್ಲ. ಕಂಪನಿಯ ನಿರ್ಧಾರವನ್ನು ದೂರಲೂ ಇಲ್ಲ, ಪ್ರತಿಭಟಿಸಲೂ ಇಲ್ಲ. ಕಂಪನಿಯ ನೀತಿಯನ್ನು ಒಪ್ಪಿಕೊಂಡರು.

ಕಂಪನಿಗೇ ಮುಳ್ಳಾದ ಹೊಸ ನೀತಿ:

ಈ ಕಥೆ ಅಲ್ಲಿಗೇ ಮುಗಿಯಲಿಲ್ಲ. ಕೆಲವು ದಿನಗಳ ನಂತರ, ಅಂದರೆ ಅದೇ ವಾರದಲ್ಲಿ ಶುಕ್ರವಾರ, ಕಚೇರಿಯ ಇಂಟರ್ನೆಟ್ ಸಂಪರ್ಕ ಇದ್ದಕ್ಕಿದ್ದಂತೆ ಕಡಿತಗೊಂಡಿತು. ಕಂಪನಿಯ ಇಂಟರ್ನೆಟ್ ಸುಮಾರು ಒಂದು ಗಂಟೆ ಕಾಲ ಸ್ಥಗಿತಗೊಂಡಿದ್ದರಿಂದ ನೌಕರರ ಕೆಲಸಕ್ಕೆ ಅಡ್ಡಿ ಉಂಟಾಯಿತು. ಮತ್ತೆ ಇಂಟರ್ನೆಟ್ ಸಮಸ್ಯೆ ಸರಿಯಾದಾಗ ಆಡಳಿತ ಮಂಡಳಿಯು ನೌಕರರಿಗೆ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಕಚೇರಿಯಲ್ಲಿಯೇ ಇರಬೇಕಾಗುತ್ತದೆ ಎಂದು ತಿಳಿಸಿತು.

ಆ ಕ್ಷಣದಲ್ಲಿ ಆ ಜೆನ್‌ ಝೀ ಉದ್ಯೋಗಿ ಕಂಪನಿಯ ನಿಯಮಗಳನ್ನು ಕಂಪನಿಗೇ ತಿಳಿಸಿದ್ದಾರೆ. ವುಲ್ಫ್ ಎಂಬ ಬಳಕೆದಾರರ ಪೋಸ್ಟ್ ಪ್ರಕಾರ, ಉದ್ಯೋಗಿ ತನ್ನ ಕೆಲಸದ ಅವಧಿ ಮುಗಿಯುತ್ತಿದ್ದ ಹಾಗೆಯೇ ತನ್ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಹೊರಡುತ್ತಾರೆ. 11 ನಿಮಿಷಗಳ ತಡವಾಗಿ ಬಂದರೆ ಒಂದು ಗಂಟೆಯ ಸಂಬಳ ಕಟ್‌ ಎಂದಾದರೆ, ಒಂದು ಗಂಟೆ ಇಂಟರ್ನೆಟ್ ಸ್ಥಗಿತಗೊಳ್ಳುವುದು ಕೂಡಾ ಅದೇ ನಿಯಮದಡಿ ಬರುತ್ತದೆ. ನನ್ನ ಕೆಲಸದ ಅವಧಿ ಮುಗಿದಿದೆ, ಸೋಮವಾರ ಭೇಟಿಯಾಗೋಣ ಎಂದು ಹೇಳಿ ಹೊರ ನಡೆದಿದ್ದಾರೆ. ಉದ್ಯೋಗಿಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಿಯಮಗಳು ಎಲ್ಲರಿಗೂ ಸಮಾನವಾಗಿರಬೇಕು:

ಈ ಘಟನೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಉದ್ಯೋಗಿಯನ್ನು ಹೊಗಳಿದ್ದಾರೆ. ಉದ್ಯೋಗಿ ಯಾವುದೇ ತಪ್ಪು ಮಾಡಿಲ್ಲ ಕಂಪನಿಯ ನಿಯಮಗಳನ್ನು ನ್ಯಾಯಯುತವಾಗಿ ಜಾರಿಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಉದ್ಯೋಗಿಗಳು ಜವಾಬ್ದಾರಿಯುತರಾಗಿರಬೇಕು ಎಂದು ನಿರೀಕ್ಷಿಸಿದರೆ, ಕಂಪನಿಯು ತನ್ನ ಜವಾಬ್ದಾರಿಯನ್ನು ಪೂರೈಸಬೇಕು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಈ ಮಧ್ಯೆ ಸೋಮವಾರ ವಾದಿಸುವ ಬದಲು, ಉದ್ಯೋಗಿ ಸರಿಯಾದ ಕ್ಷಣಕ್ಕಾಗಿ ಕಾಯುತ್ತಿದ್ದರು. ಅವಕಾಶ ಸಿಕ್ಕಾಗ ಕಂಪನಿಯ ನಿಯಮಗಳನ್ನು ಕಂಪನಿಯ ವಿರುದ್ಧವೇ ಬಳಸಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

ಕೆಲಸದ ಸಂಸ್ಕೃತಿಯ ಬಗ್ಗೆ ಹೊಸ ಚರ್ಚೆ ಆರಂಭ:

ಈ ವೈರಲ್ ಘಟನೆಯು ಕಚೇರಿ ಸಂಸ್ಕೃತಿ ಮತ್ತು ಉದ್ಯೋಗಿ ಹಕ್ಕುಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕಂಪನಿಗಳು ಕಟ್ಟುನಿಟ್ಟಾದ ನಿಯಮಗಳನ್ನು ನಿಗದಿಪಡಿಸುವ ಹಕ್ಕನ್ನು ಹೊಂದಿದ್ದರೂ, ಅದೇ ನಿಯಮಗಳು ನಿರ್ವಹಣೆಗೂ ಅನ್ವಯಿಸಬೇಕು ಎನ್ನುವುದು ಹಲವರ ವಾದ. ಕೆಲವು ಬಳಕೆದಾರರು ನೌಕರರನ್ನು ಪ್ರತಿ ನಿಮಿಷಕ್ಕೂ ಲೆಕ್ಕ ಹಾಕಲು ಕೇಳಿದರೆ, ಕಂಪನಿಯು ಅವರ ಸಮಯ ಮತ್ತು ಶ್ರಮದ ಮೌಲ್ಯವನ್ನು ಸಹ ಗುರುತಿಸಬೇಕು ಎಂದು ಗಮನ ಸೆಳೆದಿದ್ದಾರೆ.

ಕಚೇರಿ ನಿಯಮಗಳು ಉದ್ಯೋಗಿಗಳಿಗೆ ಮಾತ್ರವೇ?:

ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹೇಳಿಕೆಯನ್ನು ಆಧರಿಸಿದೆ. ಅದೇನೇ ಇದ್ದರೂ, ಇದು ಒಂದು ಮಹತ್ವದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಹೊಸ ಪೀಳಿಗೆಯ ಉದ್ಯೋಗಿಗಳು ತಮ್ಮ ಹಕ್ಕುಗಳು ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಅದಕ್ಕಾಗಿಯೇ ಇಂತಹ ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಚರ್ಚೆಯ ವಿಷಯವಾಗುತ್ತವೆ. ಈ ಇಡೀ ಘಟನೆಯಿಂದ ಒಂದು ವಿಷಯವಂತೂ ಸ್ಪಷ್ಟ. ಅದೇನೆಂದರೆ ನಿಯಮಗಳು ಎಲ್ಲರಿಗೂ ಒಂದೇ ಆಗಿದ್ದಾಗ ಮಾತ್ರ ವ್ಯವಸ್ಥೆ ಗಟ್ಟಿಯಾಗಿರುತ್ತದೆ. ನೀತಿ, ನಿಯಮ, ನ್ಯಾಯ ಉದ್ಯೋಗಿಗಳಿಂದ ಮಾತ್ರವಲ್ಲ ಕಂಪನಿಗಳಿಂದಲೂ ನಿರೀಕ್ಷಿಸಲಾಗುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+