ಸಾಧನೆಗೆ ವಯಸ್ಸಿನ ಹಂಗಿಲ್ಲ: 44ರಲ್ಲಿ ಐಐಟಿ ಪಿಎಚ್ಡಿ, 59ನೇ ವಯಸ್ಸಿನಲ್ಲಿ ಈಗ ಹೊಸ ಸಾಧನೆ; ಇದು ಆಶು ಜೈನ್ ಯಶಸ್ವಿ ಪಯಣ
ಇಂಗ್ಲೀಷ್ನಲ್ಲಿ ಒಂದು ವ್ಯಾಖ್ಯಾನವಿದೆ. ʼಎಜ್ ಇಸ್ ಜಸ್ಟ್ ಅ ನಂಬರ್ʼ ಅಂದರೆ ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೇ. ಹಾಗೆಯೇ ಸಾಧಿಸುವ ಹಠವೊಂದಿದ್ದರೆ ಸಾಧನೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಈ ಮಾತಗಳನ್ನಾ ನಾವು ಆಗಾಗ ಕೇಳುತ್ತಿರುತ್ತೇವೆ. ಅದೇ ರೀತಿ ಡೆಹ್ರಾಡೂನ್ ಮೂಲದ 59 ವರ್ಷದ ಆಶು ಜೈನ್ ಎಂಬುವವರು ಈ ಮಾತನ್ನಾ ಸಾಬೀತು ಮಾಡಿ ತೋರಿಸಿದ್ದಾರೆ.
ಹೆಚ್ಚಿನವರು ಜೀವನದಲ್ಲಿ ಒಂದು ಕೆಲಸ ಸಿಕ್ಕರೆ ಸಾಕು ಎಂದು ಕಾಯುತ್ತಿರುತ್ತಾರೆ. ಕೆಲಸ ಸಿಕ್ಕ ನಂತರ ಜೀವನಪೂರ್ತಿ ಆ ಒಂದೇ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಒದ್ದಾಡುತ್ತಿರುತ್ತಾರೆ. ಆದರೆ, ಆಶು ಜೈನ್ ಅವರು ತಮ್ಮ ಜೀವನದ ವಿವಿಧ ಘಟ್ಟಗಳಲ್ಲಿ ಬೇರೆ ಬೇರೆ ಕೆಲಸ ಮಾಡಿಕೊಂಡು, ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಇವರ ಈ ಪಯಣ ಪ್ರತಿಯೊಬ್ಬರಿಗೂ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಅತ್ಯಂತ ಸ್ಪೂರ್ತಿಯಾಗಿದೆ.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಿದ್ದ ಆಶು ಅವರು ಆರಂಭದಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ ಶುರು ಮಾಡಿದ್ದರು. ಆದರೆ, ತಾಯಿಯಾದ ಬಳಿಕ ಮಕ್ಕಳ ಆರೈಕೆಗಾಗಿ ತಮ್ಮ ವೃತ್ತಿಜೀವನಕ್ಕೆ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡರು. ಆಶು ಅವರು ಈ ಬ್ರೇಕ್ ತಗೆದುಕೊಂಡಾಗ "ನೀನು ಶಿಕ್ಷಕಿಯಾಗಿ ಮುಂದುವರಿಸಿದ್ದರೆ ಈ ಹೊತ್ತಿಗೆ ಪ್ರೊಫೆಸರ್ ಆಗಿರುತ್ತಿದ್ದೆ" ಎಂದು ಹಲವರು ಟೀಕಿಸಿದ್ದರು. ಆದರೆ, ತಮ್ಮ ಮೂವರು ಮಕ್ಕಳನ್ನು ಬೆಳೆಸುವಾಗ ಸಿಕ್ಕಿದ ಖುಷಿ ಮತ್ತೊಂದರಲ್ಲಿ ಸಿಗಲ್ಲ ಎಂದು ಹೇಳಿದ ಆಶು, ಮತ್ತೆ ಅವಕಾಶ ಸಿಕ್ಕರೇ ಮುಂದೆ ಕೂಡ ನಾನು ಇದೇ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
44ನೇ ವಯಸ್ಸಿನಲ್ಲಿ ಐಐಟಿ ದೆಹಲಿಯಿಂದ ಪಿಎಚ್ಡಿ
ಮಕ್ಕಳು ದೊಡ್ಡವರಾಗುತ್ತಿದ್ದ ಹಾಗೆಯೇ ಆಶು ಜೈನ್ ಅವರು ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದರು. ತಮ್ಮ 44ನೇ ವಯಸ್ಸಿನಲ್ಲಿ ಮತ್ತೆ ಕಾಲೇಜು ಮೆಟ್ಟಿಲೇರಿದ ಅವರು, ಎಂಟೆಕ್ ಮುಗಿಸಿ, ಪ್ರತಿಷ್ಠಿತ ಐಐಟಿ ದೆಹಲಿಯಿಂದ ಪಿಎಚ್ಡಿ ಪದವಿ ಪಡೆದರು. ನಲವತ್ತು ಹಾಗೂ ಐವತ್ತರ ಹರೆಯದಲ್ಲಿ ಮತ್ತೆ ವಿದ್ಯಾರ್ಥಿ ಜೀವನವನ್ನು ಅನುಭವಿಸಿದ್ದು ತಮ್ಮ ಜೀವನದ ಅತ್ಯಂತ ಖುಷಿಯ ದಿನಗಳು ಎಂದು ಅವರು ಹೇಳಿದ್ದಾರೆ.

ಕಂಟೆಂಟ್ ಕ್ರಿಯೇಷನ್ಗೆ ಎಂಟ್ರಿ
ಪಿಎಚ್ಡಿ ಮುಗಿಸಿದ ನಂತರ ಮತ್ತೆ ಶಿಕ್ಷಕಿಯಾಗಿ ಅಥವಾ ಸಂಶೋಧನಾ ಕ್ಷೇತ್ರಕ್ಕೆ ಮರಳುವ ಉದ್ದೇಶ ಅವರಿಗಿತ್ತು. ಆದರೆ, ಮೆನೋಪಾಸ್ ಕಾರಣದಿಂದಾಗಿ ಅವರಲ್ಲಿರುವ ಶಕ್ತಿ ಸ್ವಲ್ಪ ಕಡಿಮೆಯಾದಂತೆ ಅನಿಸಿತು. ನಂತರ, ಸುಮ್ಮನೆ ಕೂರುವ ಬದಲು ಹೊಸತೇನನ್ನಾದರೂ ಕಲಿಯಬೇಕು ಎಂಬ ಹಂಬಲದಿಂದ ಅವರು ವಿಡಿಯೋ ಎಡಿಟಿಂಗ್ ಕಲಿಯಲು ಆರಂಭಿಸಿದರು. ಬಳಿಕ, ವಿಡಿಯೋಗಳನ್ನಾ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲು ಶುರುಮಾಡಿದ ಅವರು, ಇಂದು ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಗಿ ಲಕ್ಷಾಂತರ ಫಾಲೋವರ್ಸ್ ಸಂಪಾದಿಸಿದ್ದಾರೆ.
ರೋಡೀಸ್ ಸ್ಪರ್ಧಿ ಹಾಗೂ ಹೈರಾಕ್ಸ್ ಅಥ್ಲೀಟ್ ಆಗಿ ಮಿಂಚು
ತಮ್ಮ ಬಾಲ್ಯದಲ್ಲಿ ತಂದೆಯ ವರ್ಗಾವಣೆಯಾಗುತ್ತಿದ್ದ ಕಾರಣಕ್ಕೆ ಹೊಸ ಊರು, ಹೊಸ ಜನರಿಗೆ ಬೇಗನೆ ಹೊಂದಕೊಳ್ಳುವ ಗುಣವನ್ನು ಆಶು ಚಿಕ್ಕಂದಿನಿಂದಲೇ ಕರಗತ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಅವರಿಗೆ ಬದಲಾವಣೆಗಳು ಎಂದಿಗೂ ಭಯ ಹುಟ್ಟಿಸಲಿಲ್ಲ. ವಾಕಿಂಗ್ ಮತ್ತು ಟ್ರೆಕ್ಕಿಂಗ್ನಿಂದ ಆರಂಭವಾದ ಅವರ ಫಿಟ್ನೆಸ್ ಆಸಕ್ತಿ, ಇಂದು ಅವರನ್ನು ಸ್ಟ್ರೆಂತ್ ಟ್ರೈನಿಂಗ್ ಹಾಗೂ ಸ್ಪರ್ಧಾತ್ಮಕ ಕ್ರೀಡೆಗಳತ್ತ ಕೊಂಡೊಯ್ದಿದೆ. 'ರೋಡೀಸ್ ಸೀಸನ್ 20' ಯುವಕರು ಮಾತ್ರ ಭಾಗವಹಿಸುವ ಈ ಶೋನಲ್ಲಿ ಸ್ಪರ್ಧಿಯಾಗಿ ಹಾಗೂ 'ಹೈರಾಕ್ಸ್' ಫಿಟ್ನೆಸ್ ಅಥ್ಲೀಟ್ ಆಗಿ ಅವರು ಇಂದು ಹೊಸ ಮೈಲಿಗಲ್ಲು ಇಟ್ಟಿದ್ದಾರೆ.
'ನೀನು ಶೂ ತಯಾರಿಸಿದರೆ ತಪ್ಪಿಲ್ಲ, ಆದರೆ ಕಳಪೆ ಶೂ ತಯಾರಿಸಬಾರದು, ಏನೇ ಮಾಡಿದರೂ ಅದನ್ನು ಶ್ರದ್ಧೆಯಿಂದ ಮಾಡು' ಎಂಬ ತಮ್ಮ ಮಾವನ ಮಾತನ್ನು ಅವರು ಇಂದಿಗೂ ಪಾಲಿಸುತ್ತಿದ್ದಾರೆ. ಶಿಕ್ಷಕಿಯಾಗಿ, ತಾಯಿಯಾಗಿ, ವಿದ್ಯಾರ್ಥಿಯಾಗಿ, ಅಜ್ಜಿಯಾಗಿ ಹಾಗೂ ಈಗ ಕಂಟೆಂಟ್ ಕ್ರಿಯೇಟರ್ ಆಗಿ ಪ್ರತಿ ಹಂತವನ್ನೂ ಸಂಪೂರ್ಣವಾಗಿ ಆನಂದಿಸಿರುವ ಆಶು ಜೈನ್ ಅವರ ಈ ಕಥೆ, ಬೇರೆಯವರ ನಿರೀಕ್ಷೆಗಳಿಗೆ ತಕ್ಕಂತೆ ಬದುಕುವುದನ್ನು ಬಿಟ್ಟು ನಮಗೆ ಖುಷಿ ಕೊಡುವ ಕೆಲಸವನ್ನು ಮಾಡಬೇಕು ಎಂಬ ಪಾಠವನ್ನು ಕಲಿಸುತ್ತದೆ.


Click it and Unblock the Notifications
