35 ವರ್ಷಗಳ ನಂತರ ಋಣ ಮುಕ್ತ!ಒಂದು ಸಾವಿರದ ಬದಲಿಗೆ 25,000 ರೂ. ಹಿಂತಿರುಗಿಸಿದ ಗೆಳೆಯ
ಸ್ನೇಹದ ಕತೆಯನ್ನಾಧರಿಸಿದ ಅದೆಷ್ಟೋ ಸಿನಿಮಾಗಳು ಬಂದಿವೆ. ಅಲ್ಲಿ ಸ್ನೇಹಿತನಿಗೋಸ್ಕರ ಮಾಡುವ ತ್ಯಾಗ, ಪ್ರೀತಿ ಎಲ್ಲವೂ ಇರುತ್ತದೆ. ಆದರೆ ಕೆಲವೊಮ್ಮೆ ನಿಜ ಜೀವನದಲ್ಲಿಯೂ ಕಣ್ಣಂಚು ಒದ್ದೆ ಮಾಡುವಂಥಹ ಸ್ನೇಹ ನೋಡಲು ಸಿಗುತ್ತದೆ.
ಸಂಪರ್ಕ ಕಡಿದುಕೊಂಡ ಸ್ನೇಹಿತರು:
ಸುಮಾರು 35 ವರ್ಷಗಳ ಹಿಂದೆ, ಕೇರಳದ ನಿವಾಸಿ ಇಸ್ಮಾಯಿಲ್ ತಮ್ಮ ಸ್ನೇಹಿತನಿಂದ ಸ್ವಲ್ಪ ಹಣವನ್ನು ಸಾಲ ಪಡೆದಿದ್ದರು. ಕಾಲ ಸರಿಯುತ್ತಿದ್ದ ಹಾಗೆ ಬದುಕಿನ ದಾರಿ ಹುಡುಕಿಕೊಂಡು ಅವರು ಬೇರೆ ಬೇರೆ ದೇಶಗಳು ಮತ್ತು ನಗರಗಳಿಗೆ ಶಿಫ್ಟ್ ಆಗುತ್ತಿದ್ದರು. ಆಗಿನ ಕಾಲದಲ್ಲಿ ಮೊಬೈಲ್ ಫೋನ್‌ಗಳು ಇರಲಿಲ್ಲ, ಸಾಮಾಜಿಕ ಮಾಧ್ಯಮಗಳು ಇರಲಿಲ್ಲ ಹಾಗಾಗಿ ಇಬ್ಬರೂ ಸ್ನೇಹಿತರ ಸಂಪರ್ಕ ಕಡಿದು ಹೋಗುತ್ತದೆ. ಇಸ್ಮಾಯಿಲ್ ತನ್ನ ಸ್ನೇಹಿತನಿಂದ ತೆಗೆದುಕೊಂಡಿದ್ದ ಹಣವನ್ನು ವಾಪಸ್ ನೀಡುವುದು ಸಾಧ್ಯವಾಗಲೇ ಇಲ್ಲ.

ಒಂದು ಸಾವಿರ ಬದಲಿಗೆ 25 ಸಾವಿರ ರೂ.:
ಆದರೆ ಇತ್ತೀಚೆಗೆ ಇಸ್ಮಾಯಿಲ್‌ಗೆ ತನ್ನ ಹಳೆಯ ಸ್ನೇಹಿತನ ನೆನಪಾಗುತ್ತದೆ. ಆತನ್ನು ಹುಡುಕಲೇ ಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ವರ್ಷಗಳ ಹಿಂದಿನ ನೆನಪುಗಳನ್ನು ಆಧರಿಸಿ, ತನ್ನ ಹುಡುಕಾಟವನ್ನು ಪ್ರಾರಂಭಿಸುತ್ತಾನೆ. ಅಂತಿಮವಾಗಿ, ತೆಲಂಗಾಣದಲ್ಲಿ ತನ್ನ ಸ್ನೇಹಿತ ಸಿಗುತ್ತಾನೆ. ತಾನು ಸ್ನೇಹಿತನಿಂದ ೩೫ ವರ್ಷಗಳ ಹಿಂದೆ ಸಾಲವಾಗಿ ತೆಗೆದುಕೊಂಡಿದ್ದ ಹಣವನ್ನು ವಾಪಸ್ ನೀಡುತ್ತಾನೆ. ಅಂದು ತೆಗೆದುಕೊಂಡಿದ್ದ ಒಂದು ಸಾವಿರ ರೂಪಾಯಿ ಬದಲಿಗೆ 25,000 ರೂಪಾಯಿಗಳನ್ನು ನೀಡುತ್ತಾನೆ. ಈ ಕಥೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ.
ಸೌದಿ ಅರೇಬಿಯಾದಲ್ಲಿ ಪ್ರಾರಂಭವಾದ ಸ್ನೇಹ:
ಈ ಕಥೆ 1991ಕ್ಕೂ ಹಿಂದಿನದ್ದು. ಕೇರಳದ ಇಸ್ಮಾಯಿಲ್ ಮತ್ತು ತೆಲಂಗಾಣದ ಎಡ್ಲಾ ಲಚಣ್ಣ ಸೌದಿ ಅರೇಬಿಯಾದ ಅಬ್ಕೈಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇತರ ಮೂವರು ಭಾರತೀಯ ಕಾರ್ಮಿಕರೊಂದಿಗೆ ಒಂದೇ ರೂಂನಲ್ಲಿ ವಾಸಿಸುತ್ತಿದ್ದರು. ಕೆಲಸದ ನಂತರ ಒಟ್ಟಿಗೆ ಅಡುಗೆ ಮಾಡುವುದು, ಹರಟೆ ಹೊಡೆಯುವುದು, ಪರಸ್ಪರ ಸಹಾಯ ಮಾಡುವುದು ಅವರ ದೈನಂದಿನ ದಿನಚರಿಯ ಭಾಗವಾಗಿತ್ತು. ಅವರು ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಹಾಗಾಗಿ, ಅವರ ನಡುವೆ ಸ್ನೇಹ ಗಾಢವಾಗಿ ಬೆಳೆದಿತ್ತು. ಆ ಸಮಯದಲ್ಲಿ, ಇಸ್ಮಾಯಿಲ್ ಹಣಕಾಸಿನ ಅಗತ್ಯದಿಂದಾಗಿ ಲಚಣ್ಣ ಅವರಿಂದ 120 ಸೌದಿ ರಿಯಾಲ್‌ಗಳನ್ನು ಸಾಲ ಪಡೆಯುತ್ತಾರೆ. ಆ ಸಮಯದಲ್ಲಿ ಈ ಮೊತ್ತವು ಭಾರತೀಯ ಕರೆನ್ಸಿಯಲ್ಲಿ ಸುಮಾರು 1,000 ರೂ.ಗಳ ಮೌಲ್ಯದ್ದಾಗಿತ್ತು.
ಭರವಸೆ ಉಳಿಸಿಕೊಂಡ ಗೆಳೆಯ:
ಇಸ್ಮಾಯಿಲ್ ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದರು. ಆದರೆ ವಿಧಿ ಬೇರೆಯದ್ದೇ ಲೆಕ್ಕಾಚಾರ ಹಾಕಿತ್ತು. ಸ್ವಲ್ಪ ಸಮಯದ ನಂತರ, ಲಚ್ಚಣ್ಣ ಭಾರತಕ್ಕೆ ಮರಳಿದರು. ಆಗ ಮೊಬೈಲ್ ಫೋನ್‌ಗಳು, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಹಾಗಾಗಿ ಕ್ರಮೇಣ, ಇಬ್ಬರೂ ಸಂಪರ್ ಕಳೆದುಕೊಳ್ಳುತ್ತಾರೆ. ವರ್ಷಗಳು ಕಳೆದವು. ಜೀವನವು ತನ್ನದೇ ಆದ ವೇಗದಲ್ಲಿ ಸಾಗಿತು. ಆದರೆ ತಾನು ಸ್ನೇಹಿತನಿಂದ ತೆಗೆದುಕೊಂಡಿರುವ ಹಣವನ್ನು ವಾಪಸ್ ಮಾಡಲೇ ಬೇಕು ಎನ್ನುವುದು ಇಸ್ಮಾಯಿಲ್ ಹೃದಯದಲ್ಲಿ ಬೇರೂರಿತ್ತು. ಅದೊಂದು ಸಣ್ಣ ಮೊತ್ತ ಎಂದು ಅವರಿಗೆ ಅನ್ನಿಸಲೇ ಇಲ್ಲ. ಅವರಿಗೆ, ಇದು ಕೇವಲ ಹಣದ ವಿಷಯವಾಗಿರಲಿಲ್ಲ, ಬದಲಿಗೆ ನಂಬಿಕೆ ಮತ್ತು ಸ್ನೇಹದ ಭರವಸೆಯಾಗಿತ್ತು.
ಸುಮಾರು ಮೂರು ದಶಕಗಳ ನಂತರ, ಇಸ್ಮಾಯಿಲ್ ತನ್ನ ಸ್ನೇಹಿತನ ಹುಡುಕಾಟಕ್ಕೆ ಮುಂದಾಗುತ್ಥಾರೆ. ಆದರೆ, ಅವರಿಗೆ ಎದುರಾದ ದೊಡ್ಡ ಸವಾಲೆಂದರೆ ಅವನ ಬಳಿ ಮೊಬೈಲ್ ನಂಬರ್, ಮನೆ ವಿಳಾಸ ಮತ್ತು ಸಂಬಂಧಿಕರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಲಚ್ಚಣ್ಣ ತೆಲಂಗಾಣದ ಧರ್ಮಪುರಿಯವರೆನ್ನುವುದು ಮಾತ್ರ ಇಸ್ಮಾಯಿಲ್‌ಗೆ ನೆನಪಿತ್ತು. ಈ ಮಾಹಿತಿಯ ಆಧಾರದ ಮೇಲೆ, ಅವನು ಇಂಟರ್ನೆಟ್‌ನಲ್ಲಿ ಹುಡುಕಲು ಪ್ರಾರಂಭಿಸಿದರು. ನಂತರ ಸ್ವತಃ ಧರ್ಮಪುರಿಗೆ ಪ್ರಯಾಣ ಬೆಳೆಸಿದರು. ಸ್ಥಳೀಯರನ್ನು ವಿಚಾರಿಸಿದರು. ಅಂತಿಮವಾಗಿ, ಅನೇಕ ಪ್ರಯತ್ನಗಳ ನಂತರ, ತನ್ನ ಹಳೆಯ ಸ್ನೇಹಿತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಭಾವುಕರಾದ ಸ್ನೇಹಿತರು:
ಇಸ್ಮಾಯಿಲ್ ಲಚ್ಚಣ್ಣನ ಮನೆಗೆ ಬಂದಾಗ, ಅವನು ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ವಾಟ್ಸಾಪ್ ವಿಡಿಯೋ ಕರೆಯಲ್ಲಿ ಮಾತನಾಡಿದ್ದಾರೆ. ಇಸ್ಮಾಯಿಲ್ ಲಚ್ಚಣ್ಣನ ಕುಟುಂಬಕ್ಕೆ 25,000 ರೂಪಾಯಿಗಳನ್ನು ಹಸ್ತಾಂತರಿಸಿದ್ದಾರೆ. ಹಲವು ವರ್ಷಗಳ ನಂತರ ತಮ್ಮ ಹಳೆಯ ಸ್ನೇಹಿತನನ್ನು ನೋಡಿದ ಇಬ್ಬರೂ ಭಾವುಕರಾದರು. ವೀಡಿಯೊ ಕರೆಯಲ್ಲಿಯೂ ಅವರ ಸಂತೋಷ ಸ್ಪಷ್ಟವಾಗಿತ್ತು.
ಬಡ್ಡಿ ಸಮೇತ ಹಣ ಹಿಂದಿರುಗಿಸಿದ ಸ್ನೇಹಿತ:
ಈ ಇಡೀ ಘಟನೆಯಿಂದ ಲಚ್ಚಣ್ಣ ಹೆಚ್ಚು ಆಶ್ಚರ್ಯಗೊಂಡಿದ್ದಾರೆ. 35 ವರ್ಷಗಳ ಹಿಂದೆ ನೀಡಿದ್ದ 120 ರಿಯಾಲ್ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎನ್ನುಬುದನ್ನು ನಿರೀಕ್ಷಿಸಿಯೂ ಇರಲಿಲ್ಲ ಎಂದು ಹೇಳಿದ್ದಾರೆ. ಇಸ್ಮಾಯಿಲ್ 25,000 ರೂಪಾಯಿಗಳನ್ನು ಹೇಗೆ ನಿರ್ಧರಿಸಿದರು ಎಂದು ತನಗೆ ತಿಳಿದಿಲ್ಲ ಎಂದು ಲಚ್ಚಣ್ಣ ಹೇಳಿದ್ದಾರೆ. ಬಹುಶಃ ಅವರು ಬಡ್ಡಿ ಸಮೇತವಾಗಿ ಹಣವನ್ನು ಹಿಂದಿರುಗಿಸಿರಬಹುದು ಎಂದು ಹೇಳಿದ್ದಾರೆ. ಇದು ಕೇವಲ ಹಣವಲ್ಲ, ಸ್ನೇಹಿತರ ನಡುವುನ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ಇಸ್ಮಾಯಿಲ್ ತುಂಬಾ ಪ್ರಾಮಾಣಿಕ ಮತ್ತು ಉದಾತ್ತ ವ್ಯಕ್ತಿ.
ಈ ಘಟನೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ತಕ್ಷಣ, ಜನರು ಇಸ್ಮಾಯಿಲ್ ಅವರನ್ನು ಅಪಾರವಾಗಿ ಹೊಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಸಣ್ಣ ಸಾಲಗಳನ್ನು ಮರೆತುಬಿಡುತ್ತಾರೆ. ಆದರೆ, ಇಸ್ಮಾಯಿಲ್ 35 ವರ್ಷಗಳ ನಂತರ ತನ್ನ ಭರವಸೆಯನ್ನು ಉಳಿಸಿಕೊಳ್ಳುವ ಮೂಲಕ ಪ್ರಾಮಾಣಿಕತೆಗೆ ಹೊಸ ಉದಾಹರಣೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಣಕ್ಕಿಂತ ಹೆಚ್ಚು ಬೆಲೆಬಾಳುವ ಸ್ನೇಹ:
ಈ ಕಥೆ ಕೇವಲ 1,000 ರೂಪಾಯಿಗಳನ್ನು ಹಿಂದಿರುಗಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಲ ಎಷ್ಟೇ ಬದಲಾದರೂ, ಒಬ್ಬ ವ್ಯಕ್ತಿಯು ತನ್ನ ನಂಬಿಕೆ ಉಳಿಸಿಕೊಳ್ಳಬೇಕು ಎನ್ನುವ ವಿಚಾರಕ್ಕೆ ಬದ್ಧನಾಗಿದ್ದರೆ, ವರ್ಷಗಳ ಕಾಲ ಬೇರೆಯಾಗಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications