ವರುಣನ ಮುನಿಸು, ಕರ್ನಾಟಕದ 1,119 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಬೆಂಗಳೂರಿನಲ್ಲಿ ಉರಿ ಬಿಸಿಲು
ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಕೆಲವೇ ಭಾಗಗಳಲ್ಲಿ ಮಾತ್ರ ತುಂತುರು ಮಳೆಯಾಗುತ್ತಿದೆ. ಇದನ್ನು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಜಲಮೂಲಗಳು ಸಹ ಬರಿದಾಗುತ್ತಿದ್ದು, ವರುಣ ಕರುಣೆ ತೋರದಿದ್ದರೆ ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರ ಎದುರಾದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ರಾಜ್ಯಾದ್ಯಂತ 1,119 ಗ್ರಾಮಗಳನ್ನು ಕುಡಿಯುವ ನೀರಿನ ಅಭಾವ ಎದುರಿಸಬಹುದಾದ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ 22 ಪ್ರದೇಶಗಳು ಸೇರಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

838 ಹಳ್ಳಿಗಳಿಗೆ ನೀರು ಒದಗಿಸುವ ಗುರಿ
ಮುಖ್ಯವಾಗಿ 'ಎಲ್ ನಿನೊ' ಪರಿಣಾಮ ಮುಂಗಾರು ಮಾರುತಗಳ ಆಗಮನ ವಿಳಂಬವಾಗಿದ್ದು, ರಾಜ್ಯದಲ್ಲಿ ಜೂನ್ 1ರಿಂದ 8ರ ನಡುವೆ ವಾಡಿಕೆಗಿಂತ ಶೇಕಡ 28ರಷ್ಟು ಕಡಿಮೆ ಮಳೆಯಾಗಿದೆ. (ವಾಡಿಕೆ 266 ಮಿ.ಮೀ. ಇದ್ದರೆ, ಕೇವಲ 191 ಮಿ.ಮೀ. ಮಳೆಯಾಗಿದೆ). ಇನ್ನೂ ಸೆಪ್ಟೆಂಬರ್ ತಿಂಗಳವರೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕುಡಿಯುವ ನೀರನ್ನು ಪೂರೈಸಲು ಇಲಾಖೆಯು ಗ್ರಾಮವಾರು ತುರ್ತು ಯೋಜನೆಯನ್ನು ಸಿದ್ಧಪಡಿಸಿದೆ. ಒಟ್ಟು 978 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದ್ದು, ಇವುಗಳ ಮೂಲಕವೇ ಸುಮಾರು 838 ಹಳ್ಳಿಗಳಿಗೆ ನೀರು ಒದಗಿಸುವ ಗುರಿ ಇಟ್ಟುಕೊಂಡಿದೆ.
ಸರ್ಕಾರದಿಂದ 117 ಕೋಟಿ ರೂ. ಹಣ ಮಂಜೂರು
ಎಲ್ಲಿ ಹೆಚ್ಚು ನೀರಿನ ಸಮಸ್ಯೆ ಇದೆಯೋ ಅಂತಹ ಭಾಗಗಳಿಗೆ ನೀರು ತಲುಪಿಸಲು 254 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ ಹಾಗೂ ಇಲಾಖೆಯ 35 ಸ್ವಂತ ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದೆ. ಈ ನೀರಿನ ಸಮಸ್ಯೆಯನ್ನು ನಿಭಾಯಿಸಲು ಮತ್ತು ಪರಿಹಾರ ಕ್ರಮಗಳಿಗಾಗಿ ರಾಜ್ಯ ಸರ್ಕಾರವು ಈಗಾಗಲೇ 117 ಕೋಟಿ ರೂಪಾಯಿ ಹಣವನ್ನು ಮಂಜೂರು ಮಾಡಿದೆ ಎಂದು ತಿಳಿದುವಂದಿದೆ.
ಹೆಚ್ಚು ನೀರಿನ ಅಭಾವ ಎದುರಿಸುತ್ತಿರುವ ಜಿಲ್ಲೆ ಯಾವುದು?
ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವ ದರವನ್ನು ಆಯಾ ಜಿಲ್ಲಾಡಳಿತಗಳು ಅಲ್ಲಿನ ಪರಿಸ್ಥಿತಿ ಆಧರಿಸಿ ನಿರ್ಧರಿಸಲಿದ್ದು, ಸಾಮಾನ್ಯವಾಗಿ ತಿಂಗಳಿಗೆ 10,000 ದಿಂದ 15,000 ರೂಪಾಯಿವರೆಗೆ ಇರಲಿದೆ. ಇಡೀ ರಾಜ್ಯದಲ್ಲೇ ಬೀದರ್ ಅತ್ಯಂತ ಹೆಚ್ಚು ನೀರಿನ ಅಭಾವ ಎದುರಿಸುತ್ತಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ. ಇಲ್ಲಿನ 65 ಗ್ರಾಮ ಪಂಚಾಯಿತಿ ವ್ಯಾಪ್ತಿಯ 93 ಹಳ್ಳಿಗಳು ತೀವ್ರ ಆತಂಕದ ಪರಿಸ್ಥಿತಿಯಲ್ಲಿವೆ. ಇಲ್ಲಿನ 9 ಹಳ್ಳಿಗಳಿಗೆ ನೀರು ಒದಗಿಸಲು 7 ಖಾಸಗಿ ಟ್ಯಾಂಕರ್ ಹಾಗೂ 8 ಖಾಸಗಿ ಬೋರ್‌ವೆಲ್‌ಗಳನ್ನು ಬಳಸಲಾಗುತ್ತಿದೆ. ಇದರ ನಂತರದ ಸ್ಥಾನಗಳಲ್ಲಿ ಬೆಂಗಳೂರು ದಕ್ಷಿಣ ಮತ್ತು ಶಿವಮೊಗ್ಗ ಜಿಲ್ಲೆಗಳಿವೆ ಎಂದು ವರದಿಯಾಗಿದೆ.
ವಿಜಯಪುರ, ಕೊಡಗು ಮತ್ತು ಗದಗ ಜಿಲ್ಲೆಗಳಲ್ಲಿ ನೀರಿನ ಅಭಾವದ ಆತಂಕ ಕಡಿಮೆ ಇದೆ. ವಿಜಯಪುರದಲ್ಲಿ 27 ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದೆ. ಆದರೂ ಸದ್ಯಕ್ಕೆ ಯಾವುದೇ ಹಳ್ಳಿಗಳು ತೀವ್ರ ಆತಂಕದ ಪಟ್ಟಿಯಲ್ಲಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಮಿಷನರ್ ಬಿ.ಫೌಜಿಯಾ ತರನುಮ್ ಅವರು ಮಾಹಿತಿ ನೀಡಿ, 'ಕಳೆದ 10 ವರ್ಷಗಳ ನೀರಿನ ಅಭಾವದ ಮಾದರಿ ಮತ್ತು ದತ್ತಾಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕವೇ ಈ ಯೋಜನೆಯನ್ನು ರೂಪಿಸಲಾಗಿದೆ,' ಎಂದು ಹೇಳಿದ್ದಾರೆ.
'ಕೆಲವು ಹಳ್ಳಿಗಳಲ್ಲಿ ಕೇವಲ ನಿರ್ದಿಷ್ಟ ಜನವಸತಿ ಪ್ರದೇಶಗಳಲ್ಲಿ ಮಾತ್ರ ತೊಂದರೆ ಇರುತ್ತದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಸೆಪ್ಟೆಂಬರ್‌ವರೆಗೆ ಯಾರಿಗೂ ದೈನಂದಿನ ನೀರಿನ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ,' ಎಂದು ಅವರು ತಿಳಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಆದರೂ ನೀರಿನ ಲಭ್ಯತೆ ಸುಧಾರಿಸುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಇದೀಗ ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆ ಕೈಕೊಟ್ಟಿದ್ದು, ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲಿದೆ. ಪರಿಣಾಮ ಪ್ರಮುಖ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ಇದರಿಂದ ಜನರು ಮುಂಗಾರಿನ ವೇಳೆಯೇ ಈ ರೀತಿ ಆದ್ರೆ, ಮುಂದಿನ ದಿನಗಳಲ್ಲಿ ಇನ್ನೇನು ಕಾದಿದೆಯೋ ಎನ್ನುವ ಆತಂಕದಲ್ಲಿದ್ದಾರೆ.












Click it and Unblock the Notifications