ಪಿಯು ಟಾಪರ್ ಪೂಜಾ ಬಾಳಿಗ ಸಂದರ್ಶನ
ಮಂಗಳೂರು, ಮೇ.8: ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಮೆರಿಟ್ ವಿದ್ಯಾರ್ಥಿಗಳ ತವರೆನಿಸಿದೆ. ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಶೇ 86.04 ಫಲಿತಾಂಶದೊಂದಿಗೆ ಅಗ್ರಸ್ಥಾನಕ್ಕೇರಿದೆ. ಜಿಲ್ಲೆಯ ಕೆನರಾ ಪಿಯು ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿದೆ. ಕಾಲೇಜಿನ ಟಾಪರ್ ಗಳಲ್ಲಿ ಒಬ್ಬರಾದ ಪೂಜಾ ಬಾಳಿಗ ಅವರು ಒನ್ ಇಂಡಿಯಾ ಪ್ರತಿನಿಧಿಯೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಕೆನೆರಾ ಕಾಲೇಜಿನ ವೆಂಕಟೇಶ್ ಕಾಮತ್ ಅವರು ಮೊದಲ ಶ್ರೇಯಾಂಕ(Rank) ಪಡೆದರೆ, ಪೂಜಾ ಬಾಳಿಗ ಅವರು ಎರಡನೇ ಶ್ರೇಯಾಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪೂಜಾಬಾಳಿಗ 600 ಅಂಕಗಳಿಗೆ 593 ಅಂಕಗಳಿಸಿದ್ದಾರೆ. ಪಿಸಿಎಂಎಸ್ ವಿಭಾಗದ ವಿದ್ಯಾರ್ಥಿನಿಯಾಗಿರುವ ಪೂಜಾ ಅವರು ಮಂಗಳೂರಿನ ಊರ್ವ ಸ್ಟೋರ್ ನಿವಾಸಿಯಾಗಿದ್ದು, ತಂದೆ ಬಿ. ರಾಧಾಕೃಷ್ಣ ಬಾಳಿಗ ಹಾಗೂ ತಾಯಿ ಚಂದ್ರಿಕಾ ಬಿ. ಬಾಳಿಗ ಅವರ ಮುದ್ದಿನ ಮಗಳಾಗಿದ್ದಾರೆ. ಪೂಜಾ ಬಾಳಿಗ ಅವರು ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದು ಹೀಗೆ...[ವೈದ್ಯಳಾಗುವ ಕನಸಿನ ವಸುಧಾ ರಾಜ್ಯಕ್ಕೆ ಪ್ರಥಮ]

* ನಿಮ್ಮ ಯಶಸ್ಸಿನ ಗುಟ್ಟೇನು?
ಕಠಿಣ ಪರಿಶ್ರಮ, ಕಾಲೇಜಿನ ಸಿಬ್ಬಂದಿಗಳ ಸಹಕಾರ, ಅಂದಿನ ಪಾಠ ಅಂದೇ ಓದುವುದು ಮುಂತಾದ ಒಳ್ಳೆ ಅಭ್ಯಾಸಗಳು ನನ್ನ ಯಶಸ್ಸಿಗೆ ಕಾರಣ ಎನ್ನಬಹುದು.
* ನಿಮ್ಮ ಯಶಸ್ಸಿಗೆ ಯಾರು ಸ್ಪೂರ್ತಿ?
ನನ್ನ ತಂದೆ ತಾಯಿಗಳು ಹಾಗೂ ನನ್ನ ಶಿಕ್ಷಕ ವರ್ಗ ನನ್ನ ಯಶಸ್ಸಿಗೆ ಸ್ಪೂರ್ತಿ ಎನ್ನಬಹುದು. ಇದಕ್ಕಿಂತ ಹೆಚ್ಚಾಗಿ ಇತ್ತೀಚಿಗೆ ನಮ್ಮಗಲಿದ ನನ್ನ ಅಜ್ಜ ನನ್ನ ವಿದ್ಯಾಭ್ಯಾಸ ಏಳಿಗೆಗೆ ಮುಖ್ಯ ಕಾರಣರಾಗಿದ್ದಾರೆ. ಅವರ ಸ್ಪೂರ್ತಿಯಿಂದ ನಾನು ಹೆಚ್ಚಿನ ಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು. [ದ್ವಿತೀಯ ಪಿಯುಸಿ ಫಲಿತಾಂಶದ Highlights]
* ವಿಶೇಷ ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ರಾ?
2 ವರ್ಷಗಳಿಂದ ಮಂಗಳೂರಿನ ಎಕ್ಸ್ ಪರ್ಟ್ ಕೋಚಿಂಗ್ ಕ್ಲಾಸಿಗೆ ಹೋಗುತ್ತಿದೆ. ಇದರಿಂದ ಹೆಚ್ಚಿನ ಸಹಕಾರ ಸಿಕ್ಕಿದೆ.
* ಮನೆಯಲ್ಲಿ ಓದಿಗೆ ಪೂರಕ ವಾತಾವರಣವಿತ್ತೆ?
ನಮ್ಮ ಮನೆ ಎಂದೂ ಕೂಡಾ ಒತ್ತಡ ಹೇರಲಿಲ್ಲ. ಇಷ್ಟು ಹೊತ್ತು ಓದು ಎಂದು ಹೇಳಿಲ್ಲ. ನನ್ನ ಅಗತ್ಯಗಳನ್ನು ಕಾಲಕ್ಕೆ ತಕ್ಕಂತೆ ಪೂರೈಸಿ ಪೂರಕ ವಾತಾವರಣ ನೀಡಿದ ನನ್ನ ಪೋಷಕರಿಗೆ ಅಭಿನಂದನೆ ಸಲ್ಲಿಸಬೇಕು.
* ಯಾವ ಸಬ್ಜೆಕ್ಟ್ ಕಷ್ಟ ಎನಿಸಿತ್ತು? ಮುಂದಿನ ಓದು?
ರಸಾಯನ ಶಾಸ್ತ್ರ ಪರೀಕ್ಷೆ ಬಗ್ಗೆ ಸ್ವಲ್ಪ ಭಯ ಕಾಡಿತ್ತು. ಅಂದುಕೊಂಡಷ್ಟು ಅಂಕ ಬರುತ್ತದೋ ಇಲ್ಲವೋ ಎಂಬ ಅತಂಕವಿತ್ತು, ಆದರೆ, ಉತ್ತಮ ಅಂಕ ಗಳಿಸಿದ ತೃಪ್ತಿ ಇದೆ. ಮುಂದೆ ನಾನು ಇಂಜಿನಿಯರಿಂಗ್ ಓದಲು ಬಯಸಿದ್ದೇನೆ.
* ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯವರು ಟಾಪರ್ ಏಕೆ?
ಇದಕ್ಕೆ ಇಲ್ಲಿನ ಶಿಕ್ಷಕ ವೃಂದವೇ ಕಾರಣ ಎನ್ನಬಹುದು. ಜತೆಗೆ ವಿದ್ಯಾರ್ಥಿ ಸಮೂಹ ಕೂಡಾ ಶಿಕ್ಷಕರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ವ್ಯಾಸಂಗದಲ್ಲಿ ಈ ಪರಿ ಏಳಿಗೆ ಕಾಣಲು ಕಾರಣವಾಗಿದೆ.
ಇಂಜಿನಿಯರ್ ಆಗುವ ಕನಸು ಹೊತ್ತಿರುವ ಪೂಜಾ ಬಾಳಿಗ ಅವರಿಗೆ ಒನ್ ಇಂಡಿಯಾ ಕನ್ನಡ ತಂಡ ಮತ್ತೊಮ್ಮೆ ಶುಭ ಹಾರೈಸುತ್ತದೆ.












Click it and Unblock the Notifications