ಅತ್ಯಾಚಾರ ಪ್ರಕರಣ : 14 ಮಕ್ಕಳ ತಂದೆ ಬಂಧನ
ಮಂಗಳೂರು, ಜು. 7 : ಅಪ್ರಾಪ್ತ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಪತ್ನಿ ಮತ್ತು 14 ಮಕ್ಕಳ ತಂದೆಯಾಗಿರುವ ಆರೋಪಿ ಹಲವಾರು ದಿನಗಳಿಂದ ಬಾಲಕಿ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಮಾಡುತ್ತಿದ್ದ ಆರೋಪಿಯನ್ನು ಕಾಟಿಪಳ್ಳದ ನಿವಾಸಿ ಹಮೀದ್ (45) ಎಂದು ಗುರುತಿಸಲಾಗಿದೆ. ಕಾಟಿಪಳ್ಳದಲ್ಲಿ ತನ್ನ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಕುಟುಂಬದೊಂದಿಗೆ ಆತ್ಮೀಯವಾಗಿದ್ದ ಈತ, ಅವರ ಮನೆಯಲ್ಲಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ.

ಈತನ ಉಪಟಳ ತಾಳಲಾರದೆ ಕುಟುಂಬದವರು, ಮನೆಯನ್ನು ಸುರತ್ಕಲ್ ಸಮೀಪದ ಕಾನಕ್ಕೆ ಬದಲಾಯಿಸಿದ್ದರು. ಆದರೆ, ಅಲ್ಲಿಗೂ ಬರುತ್ತಿದ್ದ ಆರೋಪಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅತ್ಯಾಚಾರದ ವಿಷಯವನ್ನು ಕುಟುಂಬದವರಿಗೆ ಹೇಳಿದರೆ, ಕೊಲೆ ಮಾಡುವುದಾಗಿ ಹಮೀದ್ ಬೆದರಿಕೆ ಹಾಕುತ್ತಿದ್ದ ಮತ್ತು ಬಾಲಕಿ ಗರ್ಭ ಧರಿಸದಂತೆ ಗರ್ಭ ನಿರೋಧಕ ಮಾತ್ರೆಯನ್ನು ನೀಡುತ್ತಿದ್ದ ಎಂದು ತಿಳಿದುಬಂದಿದೆ. ಬಾಲಕಿ ಬಳಿ ಇದ್ದ ಗರ್ಭ ನಿರೋಧಕ ಮಾತ್ರೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಮೀದ್ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದರಿಂದ ಬಾಲಕಿ ಖಿನ್ನಳಾಗಿದ್ದಳು. ಕುಟುಂಬದವರ ಇದನ್ನು ಗಮನಿಸಿ ವಿಚಾರಿಸಿದ ಸಂದರ್ಭದಲ್ಲಿ ವಿಷಯ ಬೆಳಕಿಗೆ ಬಂದಿದೆ. ಪೋಷಕರು ನೀಡಿದ ದೂರಿನ ಅನ್ವಯ ಸುರತ್ಕಲ್ ಪೊಲೀಸರು ಹಮೀದ್ ನನ್ನು ಬಂಧಿಸಿದ್ದಾರೆ. ಆರೋಪಿ ಹಲವಾರು ಮಹಿಳೆಯರಿಗೆ ಹೀಗೆ ವಂಚಿಸಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಇಬ್ಬರು ಹೆಂಡತಿ, 14 ಮಕ್ಕಳು : ಆರೋಪಿ ಹಮೀದ್ ಗೆ ಇಬ್ಬರು ಹೆಂಡತಿಯರು ಮತ್ತು 14 ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಾಹವಾಗುವುದಾಗಿ ನಂಬಿಸಿ ಹಲವಾರು ಮಹಿಳೆಯರೊಂದಿಗೆ ಈತ ಲೈಂಗಿಕ ಕ್ರಿಯೆ ನಡೆಸಿ ಅವರನ್ನು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications