ಹೇಮಾವತಿ ನದಿಯಲ್ಲಿ ಮುಳುಗಿ ಯುವಕನೊಬ್ಬ ಮೃತ: ಸ್ನೇಹಿತರಿಂದಲೇ ಕೊಲೆ?
ಮಂಡ್ಯ, ನವೆಂಬರ್ 1: ಕೆ.ಆರ್ ಪೇಟೆ ತಾಲ್ಲೂಕಿನ ಹೇಮಗಿರಿಯ ಬಳಿ ಹೇಮಾವತಿ ನದಿಯಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಆದರೆ ಮೃತ ಯುವಕನ ಪೋಷಕರು ತಮ್ಮ ಮಗನನ್ನು ಅವನ ಸ್ನೇಹಿತರೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ನಳ್ಳೇನಹಳ್ಳಿಯ ಬೆಟ್ಟೇಗೌಡರ ಪುತ್ರ ಎನ್.ಬಿ ಅಭಿಷೇಕ್ (28) ಮೃತ ಯುವಕನಾಗಿದ್ದಾನೆ.
ʻಅಭಿಷೇಕ್ ನನ್ನು ಆತನ ಸ್ನೇಹಿತರೇ ಕೊಲೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ನಮಗೆ ನ್ಯಾಯ ಬೇಕು' ಎಂದು ಮೃತ ಅಭಿಷೇಕ್ ಸಂಬಂಧಿಕರು ಆಗ್ರಹಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಡಿವೈಎಸ್ಪಿ ನವೀನ್ ಕುಮಾರ್ ತನಿಖೆ ನಡೆಸುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸುರೇಶ್ ನಿನ್ನೆ ರಾತ್ರಿ ಮೃತ ಅಭಿಷೇಕ್ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಆತನ ನಾಲ್ವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತನ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತನ ವಾರಸುದಾರರಿಗೆ ದೇಹವನ್ನು ಹಸ್ತಾಂತರಿಸಿದರು.











Click it and Unblock the Notifications