ವ್ಯರ್ಥವಾಗುತ್ತಿದೆ ಹೇಮಾವತಿ ನೀರು: ಏತ ನೀರಾವರಿ ಕಾಮಗಾರಿ ಪೂರ್ಣ ಯಾವಾಗ?
ಮಂಡ್ಯ, ಸೆಪ್ಟೆಂಬರ್ 26: ಉತ್ತಮ ಮುಂಗಾರು ಆದಾಗ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ನೀರು ಹರಿದು ಹೋಗುತ್ತದೆ. ಆದರೆ ಈ ನೀರನ್ನು ಕೆರೆಕಟ್ಟೆಗಳಲ್ಲಿ ಹಿಡಿದಿಡುವ ಕೆಲಸವನ್ನು ಮಾಡುವಲ್ಲಿ ನಾವು ವಿಫಲವಾಗಿದ್ದೇವೆ. ಒಂದೆಡೆ ನೀರು ಸುಖಾಸುಮ್ಮನೆ ಹರಿದು ಹೋಗುತ್ತಿದ್ದರೆ ಮತ್ತೊಂದೆಡೆ ಕೆರೆಕಟ್ಟೆಗಳು ಖಾಲಿಯಾಗಿ ಉಳಿದು ಬಿಡುತ್ತದೆ. ಒಂದು ವೇಳೆ ವ್ಯರ್ಥವಾಗಿ ಹರಿದು ಹೋಗುವ ನದಿ ನೀರನ್ನು ಹಿಡಿದಿಡುವ ಕೆಲಸವನ್ನು ಮಾಡಿದ್ದರೆ ಬರದ ಸಮಯದಲ್ಲಿ ಉಪಯೋಗಕ್ಕೆ ಬರುತ್ತಿತ್ತೇನೋ?
ಮಂಡ್ಯದಲ್ಲಿ ಬರಗಾಲ ಬಂದಾಗಲೆಲ್ಲ ಇಂತಹ ನೆನಪುಗಳಾಗುವುದು ಸಹಜ. ಒಂದು ವೇಳೆ ಕೃಷ್ಣರಾಜಪೇಟೆ ತಾಲೂಕಿನ ಕಟ್ಟಹಳ್ಳಿ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದ್ದರೆ ಕಳೆದ ವರ್ಷ ಸುಖಾ ಸುಮ್ಮನೆ ಹರಿದು ಹೋಗಿದ್ದ ಹೇಮಾವತಿ ನದಿ ನೀರನ್ನು ಉಳಿಸಿಕೊಳ್ಳಬಹುದಿತ್ತೇನೋ? ಈ ಯೋಜನೆ 265 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದ್ದು ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಆದರೆ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಬರ ಆವರಿಸಿದ್ದು ಹೇಮಾವತಿ ನದಿಯಲ್ಲಿ ನೀರು ಬತ್ತುವಂತಾಗಿದೆ. ಇದು ಬೇಸರದ ಸಂಗತಿಯಾಗಿದೆ.

ಈ ಏತನೀರಾವರಿ ಯೋಜನೆ ಕಾರ್ಯಗತವಾದರೆ ಮಳೆ ಬಂದರೂ ಕೆರೆಕಟ್ಟೆ ತುಂಬದ ಶೀಳನೆರೆ ಮತ್ತು ಬೂಕನಕೆರೆ ಹೋಬಳಿಯ ನೂರಾರು ಕೆರೆ-ಕಟ್ಟೆಗಳನ್ನು ತುಂಬಲಿದೆ. ಸದ್ಯ ಈ ಕಾಮಗಾರಿ 70ರಷ್ಟು ನಡೆದಿದ್ದು ಉಳಿದ ಕಾಮಗಾರಿ ಮುಗಿಯಬೇಕಾಗಿದೆ.
ನೀರಿನ ಶಾಶ್ವತ ಸೌಲಭ್ಯಕ್ಕೆ ಅನುಕೂಲ
ಕೆಆರ್ ಎಸ್ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ಕಟ್ಟಹಳ್ಳಿ ಹಾಗೂ ಕಟ್ಟೆಕ್ಯಾತನಹಳ್ಳಿ ಗ್ರಾಮಗಳ ಮಧ್ಯದಲ್ಲಿ ಹಾದು ಹೋಗುವ ಹೇಮಾವತಿ ನದಿಯ ನೀರನ್ನು ಬಳಸಿಕೊಂಡು ಶೀಳನರೆ ಮತ್ತು ಭೂಕನಕೆರೆ ಹೋಬಳಿಯ ಕೆರೆಕಟ್ಟೆಗಳನ್ನು ತುಂಬಿಸುವುದು ಏತ ನೀರಾವರಿಯ ಉದ್ದೇಶವಾಗಿದೆ. ಇದು ಕಾರ್ಯಗತವಾದರೆ ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಜನಜಾನುವಾರುಗಳಿಗೆ ಕುಡಿಯುವ ನೀರಿನ ಶಾಶ್ವತ ಸೌಲಭ್ಯಕ್ಕೆ ಅನುಕೂಲವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಈ ಯೋಜನೆಯನ್ನು ನಾರಾಯಣಗೌಡ ಅವರು ಸಚಿವರಾಗಿದ್ದ ಕಾಲದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರ ಮನವೊಲಿಸಿ, ಮಂಜೂರಾತಿಯನ್ನು ಪಡೆದಿದ್ದರಲ್ಲದೆ, ಒಂದೇ ಕಂತಿನಲ್ಲಿ 265 ಕೋಟಿ ರೂಪಯಿ ವಿಶೇಷ ಅನುದಾನದ ಹಣವನ್ನು ಬಿಡುಗಡೆ ಮಾಡಿಸಿರುವುದು ಗಮನಾರ್ಹ ವಿಚಾರವಾಗಿದೆ.
ಮಂದಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ
ಕಟ್ಟೆಕ್ಯಾತನಹಳ್ಳಿಗೆ ಹೊಂದಿಕೊಂಡಂತೆ ಹೇಮಾವತಿ ನದಿಗೆ ಅಡ್ಡಲಾಗಿ ಚಿಕ್ಕ ಅಣೆಕಟ್ಟೆಯನ್ನು ನಿರ್ಮಿಸಿ ನೀರನ್ನು ಕೆರೆಕಟ್ಟೆಗಳಿಗೆ ಹಾಯಿಸುವುದು ಉದ್ದೇಶವಾಗಿದೆ. ಈಗಾಗಲೇ ಭಾರಿ ಗಾತ್ರದ ಪೈಪ್ ಲೈನ್ ಅಳವಡಿಕೆ ಸೇರಿದಂತೆ ಇತರೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಜೊತೆಗೆ ಹೇಮಾವತಿ ನದಿಯ ನೀರನ್ನು ಭಾರಿ ಗಾತ್ರದ ಮೋಟಾರ್ ಪಂಪುಗಳಿಂದ ಪಂಪ್ ಮಾಡಿ ಮೇಲಕ್ಕೆತ್ತಲು ಜಾಕ್ ವೆಲ್‌ನ ಒಳಭಾಗದಲ್ಲಿ ಬೃಹತ್ ಮೋಟಾರುಗಳ ಅಳವಡಿಕೆ ಕಾಮಗಾರಿ ನಡೆದಿದೆ.
ಭಾರಿ ಗಾತ್ರದ ಮೋಟರುಗಳು ಕೆಲಸ ಮಾಡಲು ಅಗತ್ಯವಾಗಿ ಬೇಕಾದ ವಿದ್ಯುತ್ ಸರಬರಾಜು ಮಾರ್ಗದ ಕಾಮಗಾರಿ ಹಾಗೂ ಬೃಹತ್ ಟ್ರಾನ್ಸ್ ಫಾರ್ಮರ್ ಗಳ ಅಳವಡಿಕೆ ಕೆಲಸ ನಡೆಯುತ್ತಿದ್ದು, ಮುಳುಗಡೆ ಜಮೀನಿನ ಪ್ರದೇಶದಲ್ಲಿ ಕಟ್ಟಹಳ್ಳಿ ಏತ ನೀರಾವರಿ ಕಾಮಗಾರಿಯು ನಡೆಯುತ್ತಿರುವುದರಿಂದ ಏತ ನೀರಾವರಿ ಘಟಕಕ್ಕೆ ಭೂಮಿಯನ್ನು ಕಳೆದುಕೊಂಡಿರುವ ರೈತರು ತಮಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸುತ್ತಿರುವುದು ಕಂಡು ಬಂದಿದೆ.
ಮುಂಗಾರು ಕೈಕೊಟ್ಟು ಸಾಕಷ್ಟು ಸಂಕಷ್ಟ
ಇದೆಲ್ಲ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಏತನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದೇ ಆದರೆ ಇದರಿಂದ ರೈತರಿಗೆ ಅನುಕೂಲವಾಗಲಿದೆ. ಒಂದು ವೇಳೆ ಈ ಕಾಮಗಾರಿ ಇಷ್ಟರಲ್ಲೇ ಮುಗಿದಿದ್ದರೆ ನೀರನ್ನು ಕೆರೆಕಟ್ಟೆಗೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಈ ಬಾರಿ ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣದಿಂದ ಹೇಮಾವತಿ ಜಲಾಶಯವೇ ಭರ್ತಿಯಾಗಲಿಲ್ಲ. ಜೊತೆಗೆ ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಲಿಲ್ಲ.
ಕಳೆದ ಐದು ವರ್ಷದಲ್ಲಿ ಹೇಮಾವತಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಆದರೆ ಈ ಬಾರಿ ಮುಂಗಾರು ಕೈಕೊಟ್ಟು ಸಂಕಷ್ಟ ಎದುರಾಗಿದೆ. ಇಂತಹ ಸಂಕಷ್ಟ ಮುಂದಿನ ದಿನಗಳಲ್ಲಿ ಬಾರದಂತೆ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ. ಮುಂದಿನ ಮಳೆಗಾಲದ ವೇಳೆಗೆ ಈ ಏತನೀರಾವರಿ ಕಾರ್ಯಗತಗೊಂಡರೆ ಹೇಮಾವತಿ ನದಿ ನೀರನ್ನು ಪಂಪ್ ಮಾಡಿ ಕೆರೆಕಟ್ಟೆಗಳಿಗೆ ತುಂಬಿಸಲು ಸಾಧ್ಯವಾಗಬಹುದಲ್ಲದೆ, ರೈತರ ಕೃಷಿಚಟುವಟಿಕೆಗೆ ನೀರು ಒದಗಿಸಬಹುದಾಗಿದೆ. ಈ ಬಾರಿಯಂತು ಹೇಮಾವತಿ ನದಿಯಲ್ಲಿ ನೀರಿನ ಪ್ರಮಾಣ ಕುಂಠಿತವಾಗುವುದಂತು ಖಚಿತ. ಮುಂದಿನ ದಿನಗಳಲ್ಲಾದರೂ ಸಂಬಂಧಿಸಿದವರು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡೋಣ.












Click it and Unblock the Notifications