ಕೆಆರ್‌ಎಸ್ ಹಿನ್ನೀರಿಗೆ ಕನ್ನ; ಮೋಟಾರ್ ಅಳವಡಿಸಿ ಪ್ರಭಾವಿಯಿಂದ ಫಾರ್ಮ್‌ಹೌಸ್‌ಗೆ ನೀರು ಪೂರೈಕೆ
ಮಂಡ್ಯ: ಬರಗಾಲದ ಬೇಗೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ-ಮೈಸೂರು ಭಾಗದ ಜನತೆಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಿಸುತ್ತಿರುವ ಬೆನ್ನಲ್ಲೇ, ಪ್ರಭಾವಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಅಣೆಕಟ್ಟೆಗೆ ಕನ್ನ ಹಾಕಿ ಮೋಟಾರ್ ಅಳವಡಿಸಿಕೊಂಡು ಫಾರ್ಮ್ ಹೌಸ್‌ಗೆ ನೀರು ಸರಬರಾಜು ಮಾಡಿಕೊಳ್ಳುತ್ತಿರುವುದು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಕನ್ನಂಬಾಡಿ ಅಣೆಕಟ್ಟೆ ಬಳಿ ನಡೆಯುತ್ತಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ.
ಪ್ರಭಾವಿ ವ್ಯಕ್ತಿಗಳು ತಮ್ಮ ಫಾರ್ಮ್ ಹೌಸ್‌ಗೆ ಡ್ಯಾಂನಿಂದಲೇ ಕಳ್ಳತನದ ಮೂಲಕ ನೀರು ಪೂರೈಕೆ ಮಡಿಕೊಳ್ಳುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಯ ಹಿನ್ನಿರಿಗೆ ಹೊಂದಿಕೊಂಡಂತಿರುವ ಎರಡು ಫಾರ್ಮ್‌ಹೌಸ್‌ನ ನೀರು ಸರಬರಾಜಿಗೆ ಸುಮಾರು 200 ರಿಂದ 300 ಮೀಟರ್ ಪೈಪ್ ಅಳವಡಿಸಿಕೊಂಡು ನೀರಿಗೆ ಕನ್ನ ಹಾಕಿರುವ ಸಂಗತಿ ಬಯಲಾಗಿದೆ.

ಅಣೆಕಟ್ಟೆ ಭದ್ರತಾ ಪಡೆ ಸಿಬ್ಬಂದಿ ಕಣ್ತಪ್ಪಿಸಿ ಅಕ್ರಮ ನಡೆದಿದ್ದು, ಎಲ್ಲೆಡೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದರೂ, ಕದ್ದು ಮುಚ್ಚಿ ಫಾರ್ಮ್ ಹೌಸ್‌ಗೆ ಪ್ರಭಾವಿಗಳು ನೀರು ಪೂರೈಕೆ ಮಾಡಿಕೊಂಡಿರುವುದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆದಿರುವ ಪ್ರಭಾವಿಗಳಿಗೆ ಅಧಿಕಾರಿಗಳ ಬೆಂಬಲ ಇರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಕ್ರಮ ಜರುಗಿಸಲು ಅಧಿಕಾರಿಗಳ ನಿರ್ಲಕ್ಷ್ಯ
ಈ ಬಗ್ಗೆ ಸ್ಥಳೀಯರು ಸಾಕಷ್ಟು ಸಲ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸಲಿಲ್ಲ ಎಂಬ ಅರೋಪಗಳು ಕೇಳಿ ಬರುತ್ತಿದ್ದು, ಫಾರ್ಮ್ ಹೌಸ್‌ನ ಮಾಲೀಕರ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂದು ಆರೋಪಗಳು ಸಹ ಕೇಳಿ ಬರುತ್ತಿವೆ. ಇದೀಗ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ನೀರಾವರಿ ನಿಗಮದ ಅಧಿಕಾರಿಗಳು, ಅಕ್ರಮವಾಗಿ ಅಳವಡಿಸಿದ್ದ ಮೋಟಾರು ಹಾಗೂ ಪೈಪ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಣೆಕಟ್ಟೆಗೆ ಅಕ್ರಮವಾಗಿ ಮೋಟಾರ್ ಅಳವಡಿಸಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಜಲಾಶಯ 124. 80 ಅಡಿ ಗರಿಷ್ಠ ಮಟ್ಟ ಹೊಂದಿದ್ದು, ಸದ್ಯ ಜಲಾಶಯದಲ್ಲಿ 90.06 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಅಣೆಕಟ್ಟೆ ಒಟ್ಟು 16 ಟಿಎಂಸಿ ನೀರಿನ ಶೇಖರಣಾ ಸಾಮರ್ಥ್ಯ ಹೊಂದಿದ್ದು, ಸದ್ಯ 11 ಟಿಎಂಸಿ ನೀರು ಮಾತ್ರ ಬಳಕೆ ಮಾಡಬಹುದಾಗಿದ್ದು, ಉಳಿದ 5 ಟಿಎಂಸಿ ಡೆಡ್ ಸ್ಟೋರೊಜ್ ಆಗಲಿದ್ದು, ಈ ನೀರನ್ನು ಬಳಕೆ ಮಾಡಲು ಸಾಧ್ಯವಿರುವುದಿಲ್ಲ.












Click it and Unblock the Notifications