ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ನಾಪತ್ತೆ: ತನಿಖೆ ತೀವ್ರಗೊಳಿಸಿದ ಪೊಲೀಸರು
ಮಂಡ್ಯ, ಡಿಸೆಂಬರ್ 4: ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳ ನಿಗೂಢ ನಾಪತ್ತೆ ಪ್ರಕರಣದ ಸಂಬಂಧ ಮದ್ದೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ವಿದ್ಯಾರ್ಥಿಗಳ ನಾಪತ್ತೆ ಪ್ರಕರಣದಲ್ಲಿ ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಅಥವಾ ಪೋಷಕರ ವಿವಾದ ಕಾರಣವೇ ಎಂಬುದರ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Krishi Mela-2022: ಕೃಷಿಯಲ್ಲಿ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳ ಅಳವಡಿಕೆ ಅಗತ್ಯ- ಪುಟ್ಟರಾಜು
ಮದ್ದೂರು ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಶನಿವಾರ ಶಾಲೆಗೆ ಭೇಟಿ ನೀಡಿ ನಾಪತ್ತೆಯಾಗಿರುವ ಮಾದಾಪುರ ದೊಡ್ಡಿಯ ಎಂ.ಯು. ಶ್ರೇಯಸ್‌ಗೌಡ ಹಾಗೂ ದೇಶಹಳ್ಳಿಯ ಶರಣ್ ಪಟೇಲ್ ಬಗ್ಗೆ ಶಾಲಾ ಮುಖ್ಯಸ್ಥರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಶಾಲೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಹಾಗೂ ಶಾಲಾ ಹೊರ ಆವರಣದಲ್ಲಿರುವ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿಗಳ ಪತ್ತೆಗಾಗಿ ಪಿಎಸ್‌ಐ ಉಮೇಶ್ ಹಾಗೂ ಅಪರಾಧ ವಿಭಾಗದ ಇಬ್ಬರು ಪೊಲೀಸರ ತಂಡವನ್ನು ನಿಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲೆ ಮುಗಿದ ಬಳಿಕ ಶಾಲಾ ಬಸ್ ಹತ್ತದೆ ತಿಂಡಿ ತರುವ ನೆಪದಲ್ಲಿ ಶಾಲಾ ಆವರಣದಿಂದ ಹೊರ ನಡೆದು ನಾಪತ್ತೆಯಾಗಿದ್ದರು. ಶಾಲೆಗೆ ತೆರಳಿದ ಮಕ್ಕಳು ಕಣ್ಮರೆಯಾಗಿರುವುದರಿಂದ ಪೋಷಕರು ಆತಂಕಕ್ಕೊಳಗಾಗಿದ್ದಾರೆ.
ವಿದ್ಯಾರ್ಥಿಗಳ ಪತ್ತೆಗಾಗಿ ಪೊಲೀಸರ ಹುಡುಕಾಟ ತೀವ್ರಗೊಂಡಿದ್ದು, ಈವರೆಗೂ ವಿದ್ಯಾರ್ಥಿಗಳ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿಗಳು ಮೈಸೂರಿನಿಂದ ಬೆಂಗಳೂರು ಹಾಗೂ ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ತೆರಳುವ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕಲೆಹಾಕುವ ಕಾರ್ಯಕೂಡ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ನಾಪತ್ತೆ ವಿಚಾರವನ್ನು ರೈಲ್ವೆ ಪೊಲೀಸರಿಗೂ ಸಹ ಮಾಹಿತಿ ರವಾನಿಸಲಾಗಿದೆ. ಜೊತೆಗೆ ಮೆಜೆಸ್ಟಿಕ್ ಪ್ರದೇಶದಲ್ಲೂ ಸಹ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ.