Krishnarajapete: ಮೂಲ ಜೆಡಿಎಸ್ಸಿಗರ ಮಧ್ಯೆಯೇ ತ್ರಿಕೋನ ಸ್ಪರ್ಧೆ, ಗೆಲುವು ಯಾರಿಗೆ?
ಬೆಂಗಳೂರು, ಏಪ್ರಿಲ್ 30: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕೆ.ಆರ್.ಪೇಟೆ (ಕೃಷ್ಣರಾಜ ಪೇಟೆ) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿತ್ತು. ಈ ಬಾರಿ ಕ್ಷೇತ್ರ ಯಾರ ಪಾಲಾಗಲಿದೆ. ಯಾರು ಇಲ್ಲಿ ಪ್ರಬಲರಿದ್ದಾರೆ, ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ ಹೇಗೆ ಸೆಣಸಲಿವೆ ಎಂಬುದೇ ಕೌತುಕವಾಗಿದೆ.
ಸದ್ಯ ಕ್ಷೇತ್ರದಲ್ಲಿ ಮೂರು ಪಕ್ಷಗಳ ಚುನಾವಣಾ ಪ್ರಚಾರದ ಹವಾ ಹೆಚ್ಚಾಗಿದೆ. ಮೂರು ಪಕ್ಷಗಳು ತಾಮುಂದೆ ನಾಮುಂದೆ ಎಂದು ಪ್ರಚಾರ ಮಾಡಿ ಅಖಾಡವನ್ನು ರಂಗೇರಿಸಿವೆ. ಬಿಜೆಪಿ ಈ ಬಾರಿ ತನ್ನದೆ ಗೆಲುವು ಎನ್ನುತ್ತಿದ್ದರೆ, ತೀವ್ರ ಪೈಪೋಟಿಯಿಂದ ಮಣಿಸಿ ಮತ್ತೆ ಅಧಿಕಾರ ಹಿಡಿಯಲು ಜೆಡಿಎಸ್ ಮತ್ತು ಕಾಂಗ್ರೆಸ್ ತಂತ್ರ ರೂಪಿಸಿವೆ. ಹೀಗಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

2018 ರಲ್ಲಿ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾರಾಯಣ ಗೌಡ ಅವರು 66,000 ಮತಗಳಿಂದ ಗೆದ್ದು ಬೀಗಿದ್ದರು. ಅವರ ವಿರುದ್ಧ ಕೆಲವೇ ಮತಗಳಲ್ಲಿ (56,363) ಜೆಡಿಎಸ್ ಅಭ್ಯರ್ಥಿ ಬಿಎಲ್ ದೇವರಾಜ್ ಪರಾಭವಗೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ (41000) ಅವರು ಹೀನಾಯ ಸೋಲು ಕಂಡಿದ್ದರು.
ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ ಸೆಡ್ಡು
ಈ ಸಲ ಜೆಡಿಎಸ್ ನಿಂದ ಎಚ್.ಕೆ. ಮಂಜುನಾಥ್ ಅವರು ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಬಂದ ಬಿ.ಎಲ್ ದೇವರಾಜ್‌ಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿದೆ. ಇನ್ನೂ ಬಿಜೆಪಿ ಹಾಲಿ ಶಾಸಕ ನಾರಾಯಣ ಗೌಡ ಅವರಿಗೆ ಟೀಕೆಟ್ ನೀಡುವ ಮೂಲಕ ಪಕ್ಷ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದೆ.

ಬಿಜೆಪಿ ವಿರುದ್ಧ ಪ್ರಬಲ ಸ್ಫರ್ಧೆಗೆ ಸಜ್ಜಾಗಿರುವ ಜೆಡಿಎಸ್‌ನಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗೇ ಭಿನ್ನಮತ ಏರ್ಪಟ್ಟಿತ್ತು. ಎಚ್‌ಕೆ ಮಂಜುನಾಥ್‌ಗೆ ಟಿಕೆಟ್ ನೀಡಿದ್ದಕ್ಕೆ ಬಿ.ಎಲ್ ದೇವರಾಜ್ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಎಚ್‌ಡಿ ಕುಮಾರಸ್ವಾಮಿ ಯವರು ಎಚ್‌ಕೆ ಮಂಜುನಾಥ್‌ಗೆ ಟಿಕೆಟ್ ನೀಡಿದರು.
ಮೂಲ ಜೆಡಿಎಸ್ಸಿಗರಿಂದ ನಡುವೆಯೇ ಪೈಪೋಟಿ
ಇತ್ತ ಬಿಎಲ್ ದೇವರಾಜ್ ಕಾಂಗ್ರೆಸ್‌ಗೆ ತೆರಳಿ ಟಿಕೆಟ್ ಪಡೆದರು. ಕ್ಷೇತ್ರದಲ್ಲಿರುವ ದೇವರಾಜ್ ಬೆಂಬಲಿಗರು ಜೋರು ಪ್ರಚಾರ ಆರಂಭಿಸಿದ್ದಾರೆ. ತಮ್ಮ ಅಭ್ಯರ್ಥಿಗಿರುವ ಬೆಂಬಲದಿಂದೇ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಇತ್ತ ಬಿಜೆಪಿ ಶಾಸಕ ನಾರಾಯಣ ಗೌಡ ಅವರು ಪಕ್ಷ ನಿಷ್ಠರಾಗಿದ್ದಾರೆ. ಅವರು ಸಹ ಜೆಡಿಎಸ್‌ನಿಂದ ಇದೇ ಕ್ಷೇತ್ರದಲ್ಲಿ ಎರಡು ಭಾರಿ ಗೆದ್ದವರೇ. ಕಾರಣಾಂತರಗಳಿಂದ ಜೆಡಿಎಸ್ ತೊರೆದು ಕಮಲ ಪಡೆ ಸೇರಿದವರು.
ಈ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷಾಂತರ ಮಾಡಿದ್ದಲ್ಲದೇ ಮತ್ತದೇ ಅಭ್ಯರ್ಥಿಗಳು 2023ರ ಚುನಾವಣೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಹಳೆ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಹವಣಿಸುತ್ತದ. ಕ್ಷೇತ್ರದಲ್ಲಿ ಜೆಡಿಎಸ್ ವರ್ಚಸ್ಸು ಇದ್ದರೂ, ತಮ್ಮ ನಾಯಕನ್ನು ಕಳೆದುಕೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿತು. ಅಂದರೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಮೂಲ ಜೆಡಿಎಸ್ ಪಕ್ಷವೇ ಆಗಿದೆ.
ಗೆಲ್ಲುವ ಕುದುರೆಯನ್ನು ಸೇರಿಸಿಕೊಂಡಿರುವ ಬಿಜೆಪಿಯು ವಿಪಕ್ಷಗಳಿಗೆ ಆಘಾತ ನೀಡಲು ತಂತ್ರ ರೂಪಿಸಿದೆ. ನಾರಾಯಣ ಗೌಡರು ಇದುವರೆಗೆ ಕ್ಷೇತ್ರದಲ್ಲಿ ನಡೆಸಿದ ಆಡಳಿತ, ವರ್ಚಸ್ಸು, ಅಭಿವೃದ್ಧಿ ಅವರ ಬೆಂಬಲಿಗರೇ ತನ್ನ ಶಕ್ತಿಯಾಗಿಸಿಕೊಂಡಿದೆ. ಇತ್ತ ಜೆಡಿಎಸ್ ಸಹ ಕಳೆದುಕೊಂಡ ಕ್ಷೇತ್ರವನ್ನು ಪುನಃ ಪಡೆಯಲು ಹವಣಿಸುತ್ತಿದ್ದು, ಭಾರಿ ಪ್ರಚಾರ ನಡೆಸಿ ಭರವಸೆಗಳನ್ನು ನೀಡಿದೆ.
ತ್ರಿಕೋನ ಸ್ಪರ್ಧೆಯ ಕುತೂಹಲಕ್ಕೆ ಮೇ 13ಕ್ಕೆ ತೆರೆ
ಇವೆರಡು ಪಕ್ಷಗಳಿಗೆ ಈ ಭಾರಿ ಕಾಂಗ್ರೆಸ್ ಸಹ ತೀವ್ರ ಪೈಪೋಟಿ ಒಡ್ಡಲು ಸಜ್ಜಾಗಿದೆ. ಸುಮಾರು ನಾಲ್ಕು ದಶಕಗಳ ಕಾಲ ಜೆಡಿಎಸ್‌ಗೆ ದುಡಿದಿದ್ದ ಬಿಎಲ್ ದೇವರಾಜ್ ಅವರು ಪಕ್ಷ ದ್ರೋಹ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದ್ದರು. ಅವರಿಗೆ ಕ್ಷೇತ್ರದಲ್ಲಿನ ರಾಜಕೀಯ ಆಳ-ಅಗಳ ಗೊತ್ತಿರುವವರು. ಜಾತಿ ಲೆಕ್ಕಾಚಾರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು. ಅವರ ಈ ಎಲ್ಲ ಸಾಮರ್ಥ್ಯಗಳ ಆಧಾರದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಲು, ಜಿದ್ದಾ ಜಿದ್ದಿ ನಡೆಸಲು ತಯಾರಾಗಿದೆ.
ಇವೆಲ್ಲ ಕಾರಣಗಳಿಂದ ಕೆ.ಆರ್. ಪೇಟೆಯು ಈ ಬಾರಿ ಅಕ್ಷರಶಃ ರಣಕಣವಾಗಿ ಬದಲಾಗುತ್ತಿದೆ. ಈಗಾಗಲೇ ಭಾರಿ ಪ್ರಚಾರ ನಡೆಸಿರುವ ಅಭ್ಯರ್ಥಿಗಳು ಗೆಲ್ಲವು ಉತ್ಸಾಹ ತೋರುತ್ತಿದ್ದಾರೆ. ಆದರೆ ಇಲ್ಲಿನ ತ್ರಿಕೋನ ಸ್ಪರ್ಧೆಯಲ್ಲಿ ಬಹುಮತ ಯಾರ ಪಾಲಾಗಲಿದೆ ಎಂಬುದೇ ಕುತೂಹಲ. ಅದಕ್ಕೆ ಮೇ 13 ರಂದು ತೆರೆ ಬೀಳಲಿದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications