ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ವರದಿ ಮಾಡಲು ಈ ನಿಯಮ ಪಾಲಿಸಲೇಬೇಕು: ಇಲ್ಲಿದೆ ವಿವರ
ಮಂಡ್ಯ, ನವೆಂಬರ್ 26: ಡಿಸೆಂಬರ್ 20 ರಿಂದ 22ರ ವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಭಾಗವಹಿಸಿ ವರದಿಗಾರಿಕೆ ಮಾಡಲಿರುವ ಮಾಧ್ಯಮದವರು ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
ಸಮ್ಮೇಳನದಲ್ಲಿ ವರದಿಗಾಗಿ ಹಾಜರಾಗುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮ ಮಾನ್ಯತೆ ಪತ್ರ (Accreditation Card) ಹೊಂದಿದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶವಿದೆ. ಎಲೆಕ್ಟ್ರಾನಿಕ್ ಮೀಡಿಯಾದಿಂದ 6 ಪ್ರತಿನಿಧಿಗಳು (3 ವರದಿಗಾರರು 3 ವಿಡಿಯೋಗ್ರಾಹಕರು) ಹಾಗೂ ಪ್ರಿಂಟ್ ಮೀಡಿಯಾದಿಂದ 4 ಪ್ರತಿನಿಧಿಗಳು (3 ವರದಿಗಾರರು 1 ಛಾಯಾಗ್ರಾಹಕ)ರಿಗೆ ಅವಕಾಶ ನೀಡಲಾಗಿದೆ.

ವರದಿ ಮಾಡಬೇಕು ಎಂದುಕೊಂಡವರು ತಮ್ಮ ಹೆಸರು, ಡೆಸಿಗ್ನೇಷನ್, ದೂರವಾಣಿ ಸಂಖ್ಯೆ, ಕಚೇರಿ ವಿಳಾಸ ಮತ್ತು ಇಮೇಲ್ ವಿಳಾಸದೊಂದಿಗೆ ಇತ್ತೀಚಿನ ಎರಡು ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಮಂಡ್ಯ ಜಿಲ್ಲೆಯಲ್ಲಿರುವ ತಮ್ಮ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳ ಮೂಲಕ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಇವರಿಗೆ ನವೆಂಬರ್ 30ರ ಒಳಗೆ ತಲುಪಿಸಬೇಕು.
ನಿಗದಿತ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ. ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಮಾಧ್ಯಮ ಪ್ರತಿನಿಧಿಗಳ ಹೆಸರನ್ನು ಸಲ್ಲಿಸಿದಲ್ಲಿ ನಿಗಧಿ ಪಡಿಸಲಾಗಿರುವ ಸಂಖ್ಯೆಗಷ್ಠೇ ಸೀಮಿತಗೊಳಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಸ್ಥಳಿಯ ಮಾಧ್ಯಮ ಪ್ರತಿನಿಧಿಗಳು ಹೊಂದಿಲ್ಲದೇ ಇರುವ ರಾಷ್ಟ್ರಮಟ್ಟದ ಮಾಧ್ಯಮಗಳು ಹಾಗೂ ಇತರೆ ಭಾಷೆಯ ಮಾಧ್ಯಮಗಳು ಮಾತ್ರ 2 ಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮೀಡಿಯಾದಿಂದ (1 ವರದಿಗಾರರು 1 ವಿಡಿಯೋಗ್ರಾಹಕರು) ಪ್ರಿಂಟ್ ಮೀಡಿಯಾದಿಂದ 2 ಪ್ರತಿನಿಧಿಗಳು (1 ವರದಿಗಾರರು 1 ಛಾಯಾಗ್ರಾಹಕ)ರಿಗೆ ಅವಕಾಶವಿದೆ.
ಆಸಕ್ತರು ತಮ್ಮ ಹೆಸರು, ಡೆಸಿಗ್ನೇಷನ್, ದೂರವಾಣಿ ಸಂಖ್ಯೆ, ಕಚೇರಿ ವಿಳಾಸ ಮತ್ತು ಇಮೇಲ್ ವಿಳಾಸದೊಂದಿಗೆ ಇತ್ತೀಚಿನ ಎರಡು ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಇವರಿಗೆ ನವೆಂಬರ್ 30ರ ಒಳಗೆ ತಲುಪಿಸಬೇಕು.
ನಿಗದಿತ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ. ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಮಾಧ್ಯಮ ಪ್ರತಿನಿಧಿಗಳ ಹೆಸರನ್ನು ಸಲ್ಲಿಸಿದಲ್ಲಿ ನಿಗಧಿ ಪಡಿಸಲಾಗಿರುವ ಸಂಖ್ಯೆಗಷ್ಟೇ ಸೀಮಿತಗೊಳಿಸಲಾಗುವುದು ಎಂದು ಈಗಾಗಲೇ ಆಯೋಜಕರ ವತಿಯಿಂದ ತಿಳಿಸಲಾಗಿದೆ.












Click it and Unblock the Notifications