ಕಾವೇರಿಗಾಗಿ ಏನು ಕೊಡುಗೆ ನೀಡದ ತಮಿಳುನಾಡು ಬರೀ ನೀರಿಗಾಗಿ ತಗಾದೆ ತೆಗೆಯುತ್ತಿದೆ: ಇತಿಹಾಸ ಸಂಶೋಧಕ
ಮಂಡ್ಯ, ಸೆಪ್ಟೆಂಬರ್, 28: ಕರ್ನಾಟಕದ ಕಾವೇರಿಗಾಗಿ ಏನೂ ಕೊಡುಗೆ ನೀಡದ ತಮಿಳುನಾಡು ಸರ್ಕಾರ ಕೇವಲ ನೀರಿಗಾಗಿ ಹಪಹಪಿಸುತ್ತಿದೆ ಎಂದು ಇತಿಹಾಸ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ ಮಂಡ್ಯದಲ್ಲಿ ಆರೋಪಿಸಿದರು.
ನಗರದ ಸರ್.ಎಂ.ವಿ. ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಅರಣ್ಯ ವ್ಯಾಪ್ತಿಯನ್ನು ನಿರ್ವಹಣೆ ಮಾಡಲು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿವೆ. ಆದರೆ ಕಾವೇರಿ ಕಣಿವೆಯ ಅರಣ್ಯ ಪ್ರದೇಶವನ್ನು ಸಂರಕ್ಷಿಸುವಲ್ಲಿ ತಮಿಳುನಾಡು ಸರ್ಕಾರ ಒಂದೇ ಒಂದು ರೂಪಾಯಿಗಳನ್ನು ಖರ್ಚು ಮಾಡದೆ ನೀರಿಗಾಗಿ ಮಾತ್ರ ತಗಾದೆ ತೆಗೆಯುತ್ತಿದೆ ಎಂದು ದೂರಿದರು.

ತಮಿಳುನಾಡಿಗೆ ಕರ್ನಾಟಕದ ಹಳೆ ಮೈಸೂರು ಭಾಗ, ಆಂಧ್ರಪ್ರದೇಶದ ದಕ್ಷಿಣ ಭಾಗ, ಕೇರಳ ಸೇರಿ ಐದು ಜಲಮೂಲಗಳಿವೆ. ಇದನ್ನು ಮರೆಮಾಚಿ ಪ್ರಾಧಿಕಾರದ ಎದುರು ಕರ್ನಾಟಕದ ಬಿಡಬೇಕಾದ ನೀರಿನ ಹಕ್ಕನ್ನು ಮಾತ್ರ ಪ್ರತಿಪಾದಿಸುತ್ತಿದೆ ಎಂದು ತಮಿಳುನಾಡು ಸರ್ಕಾರದ ವಿರುದ್ಧ ಹರಿಹಾಯ್ದರು.
ಮೂರನೇ ಒಂದರಷ್ಟು ಅರಣ್ಯ ಸಂರಕ್ಷಿಸದೆ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆ ಮಾಡಿಕೊಂಡಿದೆ ಎಂದರು.
ಬೆಂಗಳೂರಿನ ಯಲಹಂಕ ಪ್ರದೇಶಕ್ಕೆ ಕಾವೇರಿ ನೀರು ನೀಡುವ ಯೋಜನೆಗೆ ಕಾವೇರಿ ವ್ಯಾಪ್ತಿಗೆ ಸದರಿ ಪ್ರದೇಶ ಬರುವುದಿಲ್ಲ ಎಂದು ಅಡ್ಡಗಾಲು ಹಾಕಿದ್ದರು. ಕಾವೇರಿ ನೀರಿನ ಹೆಚ್ಚಿನ ಪಾಲನ್ನು ಪಡೆಯುತ್ತಿರುವ ತಮಿಳುನಾಡಿನ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು. ತಮಿಳುನಾಡಿನಲ್ಲಿ ವ್ಯವಸಾಯದ ಭೂಮಿ ಶ್ರೀಮಂತರ ಬಳಿ ಇದೆ. ಅವರು ತಮ್ಮ ಮನೆಗಳಲ್ಲಿ ಇರುವ ಜೀತಗಾರರನ್ನು ಕಾವೇರಿ ಹೋರಾಟಕ್ಕೆ ಕರೆ ತಂದು ಸತ್ತ ಹೆಗ್ಗಣ ತಿನ್ನಿಸುವ ಚಳವಳಿ ಮಾಡಿದ್ದಾರೆ. ಅಮಾಯಕರನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಇದೊಂದು ಮಾನವ ಹಕ್ಕಿನ ಉಲ್ಲಂಘನೆ ಪ್ರಕರಣವಾಗಿದೆ ಎಂದು ಆರೋಪಿಸಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದು 1118 ವರ್ಷಗಳ ಹಿಂದೆ ಎಂಬ ಸತ್ಯ ತಿಳಿಯಬೇಕಾಗಿದೆ. 904 ಮತ್ತು 905ನೇ ಇಸವಿಯಲ್ಲಿ ಪಾಂಡವಪುರ ತಾಲೂಕಿನ ಸೀತಾಪುರದ ಬಳಿ ತಲಕಾಡು ಗಂಗರು ಕಾವೇರಿ ನದಿಗೆ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಾಣ ಮಾಡಿದ್ದರು. ತಮಿಳುನಾಡಿನಲ್ಲಿ ಅದಾಗಲೇ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿಕೊಂಡಿದ್ದ ಚೋಳರು ಇದಕ್ಕೆ ತಕರಾರು ಮಾಡಿದ್ದರು ಎಂದು ವಿವರಿಸಿದರು.
ತಲಕಾಡು ಗಂಗರ ನಂತರ ಮೈಸೂರು ರಾಜ ಮನೆತನದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಲಾಶಯ ನಿರ್ಮಿಸಿದರು. ಇದಕ್ಕೆ ಒಡೆಯರ್ ಪತ್ನಿ ಪ್ರತಾಪ ಕುಮಾರಿ ಚಿನ್ನಾಭರಣಗಳನ್ನು ನೀಡುವ ಮೂಲಕ ಸಹಕರಿಸಿದ್ದರು ಎಂದು ಹೇಳಿದರು.
ಕಾವೇರಿ ನೀರಿನ ವಿಚಾರದಲ್ಲಿ ವಾಸ್ತವಾಂಶ ಮಂಡಿಸಲು ಒಬ್ಬನೇ ಒಬ್ಬ ಕನ್ನಡಿಗ ವಕೀಲರು ಇಲ್ಲ. ಅಷ್ಟೇ ಅಲ್ಲದೆ ಇವರಿಗೆ ನೀರಿನ ಮೂಲದ ಬಗ್ಗೆ ಅರಿವು ಇಲ್ಲ. ಕೇವಲ ಅಂಕಿ ಅಂಶದ ಮೂಲಕ ವಾದ ಮಾಡುತ್ತಿದ್ದು, ಇದರಿಂದ ನ್ಯಾಯ ಸಿಗುತ್ತಿಲ್ಲ. ನೀರಾವರಿ ತಜ್ಞರು, ರೈತರು, ಕಾವೇರಿ ಹೋರಾಟಗಾರರ ಜೊತೆ ಸಮಗ್ರವಾಗಿ ಚರ್ಚಿಸಿ ಮಾಹಿತಿ ಪಡೆದು ನ್ಯಾಯಾಲಯದ ಮುಂದೆ ಸಮರ್ಥ ವಾದ ಮಂಡನೆಗೆ ಸರ್ಕಾರ ಮುಂದಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಕಾವೇರಿ ವಿಚಾರದಲ್ಲಿ ಕಾನೂನಿನ ಮೂಲಕ ನ್ಯಾಯ ಸಿಗದು, ಪರ್ಯಾಯ ಮಾರ್ಗದ ಮೂಲಕ ಜಲ ಸಂರಕ್ಷಣೆಗೆ ಮುಂದಾಗಬೇಕು. ಜಲಾಶಯಗಳ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸ ಆಗಬೇಕು. ಆ ಹಿನ್ನೆಲೆಯಲ್ಲಿ ಹೊಸ ಕೆರೆಗಳ ನಿರ್ಮಾಣದ ಜೊತೆಗೆ ಕೆರೆಗಳ ಹೂಳೆತ್ತಿಸಬೇಕು. ಒತ್ತುವರಿ ತೆರವು ಮಾಡಿ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ಕರ್ನಾಟಕದ ಪಾಲಿನ ನೀರು ಸದ್ಬಳಕೆಗೆ ಸರ್ಕಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಮುಕುಂದರಾಜು ಮಾತನಾಡಿ, ಹೋರಾಟದಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಜಿ.ಮಾದೇಗೌಡ ಅವರು ಹೋರಾಟ ಮಾಡುತ್ತಲೇ ಬಂದಿದ್ದರು. ಆದರೆ, ನೀರಿನ ಸಮಸ್ಯೆಯೇ ಬಗೆಹರಿಯುತ್ತಿಲ್ಲ. ರೈತರು ಒಂದು ಬೆಳೆ ಬೆಳೆಯುವುದನ್ನು ನಿಲ್ಲಿಸಿದರೆ ಪರಿಣಾಮ ಬೀರಲ್ಲ. ಆದರೆ, ಬೆಂಗಳೂರು ಜನಕ್ಕೆ ಒಂದು ದಿನ ನೀರಿಲ್ಲ ಅಂದರೆ ತುಂಬಾ ನಷ್ಟವಾಗುತ್ತದೆ ಎಂದರು.
ಒಂದೂವರೆ ಕೋಟಿ ಜನರಿಗೆ ನೀರು ಸಿಗಬೇಕು. ಜೊತೆಗೆ ಬೆಂಗಳೂರಿನಲ್ಲಿಯೇ ಹೆಚ್ಚು ತಮಿಳಿಗರು ವಾಸ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಹಲವು ಹೋರಾಟಗಳು ನಡೆಯುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಡಲು ಸರ್ಕಾರ ನಿರ್ಧಾರ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಒಕ್ಕಲಿಗರ ಪದವೀಧರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ವೆಂಕಟೇಶ್ ಮಾತನಾಡಿ, ಜನಕ್ಕಿಂತ ಮೀರಿದ ಕಾನೂನು ಯಾವುದೂ ಇಲ್ಲ. ತಮಿಳುನಾಡು ಹೋರಾಟ ಮಾಡದೇ ಗೆಲ್ಲುತ್ತಿದೆ. ಸರ್ಕಾರವು ಭಾಗ್ಯಗಳನ್ನು ಕೊಟ್ಡು ಅಧಿಕಾರ ನಡೆಸೋದು ದೊಡ್ಡ ಸಾಧನೆಯಲ್ಲ. ದೇಶದಲ್ಲಿ ಸ್ಮಾರ್ಟ್ ಸಿಟಿಗಳಿಗೆ ಆದ್ಯತೆ ನೀಡುತ್ತಾ, ಸ್ಮಾರ್ಟ್ ಹಳ್ಳಿಗಳ ಜನರ ಕಡೆ ಗಮನ ಹರಿಸದೇ ಮರೆತಿದ್ದಾರೆ ಎಂದರು.
ಅಹಿಂದ ಪಕ್ಷದ ಮತದ ಓಲೈಕೆಯಲ್ಲೇ ಮುಗಿ ಬಿದ್ದಿದ್ದಾರೆ. ಇದರ ನಡುವೆ ರೈತರದ್ದು ಅರಣ್ಯ ರೋದನವೇ ಹೆಚ್ಚಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇವರಾಜು ಅರಸು ಎನ್ನುತ್ತಾರೆ. ನೀವು ನೀರು ಬಿಡಬಾರದು, ಇಲ್ಲವಾದರೆ ಜನ ನಿಮ್ಮನ್ನು ನಕಲಿ ದೇವರಾಜು ಅರಸು ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಉಪಾಧ್ಯಕ್ಷ ಹರಿಪ್ರಸಾದ್ ಮಾತನಾಡಿ, ವರ್ತಕರು ರೈತರನ್ನು ಮರೆಯಲು ಸಾಧ್ಯವಿಲ್ಲ. ವ್ಯಾಪಾರ ನಡೆಯುತ್ತಿರುವುದೇ ರೈತರಿಂದ. ನೀರು ಇಲ್ಲದಿರುವಾಗ ಹೋರಾಟ ಮಾಡುವುದಲ್ಲ, ನೀರಿನ ಬಳಕೆ ಹೇಗೆ ಆಗಬೇಕು ಎಂಬುದನ್ನು ತಿಳಿಸಿಕೊಡಬೇಕು. ನೀರಿನ ಮಿತವ್ಯಯ ಹಾಗೂ ಖರ್ಚಿಲ್ಲದೇ ವ್ಯವಸಾಯ ಮಾಡಬೇಕು. ವ್ಯವಸಾಯ ತಿಳಿದುಕೊಳ್ಳಬೇಕು. ಕಾವೇರಿ ಹೋರಾಟವನ್ನು ನೀರು ಇಲ್ಲದೇ ಇರುವಾಗ ಮಾಡುವುದಲ್ಲ, ನೀರಿನ ಲಭ್ಯತೆ ತಿಳಿಸಿಕೊಟ್ಟು ರಾಜ್ಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಸಮಿತಿಯ ಸುನಂದಾ ಜಯರಾಂ, ಕೆ.ಬೋರಯ್ಯ, ಕನ್ನಡಸೇನೆ ಮಂಜುನಾಥ್, ಇಂಡುವಾಳು ಚಂದ್ರಶೇಖರ್, ಕೆಂಪೇಗೌಡ ಗೌಡಯ್ಯನದೊಡ್ಡಿ, ಅಂಬುಜಮ್ಮ, ತಗ್ಗಹಳ್ಳಿ ವೆಂಕಟೇಶ್, ಕೀಲಾರ ಸೋಮಶೇಖರ್, ಸಿ.ಟಿ.ಮಂಜುನಾಥ್, ಜಯಕರ್ನಾಟಕ ಯೋಗಣ್ಣ, ಮೆಡಿಕಲ್ ಅಶೋಕ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.












Click it and Unblock the Notifications