ಪುರುಷರಿಗೆ ಲಿಕ್ಕರ್, ಮಹಿಳೆಯರಿಗೆ ಕುಕ್ಕರ್, ಏನು ಬೇಡದವರಿಗೆ ನಿಕ್ಕರ್ ಕೊಡುತ್ತಿರುವ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿ
ವಿಧಾನಸಭೆ ಚುನಾವಣೆ ಹಿನ್ನೆಲೆ ಜನರಿಗೆ ಇಲ್ಲಸಲ್ಲದ ಆಮಿಷವೊಡ್ಡುತ್ತಿರುವ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯ, ಜನವರಿ, 30: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯನ್ನು ನಡೆಸುತ್ತಿವೆ. ಜನರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಹೀಗೆ ಮತದಾರರಿಗೆ ಆಮಿಷ ಒಡ್ಡುತ್ತಿರುವ ಕ್ರಿಮಿನಲ್ ನಡವಳಿಕೆಯ ರಾಜಕಾರಣಿಗಳ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ರಾಷ್ಟ್ರಸಮಿತಿ ಪಕ್ಷದ ಕಾರ್ಯಕರ್ತರು ಮುಂದಾಗಿದ್ದಾರೆ. ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ಚುನಾವಣಾ ಆಯೋಗಕ್ಕೆ ವರದಿ ಮಾಡುವಂತೆ ಒತ್ತಾಯಿಸಿ ರಾಷ್ಟ್ರಸಮಿತಿ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು
ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ರಾಜಕೀಯ ಪಕ್ಷಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜನರಿಗೆ ಆಮಿಷವೊಡ್ಡುವ ಭ್ರಷ್ಟ ರಾಜಕಾರಣಿಗಳಿಗೆ ಹಾಗೂ ಪುಂಡರಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯ ವಿಧಾನಸಭಾ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣಿಗಳು ಹಾಗೂ ಪುಡಾರಿಗಳು ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ಕುಕ್ಕರ್, ಸೀರೆ, ಬೆಳ್ಳಿ ವಿಗ್ರಹ, ಸ್ಪೋರ್ಟ್ ಕಿಟ್ ಇತ್ಯಾದಿ ವಸ್ತುಗಳನ್ನು ವಿತರಿಸುತ್ತಿದ್ದಾರೆ. ಅಲ್ಲದೇ ತೀರ್ಥ ಕ್ಷೇತ್ರಗಳ ಪ್ರವಾಸಗಳನ್ನು ಆಯೋಜಿಸುತ್ತಿದ್ದು, ಬಾಡೂಟ, ಬಿರಿಯಾನಿ, ಮದ್ಯದ ಪಾರ್ಟಿಯನ್ನು ಆಯೋಜಿಸುತ್ತಿದ್ದಾರೆ. ಇದು ಕ್ರಿಮಿನಲ್ ಕೃತ್ಯ ಎಂದು ಟೀಕಿಸಿದರು.

ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಆಕ್ರೋಶ
ಪುರುಷರಿಗೆ ಲಿಕ್ಕರ್, ಮಹಿಳೆಯರಿಗೆ ಕುಕ್ಕರ್, ಇವೆರೆಡೂ ಬೇಡದವರಿಗೆ ನಿಕ್ಕರ್ ಹಂಚುವ ಚುನಾವಣಾ ಅಕ್ರಮಗಳು ಕಳೆದ ಒಂದೆರಡು ದಶಕಗಳಿಂದ ಕರ್ನಾಟಕದಲ್ಲಿ ಸರ್ವೇಸಾಮಾನ್ಯವಾಗಿದೆ. ಇಂತಹ ಭ್ರಷ್ಟ, ಕಾನೂನು ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಚುನಾವಣಾ ವ್ಯವಸ್ಥೆಗೆ ಕೇವಲ ಭ್ರಷ್ಟ ಮತ್ತು ದುರುಳ ರಾಜಕಾರಣಿಗಳು ಮಾತ್ರವಲ್ಲದೆ, ಅವರ ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ವಿಫಲರಾಗುತ್ತಿರುವ ಆಡಳಿತ ವರ್ಗದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಭ್ರಷ್ಟ ರಾಜಕಾರಣಿಗಳು ಮತದಾರರಿಗೆ ಆಮಿಷ ಒಡ್ಡುತ್ತಿರುವ ಕಾನೂನು ಬಾಹಿರ ಪ್ರಕರಣಗಳನ್ನು ಕಾನೂನು ಅಡಿಯಲ್ಲಿ ಮಟ್ಟ ಹಾಕುವ ಕೆಲಸವನ್ನು ಜಿಲ್ಲಾಧಿಕಾರಿಗಳಾಗಿ ತಾವು ಮಾಡಬೇಕು. ಮತ್ತು ಅಂತಹ ಪ್ರಕರಣಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ರಾಜಕಾರಣಿಗಳು ಒಡ್ಡುತ್ತಿರುವ ಆಮಿಷಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, ಜಿಲ್ಲಾಧ್ಯಕ್ಷ ರಮೇಶ್‌ಗೌಡ, ಮುಖಂಡರಾದ ಸಿರಾಜ್ ಅಹ್ಮದ್, ರಘು ಜಾಗಣಗೆರೆ, ಕೆ.ಜೆ. ರಮೇಶ್, ಸಿದ್ದಲಿಂಗಯ್ಯ, ಮಂಜುನಾಥ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications