ಮರಳು ಅಡ್ಡೆಯ ಮೇಲೆ ತಹಸೀಲ್ದಾರ್ ದಾಳಿ, ಇಬ್ಬರ ಬಂಧನ
ಮಂಡ್ಯ, ಡಿಸೆಂಬರ್ 14: ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಮರಳು ಅಡ್ಡೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ತಹಸೀಲ್ದಾರ್ ನಿಸರ್ಗಪ್ರಿಯ ನೇತೃತ್ವದ ಕಂದಾಯ ಇಲಾಖೆ ಸಿಬ್ಬಂಧಿಗಳ ತಂಡ ಇಬ್ಬರನ್ನು ಬಂಧಿಸಿ ಪೊಲೀಸರ ವಶಕ್ಕೆ ನೀಡಿದ್ದು ಮರಳು ಸಾಗಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಮತ್ತು ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ತಾಲೂಕಿನ ಕೂಡಲಕುಪ್ಪೆ ಬಳಿ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಮಂಗಳವಾರ ರಾತ್ರಿ 10 ಘಂಟೆಯ ಸಮಯದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ ತಮ್ಮ ಸಿಬ್ಬಂಧಿಗಳೊಂದಿಗೆ ದಿಢೀರ್ ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮರಳು ಸಾಗಿಸುತ್ತಿದ್ದ ಪಿಡಿಜಿ ಕೊಪ್ಪಲು ಗ್ರಾಮದ ಟ್ರ್ಯಾಕ್ಟರ್ ಮಾಲೀಕ ರಘು ಮತ್ತು ಅವನ ಒಬ್ಬ ಸಹಚರ ಸ್ಥಳದಲ್ಲಿಯೇ ಮಾಲು ಸಮೇತ ಸಿಕ್ಕಿಬಿದ್ದರು. ತಕ್ಷಣವೇ ಪೊಲೀಸರನ್ನು ಸ್ಥಳಕ್ಕೆ ಕರೆಸಿದ ತಹಸೀಲ್ದಾರರು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಟ್ರ್ಯಾಕ್ಟರ್ ಸಮೇತ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದರು.
ನದಿ ದಡದಲ್ಲಿ ಸಂಗ್ರಹಿಸಲಾಗಿದ್ದ ಮರಳು ಗುಡ್ಡೆಯಲ್ಲಿ ಒಂದಷ್ಟನ್ನು ಸೀಸ್ ಮಾಡಿ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸುರಿಸಲಾಗಿದೆ. ಸಾಗಾಣಿಕೆ ವಾಹನದ ಸಮಸ್ಯೆಯಿದಂದ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದ ಎಲ್ಲಾ ಮರಳನ್ನೂ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣಕ್ಕೆ ತರಲು ಸಧ್ಯವಾಗದ ಕಾರಣ ಹೆಚ್ಚುವರಿ ಮರಳನ್ನು ನದಿಗೆ ತಳ್ಳಿಸಲಾಗಿದೆ ಎಂದು ತಹಸೀಲ್ದಾರ್ ನಿಸರ್ಗಪ್ರಿಯ ತಿಳಿಸಿದ್ದಾರೆ.
ತಾಲೂಕಿನ ಬಹುತೇಕ ಕಡೆ ಹೇಮಾವತಿ ನದಿ ಮತ್ತು ಕೆರೆ ಬಯಲಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ತಾಲೂಕು ಆಡಳಿತದ ಗಮನಕ್ಕೆ ಬಂದಿದೆ. ಫಿಲ್ಟರ್ ಮರಳು ದಂದೆ ಕೋರರಿಂದ ಕೆರೆಗಳು ಹಾಲಾಗುತ್ತಿದ್ದು ಜನಜಾನುವಾರುಗಳ ಕುಡಿಯುವ ನೀರು ಮಲೀನಗೊಳ್ಳುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯ ಮೇಲೆ ತಾಲೂಕು ಆಡಳಿತ ಸಮರ ಸಾರಿದ್ದು ಅಕ್ರಮ ಮರಳು ದಂದೆಕೋರರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲಾಗುವುದೆಂದು ತಹಸೀಲ್ದಾರ್ ನಿಸರ್ಗಪ್ರಿಯ ತಿಳಿಸಿದ್ದಾರೆ.












Click it and Unblock the Notifications