ಮಂಡ್ಯದಲ್ಲಿ ದ್ವೇಷಕ್ಕೆ ರೌಡಿಶೀಟರ್ ಬರ್ಬರ ಹತ್ಯೆ
ಮಂಡ್ಯ, ಅಕ್ಟೋಬರ್ 31: ಹಾಡಹಗಲೇ ದುಷ್ಕರ್ಮಿಗಳ ತಂಡವೊಂದು ರೌಡಿಶೀಟರ್ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಗುತ್ತಲು ಬಡಾವಣೆಯ ರೌಡಿ ಶೀಟರ್ ಸುಮಂತ್ ಅಲಿಯಾಸ್ ಕುಳ್ಳಿ (20) ಹತ್ಯೆಯಾದ ಯುವಕ. ಮಂಡ್ಯದ ಬಸವನಗುಡಿಯ 4ನೇ ಕ್ರಾಸ್ ನಲ್ಲಿ ಅ.30ರ ಸಂಜೆ ಸುಮಂತ್ ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.
ಈಚೆಗೆ ಹೆದ್ದಾರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಗೆ ಸೇರಿಕೊಂಡಿದ್ದ ಸುಮಂತ್ ನಗರದಲ್ಲಿ ಮನೆಮನೆಗೆ ಹಾಲು ಹಾಕುವ ಕೆಲಸ ಮಾಡುತ್ತಿದ್ದ. ಸಂಜೆ ಹಾಲು ಹಾಕುವ ವೇಳೆ ಗುತ್ತಲಿನ ಬಸವಗುಡಿ ಬಡಾವಣೆಯ ಬಳಿ ಬೈಕ್ ನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಈಚೆಗೆ ಹುಡುಗಿಯೊಬ್ಬಳನ್ನು ಸುಮಂತ್ ಪ್ರೀತಿಸುತ್ತಿದ್ದ. ಆ ಹುಡುಗಿ ಮನೆ ಬಿಟ್ಟು ಈತನ ಜೊತೆಗೆ ಬಂದಿದ್ದಳು. ಪೊಲೀಸ್ ಠಾಣೆಯಲ್ಲಿ ರಾಜಿ ಮಾಡಿಸಿ ಹುಡುಗಿಯನ್ನು ಆಕೆಯ ಮನೆಗೆ ಕಳುಹಿಸಲಾಗಿತ್ತು. ಅದೇ ದ್ವೇಷದ ಮೇಲೆ ಕೊಲೆ ನಡೆದಿದೆ ಎಂದು ಸುಮಂತ್ ತಂದೆ ಆರೋಪಿಸಿದ್ದಾರೆ. ಜೊತೆಗೆ ಕೆಲ ದಿನಗಳ ಹಿಂದೆ ಕೆಲ ಯುವಕರ ಜೊತೆ ಸುಮಂತ್ ಗಲಾಟೆ ಮಾಡಿಕೊಂಡಿದ್ದ ಎಂಬ ಸಂಗತಿ ತಿಳಿದುಬಂದಿದೆ. ದ್ವೇಷದ ಕಾರಣದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ, ಆರೋಪಿಗಳು ಬಿಟ್ಟು ಬೈಕ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ಠಾಣೆಯ ಪೊಲೀಸರು ಕೊಲೆ ಮಾಡಿದ ಆರೋಪಿಗಳ ಮಾಹಿತಿ ಕಲೆ ಹಾಕಿ ಬಂಧನಕ್ಕೆ ಬಲೆ ಬೀಸಿದ್ದಾರೆ.
Recommended Video
ಕಳೆದ ವಾರ ಶ್ರೀರಂಗ ಪಟ್ಟಣದಲ್ಲಿ ರೌಡಿಶೀಟರ್ ವ್ಯಕ್ತಿಯ ಕೊಲೆಯಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಜಿಲ್ಲೆಯಲ್ಲಿ ಮತ್ತೊಬ್ಬ ರೌಡಿ ಶೀಟರ್ ಯುವಕನ ಕೊಲೆಯಾಗಿದೆ.












Click it and Unblock the Notifications