ಮಂಡ್ಯದಲ್ಲಿ ಗುತ್ತಿಗೆದಾರರ ಜಟಾಪಟಿ, ಎಲ್ಲಿಗೆ ಬಂದು ನಿಂತಿದೆ ಗೊತ್ತಾ?
ಮಂಡ್ಯ, ನವೆಂಬರ್.30: ಚುನಾವಣೆ ಕಳೆಯಿತು ಇನ್ನಾದರೂ ಜನ ಪ್ರತಿನಿಧಿಗಳು ಒಂದಷ್ಟು ಅಭಿವೃದ್ಧಿ ಕೆಲಸ ಮಾಡುತ್ತಾರಾ ಎಂದು ಕಾಯುತ್ತಿದ್ದ ಜನರಿಗೆ ಮತ್ತೆ ನಿರಾಸೆಯೇ ಆಗುತ್ತಿದೆ. ಅಷ್ಟೇ ಅಲ್ಲ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾಡಬೇಕಾದ ಗುತ್ತಿಗೆದಾರರು ಕೂಡ ತಮ್ಮ ನಾಯಕನ ಮುಖಾಂತರ ಕೆಲಸ ಪಡೆಯಲು ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ.
ಇನ್ನೊಂದೆಡೆ ಗುತ್ತಿಗೆದಾರರ ನಡುವೆ ಜಟಾಪಟಿಗಳು ಕೂಡ ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಆರಂಭವಾಗಿವೆ. ಹಿಂದೆ ಪುಟ್ಟರಾಜು ಅವರು ಸಂಸದರಾಗಿದ್ದ ಕಾಲದಲ್ಲಿ ಪಾಂಡವಪುರ ವ್ಯಾಪ್ತಿಯಲ್ಲಿ ಅವತ್ತು ಶಾಸಕರಾಗಿದ್ದ ದಿವಂಗತ ಪುಟ್ಟಣ್ಣಯ್ಯ ಅವರ ನಡುವೆ ಜಟಾಪಟಿಗಳು ನಡೆಯುತ್ತಿದ್ದವಲ್ಲದೆ, ಒಂದೇ ಕಾಮಗಾರಿಗೆ ಎರಡೆರಡು ಬಾರಿ ಭೂಮಿ ಪೂಜೆ ನಡೆದ ನಿದರ್ಶನಗಳಿದ್ದವು.
ಇದೀಗ ನಾಗಮಂಗಲದಲ್ಲಿ ಸಂಸದ ಶಿವೇರಾಮೇಗೌಡರು ಮತ್ತು ಶಾಸಕ ಸುರೇಶ್ ಗೌಡ ಬೆಂಬಲಿತ ಗುತ್ತಿಗೆದಾರರ ನಡುವೆ ಕಿತ್ತಾಟ ಆರಂಭವಾಗಿದ್ದು ಪರಿಣಾಮ ಗ್ರಾಮೀಣ ರಸ್ತೆಗಳ ಕಾಮಗಾರಿಗಳು ಹಳ್ಳ ಹಿಡಿಯುವ ಲಕ್ಷಣಗಳು ಕಂಡು ಬಂದಿವೆ.
ಇವರ ಕಿತ್ತಾಟದಿಂದ ರೋಸಿ ಹೋದ ಹಿನ್ನಲೆಯಲ್ಲಿ ನಾಗಮಂಗಲ ತಾಲೂಕಿನ ಟಿ ಚನ್ನಾಪುರ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಗ್ರಾಮಸ್ಥರು ಪ್ರತಿಭಟಿಸಿ ಸ್ಥಗಿತಗೊಳಿಸಿದ್ದಾರೆ.

ವಿಧಾನಸಭಾ ಚುನಾವಣೆ ಎದುರಾಯಿತು
ಸಂಸದ ಶಿವರಾಮೇಗೌಡ ಬೆಂಬಲಿಗ ಗುತ್ತಿಗೆದಾರನಾದ ಜವರಪ್ಪಗೌಡ ಮಾಜಿ ಶಾಸಕ ಚಲುವರಾಯಸ್ವಾಮಿಯ ಅವಧಿಯಲ್ಲಿ ಕೆಆರ್ ಐಡಿಎಲ್ ನಿಂದ 30 ಲಕ್ಷ ರೂ. ವೆಚ್ಚದಲ್ಲಿ ಹೊಣಕೆರೆ ಹೋಬಳಿ ಟಿ ಚನ್ನಾಪುರದಿಂದ ಅಂಚಿನಕೊಪ್ಪಲು ಗ್ರಾಮಕ್ಕೆ ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಾರಂಭಿಸಿ ಅರ್ಧ ಕೆಲಸ ಮಾಡಿ ವಿಧಾನಸಭಾ ಚುನಾವಣೆ ಎದುರಾದ ಕಾರಣ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ನಂತರದಲ್ಲಿ ಶಾಸಕರಾಗಿ ಜೆಡಿಎಸ್ ನಿಂದ ಸುರೇಶ್‌ಗೌಡ ಆಯ್ಕೆಯಾಗಿದ್ದರು. ಇದೀಗ ಎಲ್.ಆರ್.ಶಿವರಾಮೇಗೌಡ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಜವರಪ್ಪಗೌಡ ಆಕ್ರೋಶಕ್ಕೆ ಕಾರಣ
ಇದೀಗ ಶಾಸಕ ಸುರೇಶ್‌ಗೌಡ ಅವರ ಬೆಂಬಲಿಗ ಗುತ್ತಿಗೆದಾರ ಲೋಕೇಶ್ ಎಂಬುವರು ಟಿ ಚನ್ನಾಪುರ ರಸ್ತೆ ಕಾಮಗಾರಿಯನ್ನು ಮುಂದುವರಿಸಲು ಮುಂದಾಗಿದ್ದು, ಇದು ಹಿಂದೆ ಗುತ್ತಿಗೆ ಪಡೆದ ಜವರಪ್ಪಗೌಡ ಎಂಬುವರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲಸಗಾರರನ್ನು ತಡೆಯಲಾಯಿತು
ಇದೀಗ ಜವರಪ್ಪಗೌಡ ಅವರು ಕಾಂಗ್ರೆಸ್‌ನ ಚಲುವರಾಯಸ್ವಾಮಿ ಅವರ ಅವಧಿಯಲ್ಲಿ ಗುತ್ತಿಗೆ ಪಡೆದಿದ್ದಾನೆ ಎಂಬ ಕಾರಣಕ್ಕೆ ಶಾಸಕ ಸುರೇಶ್‌ಗೌಡರು ಇಂಜಿನಿಯರ್ ಮೂಲಕ ಬೇರೊಬ್ಬರಿಗೆ ಎರಡನೇ ಹಂತದ ಗುತ್ತಿಗೆ ಕೆಲಸವನ್ನ ಮಾಡಿಸಲು ಮುಂದಾಗಿದ್ದಾರೆ.
ನಾನು ಈಗಾಗಲೇ ಅರ್ಧಕೆಲಸ ಮಾಡಿದ್ದೇನೆ ನನಗೆ ಬಿಲ್‌ಕೂಡ ಕೊಟ್ಟಿಲ್ಲ. ಅಧಿಕಾರಿಗಳು ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಾಮಗಾಗಿ ಮಾಡಲು ಮುಂದಾದ ಕೆಲಸಗಾರರನ್ನ ತಡೆದಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ
ಗುತ್ತಿಗೆದಾರರ ಹಗ್ಗಜಗ್ಗಾಟದಿಂದ ತಮ್ಮ ಊರಿನ ರಸ್ತೆ ಕೆಲಸ ನಡೆಯಲ್ಲ ಎಂದರಿತ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಶಿವರಾಮೇಗೌಡರು ಮತ್ತು ಸುರೇಶ್ ಗೌಡ ಅವರ ನಡುವೆ ಎಣ್ಣೆಸೀಗೆಕಾಯಿ ಸಂಬಂಧವಾಗಿರುವ ಕಾರಣ ಇದು ಎಲ್ಲಿಗೆ ಬಂದು ನಿಲ್ಲುತ್ತೋ ಗೊತ್ತಿಲ್ಲ. ಆದರೆ ತಮ್ಮ ಊರಿಗೆ ರಸ್ತೆ ಆದರೆ ಸಾಕೆಂದು ಗ್ರಾಮಸ್ಥರು ಮಾತ್ರ ಕಾಯುತ್ತಿದ್ದಾರೆ.












Click it and Unblock the Notifications