ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗರಾಭಿವೃದ್ಧಿ ಕಾಮಗಾರಿ ವಿಳಂಬ: ಟೆಂಡರ್ ಪೂರ್ಣಗೊಂಡರೂ ಕಾರ್ಯಾದೇಶ ನೀಡಲು ಮೀನಾಮೇಷ

By ಮಂಡ್ಯ, ಪ್ರತಿನಿಧಿ
|
Google Oneindia Kannada News

ಮಂಡ್ಯ, ಡಿಸೆಂಬರ್‌ 1: ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ರಸ್ತೆಗುಂಡಿಗೆ ಯೋಧ ಬಲಿಯಾಗಿದ್ದರೂ ರಸ್ತೆ ಅಭಿವೃದ್ಧಿಪಡಿಸಬೇಕೆಂಬ ಇಚ್ಛಾಶಕ್ತಿ ಯಾರಲ್ಲೂ ಇಲ್ಲ ಎನ್ನುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರಾಭಿವೃದ್ಧಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿ ಟೆಂಡರ್ ಪೂರ್ಣಗೊಂಡಿದ್ದರೂ, ಇದುವರೆಗೂ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿಲ್ಲ. ಇದಕ್ಕೆ ಕಾರಣ ಕಮಿಷನ್ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿದೆ. ಕಮಿಷನ್ ನೀಡದೆ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುತ್ತಿಲ್ಲ ಎನ್ನಲಾಗಿದೆ.

ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಹಣದ ಮೇಲಿನ ವ್ಯಾಮೋಹಕ್ಕೆ ನಗರದ ಅಭಿವೃದ್ಧಿಯನ್ನು ಬಲಿಕೊಡಲಾಗುತ್ತಿದೆ. ಅಭಿವೃದ್ಧಿಯನ್ನು ಮರೆತು ಜನಪ್ರತಿನಿಧಿಗಳು ಹಣವನ್ನು ಕೊಳ್ಳೆ ಹೊಡೆಯುವುದನ್ನಷ್ಟೇ ಆಲೋಚಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಮೊದಲೆಲ್ಲಾ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಮಳೆ ಕಾರಣ ಎನ್ನುವ ನೆಪವನ್ನು ಮುಂದಿಡುತ್ತಿದ್ದರು. ಇದೀಗ ಮಳೆ ನಿಂತಿದ್ದರೂ ನಗರದ ಯಾವುದೇ ಭಾಗದಲ್ಲೂ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿಲ್ಲ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಯಾವುದೇ ಬಡಾವಣೆಯ ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ಜಿಲ್ಲಾ ಕೇಂದ್ರದ ರಸ್ತೆಗಳೆಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುವಂತಹ ಸ್ಥಿತಿಯಲ್ಲಿ ರಸ್ತೆಗಳಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾರೊಬ್ಬರಿಗೂ ಈ ಬಗ್ಗೆ ಚಿಂತೆಯೇ ಇಲ್ಲ. ಇದರಿಂದ ರಸ್ತೆಗಳ ಅಭಿವೃದ್ಧಿ ಹಳ್ಳ ಹಿಡಿಯುವಂತಾಗಿದೆ.

ಅವ್ಯವಸ್ಥೆಯ ಆಗರವಾದ ಮಂಡ್ಯ ನಗರ ರಸ್ತೆಗಳು

ಅವ್ಯವಸ್ಥೆಯ ಆಗರವಾದ ಮಂಡ್ಯ ನಗರ ರಸ್ತೆಗಳು

ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಐದು ತಿಂಗಳು ಕಳೆದಿದೆ. ಮಹಾ ಕುಂಭಮೇಳಕ್ಕೆ ಬಂದು ಹೋದವರು, ಇದುವರೆಗೂ ನಗರದ ಕಡೆ ಮುಖ ಮಾಡಿಲ್ಲ. ನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಏನಾಗಿದೆ ಎಂದು ನೋಡುತ್ತಿಲ್ಲ. ಗುಂಡಿಮಯ ರಸ್ತೆಗಳಲ್ಲಿ ಬಿದ್ದು ಜನರು ಸಾಯುತ್ತಿದ್ದರೂ ಕೇಳುವವರಿಲ್ಲ. ಅಧಿಕಾರಿಗಳ ದರ್ಬಾರ್‌ನಲ್ಲಿ ಅಭಿವೃದ್ಧಿ ಕೇವಲ ಮರೀಚಿಕೆಯಾಗಿ ಉಳಿದಿದೆ ಎನ್ನುವುದು ಜನರ ಆರೋಪವಾಗಿದೆ.

ನಗರಾಭಿವೃದ್ಧಿ ಯೋಜನೆಯಡಿ 22 ಕೋಟಿ ರೂಪಾಯಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಪೂರ್ಣಗೊಂಡಿದ್ದರೂ, ಗುತ್ತಿಗೆದಾರರಿಗೆ ಇದುವರೆಗೂ ಕಾರ್ಯಾದೇಶ ನೀಡದೆ ಸತಾಯಿಸಲಾಗುತ್ತಿದೆ. ಇಲ್ಲದ ನೆಪವೊಡ್ಡಿ ಕಾಮಗಾರಿಗಳನ್ನು ನಗರಾಭಿವೃದ್ಧಿ ಕೋಶ ಅಧಿಕಾರಿಗಳು ಮುಂದೂಡುತ್ತಲೇ ಇದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಅವ್ಯವಸ್ಥೆಯ ಆಗರವಾಗಿರುವ ನಗರ ರಸ್ತೆಗಳ ವಿರುದ್ಧ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಜಿಲ್ಲಾ ಮಂತ್ರಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ.

ಟೆಂಡರ್ ಪೂರ್ಣಗೊಂಡಿದ್ದರೂ ಕಾರ್ಯಾದೇಶ ವಿಳಂಬ

ಟೆಂಡರ್ ಪೂರ್ಣಗೊಂಡಿದ್ದರೂ ಕಾರ್ಯಾದೇಶ ವಿಳಂಬ

ನಗರದ ಬಹುತೇಕ ಬಡಾವಣೆಯ ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವುದರಿಂದ ನಿವಾಸಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಕೂಡ ನಗರ ಪ್ರದಕ್ಷಿಣೆ ಕೈಗೊಳ್ಳುತ್ತಿಲ್ಲ. ಇದರಿಂದ ಸಂಚಾರದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟ ಅವರಿಗೆ ಅರ್ಥವಾಗುತ್ತಿಲ್ಲ. ರಸ್ತೆ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸದಿರುವುದರಿಂದಲೇ ರಸ್ತೆಗಳ ಸ್ವರೂಪ ದಶಕಗಳಿಂದಲೂ ಬದಲಾಗದೆ ಯಥಾಸ್ಥಿತಿಯಲ್ಲೇ ಉಳಿಯುವಂತಾಗಿದೆ ಎಂದು ಜನಸಾಮಾನ್ಯರು ದೂರುತ್ತಿದ್ದಾರೆ.

ನಗರಾಭಿವೃದ್ಧಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದರೆ ಎಷ್ಟೋ ರಸ್ತೆಗಳು ಸುಧಾರಣೆಯಾಗಿ ಸಂಚಾರದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆ ದೂರವಾಗಲಿದೆ. ಟೆಂಡರ್ ಪೂರ್ಣಗೊಂಡಿದ್ದರೂ ಕಾರ್ಯಾದೇಶ ನೀಡದೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಅಧಿಕಾರಿಗಳು ಯಾರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂಬ ಬಗ್ಗೆ ಶಂಕೆ ಮೂಡಿದೆ. ಇಲ್ಲದ ನೆಪವೊಡ್ಡಿ ವಿಳಂಬ ಮಾಡುತ್ತಿರುವುದರಿಂದ ನಗರದ ರಸ್ತೆಗಳು ಅಭಿವೃದ್ಧಿಯ ಮುಖವನ್ನೇ ನೋಡದಂತಾಗಿದೆ.

ಜಿಲ್ಲಾ ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿವೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು

ಜಿಲ್ಲಾ ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿವೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು

ನಗರಾಭಿವೃದ್ಧಿ ಯೋಜನೆಯ ಕಾಮಗಾರಿಗಳು ಆರಂಭಗೊಳ್ಳದಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬ್ಯಾಂಕ್‌ನಿಂದ ಹಣ ಬರಬೇಕು, ಮುಖ್ಯ ಕಚೇರಿಯಿಂದ ಆದೇಶ ಬರಬೇಕು ಎಂದೆಲ್ಲಾ ಕಾರಣ ಹೇಳುತ್ತಿದ್ದಾರೆ. ಆದರೆ ಕಾಮಗಾರಿಗಳು ಆರಂಭವಾಗದಿರುವುದಕ್ಕೆ ಯಾವುದೇ ಸರಿಯಾದ ಕಾರಣವನ್ನು ನೀಡದೆ ಬೇಜವಾಬ್ದಾರಿಯಾಗಿ ಉತ್ತರ ನೀಡುತ್ತಿದ್ದಾರೆ.

ಜಿಲ್ಲಾ ಕೇಂದ್ರವನ್ನು ಹೊರತುಪಡಿಸಿದರೆ ನಗರಾಭಿವೃದ್ಧಿ ಯೋಜನೆಯ ಕಾಮಗಾರಿಗಳು ತಾಲೂಕು ವ್ಯಾಪ್ತಿಯಲ್ಲಿ ಆರಂಭಗೊಂಡಿವೆ. ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆಯೂ ನಡೆದು ಕಾಮಗಾರಿ ನಡೆಯುತ್ತಿವೆ. ವಿಚಿತ್ರವೆಂದರೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಕಮಿಷನ್ ಮೇಲಾಟದಿಂದಾಗಿ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿ ಜನಸಾಮಾನ್ಯರು ರಸ್ತೆ ಗುಂಡಿಗಳ ನಡುವೆ ಸಂಕಷ್ಟದಲ್ಲಿ ಸಂಚರಿಸುತ್ತಿದ್ದಾರೆ.

ಕೊರೊನಾದಿಂದ ಕಾಮಗಾರಿ ವಿಳಂಬ

ಕೊರೊನಾದಿಂದ ಕಾಮಗಾರಿ ವಿಳಂಬ

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಯೋಜನೆಯಡಿ 50 ಕೋಟಿ ರೂಪಾಯಿ ಹಣವನ್ನು ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದರು. ನಂತರದಲ್ಲಿ ಎದುರಾದ ಕೊರೊನಾ ಕಾರಣದಿಂದ ಹಣವನ್ನು ತಡೆಹಿಡಿಯಲಾಯಿತು. ಬಿಜೆಪಿ ಸರ್ಕಾರ ಬಂದ ನಂತರ ಆ ಹಣವನ್ನು ಬಿಡುಗಡೆಗೊಳಿಸಲೇ ಇಲ್ಲ. ಅಮೃತ್ ಯೋಜನೆ ಕಾಮಗಾರಿಯಿಂದಾಗಿ ನಗರದ ಎಲ್ಲಾ ಬಡಾವಣೆಗಳಲ್ಲಿ ರಸ್ತೆ ಗುಂಡಿ ಬಿದ್ದಿವೆ. ಅವುಗಳನ್ನು ದುರಸ್ತಿಪಡಿಸುವುದಕ್ಕೆ ಹಣವಿಲ್ಲದೆ ನಗರಸಭೆಯವರು ಕೈಚೆಲ್ಲಿ ಕುಳಿತರು. ಇದೀಗ ರಾಜ್ಯ ಸರ್ಕಾರ ನಗರಾಭಿವೃದ್ಧಿ ಯೋಜನೆಯಡಿ 50 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮಳೆಯೂ ನಿಂತಿದೆ. ಕಾರ್ಯಾದೇಶ ಮಾತ್ರ ನೀಡುತ್ತಿಲ್ಲ.

ರಸ್ತೆಗಳ ಅಭಿವೃದ್ಧಿಗಾಗಿ ಜನರು ಇನ್ನೆಷ್ಟು ದಿನ ಕಾಯಬೇಕು. ಮಂಡ್ಯ ನಗರದ ರಸ್ತೆಗಳ ಸ್ವರೂಪ ಬದಲಾಗುವುದು ಯಾವಾಗ. ನಗರದ ಜನರು ಸುಗಮವಾಗಿ ಸಂಚರಿಸುವುದು ಯಾವಾಗ ಎನ್ನುವುದನ್ನು ಯಾರೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಅಭಿವೃದ್ಧಿಯನ್ನು ಅತಂತ್ರ ಸ್ಥಿತಿಯಲ್ಲಿ ಬಿಟ್ಟು ಜನಪ್ರತಿನಿಧಿಗಳು ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

English summary
Mandya Urban development work delay, public lashes out at Politicians and Officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X