Pramod Muthalik: ನಾಗಮಂಗಲ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ರನ್ನು ತಡೆದ ಪೊಲೀಸರು
ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಕೋಮು ಗಲಭೆ ಸಂಭವಿಸಿ ಧಗಧಗಿಸಿದ್ದ ನಾಗಮಂಗಲ ಸದ್ಯಕ್ಕೆ ಶಾಂತವಾಗಿದ್ದು, ಪೊಲೀಸರು ಇನ್ನೂ ಹದ್ದಿನ ಕಣ್ಣಿಟ್ಟಿದ್ದಾರೆ. ಈ ನಡುವೆ ನಾಗಮಂಗಲ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಮಂಡ್ಯ ಜಿಲ್ಲೆಯ ಗಡಿ ಭಾಗದ ತಾಲೂಕು ನಿಡಘಟ್ಟದಲ್ಲಿ ಪೊಲೀಸರು ತಡೆದಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ನಾಗಮಂಗಲ ಪ್ರವೇಶಿಸಲು ಪೊಲೀಸರು ತಡೆ ಒಡ್ಡುತ್ತಿದ್ದಂತೆ ಪ್ರಮೋದ್ ಮುತಾಲಿಕ್ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಕೆಲ ಸಮಯ ಬಿಗುವಿನ ಪರಿಸ್ಥಿತಿ ಕೂಡ ಉಂಟಾಗಿತ್ತು.

ಗಣೇಶ ವಿಸರ್ಜನೆ ಮೆರವಣಿಗೆ ಗಲಭೆ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ನಾಗಮಂಗಲಕ್ಕೆ ಬರುವ ಸಾಧ್ಯತೆ ಇತ್ತು. ಮುತಾಲಿಕ್ ಈ ಸಂದರ್ಭದಲ್ಲಿ ನಾಗಮಂಗಲಕ್ಕೆ ಬಂದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಅರಿತಿದ್ದ ಪೊಲಿಸರು, ನಾಗಮಂಗಲಕ್ಕೆ ಬರದಂತೆ ಮೌಖಿಕವಾಗಿ ಸೂಚನೆ ನೀಡಿದ್ದರು. ಇದರಿಂದ ಪ್ರಮೋದ್ ಮುತಾಲಿಕ್ ನಾಗಮಂಗಲಕ್ಕೆ ಭೇಟಿ ನೀಡಿರಲಿಲ್ಲ.
ಹಿಂದೂ ಕಾರ್ಯಕರ್ತರ ಭೇಟಿಗೆ ಯತ್ನ
ನಾಗಮಂಗಲ ಕೋಲುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬದ್ರಿಕೊಪ್ಪಲು ಗ್ರಾಮದ ಹಿಂದೂಪರ ಸಂಘಟನೆಯ ಯುವಕರನ್ನು ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿ ಭೇಟಿಯಾಗಲು ಪ್ರಮೋದ್ ಮುತಾಲಿಕ್ ಮುಂದಾಗಿದ್ದರು. ಆದರೆ ಪ್ರಮೋದ್ ಮುತಾಲಿಕ್ ಆಗಮನಕ್ಕೆ ಮುನ್ನವೇ ಪೊಲೀಸರು ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿ ಮಾಡಿ, ಮಂಡ್ಯ ಜಿಲ್ಲೆ ಪ್ರವೇಶಿಸದಂತೆ ಆದೇಶ ಹೊರಡಿಸಿದ್ದರು.
ಆದೇಶ ಹೊರಡಿಸುವ ಜೊತೆಗೆ ಮುಂಜಾಗ್ರತೆ ಕ್ರಮವಾಗಿ ನಿಡಘಟ್ಟ ಬಳಿ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಪ್ರಮೋದ್ ಮುತಾಲಿಕ್ ಬರುತ್ತಿದ್ದಂತೆ ಅವರನ್ನು ಗಡಿಯಲ್ಲೇ ತಡೆದು ಪ್ರವೇಶದ ನಿರ್ಬಂಧದ ಆದೇಶದ ಪತ್ರ ತೋರಿಸಿ ವಾಪಸ್ ಕಳಿಸಲು ಮುಂದಾದರು.
ತಮ್ಮನ್ನು ತಡೆಯುತ್ತಿದ್ದಂತೆ ಪ್ರಮೋದ್ ಮುತಾಲಿಕ್ ಪೊಲೀಸರ ಜೊತೆ ವಾಗ್ವಾದ ನಡೆದು ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ತಲೆದೋರಿತ್ತು. ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮುತಾಲಿಕ್ ಅವರಿಗೆ ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ ತಾವು ಭೇಟಿ ನೀಡಿದರೆ ಮತ್ತೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ, ಹೀಗಾಗಿ ತಾವು ಬೆಂಗಳೂರಿಗೆ ತೆರಳುವಂತೆ ಮನವಿ ಮಾಡಿದರು. ಪೊಲೀಸರು ಮನವೊಲಿಸಿದ ಬಳಿಕ ಪ್ರಮೋದ್ ಮುತಾಲಿಕ್ ನಾಗಮಂಗಲ ಭೇಟಿ ಕೈಬಿಟ್ಟು ಪೊಲೀಸ್ ಬಂದೋಬಸ್‌ನಲ್ಲಿ ಮೈಸೂರಿಗೆ ತೆರಳಿದರು.












Click it and Unblock the Notifications