ಮೂಲ ಕಾಂಗ್ರೆಸ್ಸಿಗರು ದಿಢೀರ್ ನವದೆಹಲಿಗೆ ತೆರಳಿದ್ದೇಕೆ?: ವರಿಷ್ಠರ ನಿಲುವೇನು?, ಇಲ್ಲಿದೆ ವರದಿ
ಮಂಡ್ಯ, ಮಾರ್ಚ್, 17: ಕಾಂಗ್ರೆಸ್ ಮುಖಂಡರು ನವದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಮೊಕ್ಕಾಂ ಊಡಿದ್ದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಸಿದ್ಧರೂಢ ಸತೀಶ್‌ಗೌಡ, ಅಮರಾವತಿ ಚಂದ್ರಶೇಖರ್, ಎಂ.ಎಸ್.ಆತ್ಮಾನಂದ ಸೇರಿ 9 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಾಗಾದರೆ ಕಾಂಗ್ರೆಸ್ ವರಿಷ್ಠರ ನಿಲುವೇನು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು 16 ಜನ ಅರ್ಜಿ ಸಲ್ಲಿಸಿದ್ದರು. 16 ಜನರಲ್ಲಿ ಕೆಲವರು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಟಿಕೆಟ್‌ಗಾಗಿ ಲಾಭಿ ನಡೆಸಿದ್ದರು. ಇದರಿಂದ ರೊಚ್ಚಿಗೆದ್ದ ಮೂಲ ಕಾಂಗ್ರೆಸ್ಸಿಗರು ನವದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರನ್ನು ಭೇಟಿ ಮಾಡಿದ್ದಾರೆ.

ಹೊಸಬರಿಗೆ ಆದ್ಯತೆ ನೀಡುವುದಿಲ್ಲ
ಹತ್ತಾರು ವರ್ಷಗಳಿಂದ ಮೂಲ ಕಾಂಗ್ರೆಸ್ಸಿಗರು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರಾಮಾಣಿಕವಾಗಿ ಪಕ್ಷ ಕಟ್ಟುವ ಕೆಲಸವನ್ನು ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿರುವುದನ್ನು ವರಿಷ್ಠರಿಗೆ ಮನವರಿಕೆ ಮಾಡಿದರು.

ಇದಕ್ಕೆ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಪೂರಕವಾಗಿ ಸ್ಪಂದಿಸಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುವುದಿಲ್ಲ. ಹೊಸಬರಿಗೆ ಆಧ್ಯತೆ ನೀಡುವುದಿಲ್ಲ. ಅವರು ಪಕ್ಷದಲ್ಲಿ ದುಡಿಯಲಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ತಿಳಿಸಿದ್ದಾರೆ.
ಅಲ್ಲದೆ, ಸ್ಕ್ರೀನಿಂಗ್ ಕಮಿಟಿ ಸದಸ್ಯರಾದ ಪರಮೇಶ್, ಎಂ.ಬಿ.ಪಾಟೀಲ್, ಸುರ್ಜೇವಾಲಾ, ಹರಿಪ್ರಸಾದ್ ಅವರನ್ನು ಭೇಟಿ ಮಾಡಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪಷ್ಟ ಚಿತ್ರವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಕೆರೆಗಳ ಅಭಿವೃದ್ಧಿ ಕಾಮಗಾರಿ
ಹಾಗೆಯೇ ಜೆಡಿಎಸ್‌ನಿಂದಲೂ ಪ್ರಚಾರ ಆರಂಭಿಸಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದುದ್ದ ಹೋಬಳಿಗೆ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆನಕುಪ್ಪೆ ಗ್ರಾಮದಲ್ಲಿ ತಿಳಿಸಿದ್ದಾರೆ.
ಮೇಲುಕೋಟೆ ತಾಲೂಕಿನ ಆನಕುಪ್ಪೆ ಗ್ರಾಮದಲ್ಲಿ ಶುಕ್ರವಾರ ನಡೆದ ಜಿ.ಮಲ್ಲೀಗೆರೆ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ದುದ್ದ ಹೋಬಳಿಯ ಶಿವಳ್ಳಿ, ಗಾಣದಾಳು, ಹೊಳಲು, ಮಾರನಚಾಕನಹಳ್ಳಿ, ಹೆಚ್.ಮಲ್ಲೀಗೆರೆ ಕೆರೆಗಳು ಸೇರಿದಂತೆ ಇನ್ನೂ 24 ಕೆರೆಗಳ ಹೂಳೆತ್ತಿಸಿ ಅವುಗಳಿಗೆ ವಿಶ್ವೇಶ್ವರಯ್ಯ ನಾಲೆ ನೀರನ್ನು ಹರಿಸಿ ತುಂಬಿಸಲಾಗುವುದು ಎಂದು ತಿಳಿಸಿದರು.
ಜಿ.ಮಲ್ಲೀಗೆರೆಯಿಂದ ಹೊನ್ನೇಮಡು, ಚಿಕ್ಕಗಂಗವಾಡಿ ಬಳಿ 7.5 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿ ಅದಕ್ಕೆ ಹೊಂದಿಕೊಂಡಂತೆ ಚೆಕ್‌ಡ್ಯಾಂ ನಿರ್ಮಿಸಲಾಗುವುದು. 365 ದಿನವೂ ಅಲ್ಲಿ ನೀರು ನಿಲ್ಲುವಂತೆ ಮಾಡಿ ಶ್ರೀ ಆನಕುಪ್ಪಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರು ಸ್ನಾನ ಮಾಡಿಕೊಂಡು ದೇಗುಲಕ್ಕೆ ತೆರಳಲು ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ನುಡಿದರು.
ಗುಂಡಿ ಮುಚ್ಚುವ ಕಾಮಗಾರಿ ಆರಂಭ
ಮಲ್ಲೀಗೆರೆಯಿಂದ ಚಿಕ್ಕಗಂಗವಾಡಿ ಹೊನ್ನೇಮಡುವಿನಲ್ಲಿ 4.50 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಹೊಳಲು, ಮಲ್ಲನಾಯಕನಕಟ್ಟೆ, ಶಿವಳ್ಳಿ ಮಾರ್ಗವಾಗಿ ಮೇಲುಕೋಟೆಗೆ ತೆರಳುವ ರಸ್ತೆಗಳ ಗುಂಡಿ ಬಿದ್ದಿದ್ದವು. ಆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಗೊಂಡಿದೆ. ಹಾಗೆಯೇ ದುದ್ದ ಕೇಂದ್ರ ವ್ಯಾಪ್ತಿಯ ಎಲ್ಲಾ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ
ನಾನು ಕ್ಷೇತ್ರ ಬಿಟ್ಟು ಎಲ್ಲಿಯೂ ಓಡಿ ಹೋಗುವುದಿಲ್ಲ. ನಾನು ಶಾಸಕ, ಸಂಸದ, ಸಚಿವನಾದ ಸಂದರ್ಭದಲ್ಲೂ ಜನರ ಮಧ್ಯೆ ನಿಂತು ಕೆಲಸ ಮಾಡಿದ್ದೇನೆ. ಅಹಂಕಾರವನ್ನು ಸ್ವಾರ್ಥಕ್ಕಾಗಿ ಎಂದಿಗೂ ಉಪಯೋಗಿಸಿಕೊಂಡಿಲ್ಲ. ಜನರ ಹಿತ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಅಹಂಕಾರವನ್ನು ಧಾರೆ ಎರೆದಿದ್ದೇನೆ. ಬೇರೆಯವರಂತೆ ಕದ್ದು ಓಡಿ ಹೋಗುವ ಜಾಯಮಾನ ನನ್ನದಲ್ಲ. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲೂ ನನ್ನ ಪ್ರಾಣವನ್ನು ಒತ್ತೆ ಇಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ ಎಂದರು.
ಪಿಯು ಕಾಲೇಜನ್ನು ತೆರೆದಿದ್ದೇನೆ
ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಗೌರವದಿಂದ ನಡೆಯುವಂತೆ ಕ್ರಮವಹಿಸಿದ್ದೇನೆ. ಭಾರಿ ಮಳೆ ಎದುರಾದ ಸಮಯದಲ್ಲಿ ಕೆರೆತೊಣ್ಣೂರು ಸೇರಿದಂತೆ ಹಲವಾರು ಕೆರೆಗಳ ಸುರಕ್ಷತೆಗೆ ಧಕ್ಕೆಯಾಗದಂತೆ ಎಚ್ಚರವಹಿಸಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತೇನೆ. ಕ್ಷೇತ್ರದ ಒಂದೊಂದು ಪಂಚಾಯಿತಿಗೆ 50 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ದುದ್ದ ಹೋಬಳಿಯನ್ನು ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಿಸಿದ್ದು, ಒಂದು ಪಿಯು ಕಾಲೇಜನ್ನು ತೆರೆದಿದ್ದೇನೆ ಎಂದರು.
ಜಿ.ಮಲ್ಲೀಗೆರೆ, ವಿ.ಸಿ.ಫಾರಂ, ಹಟ್ನಾದಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ವಿದ್ಯುತ್ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದೇನೆ. ಯಾರು ಏನೇ ಬಂದು ಹೇಳಿದರೂ ಅದನ್ನು ನಂಬಬೇಡಿ. ಕ್ಷೇತ್ರದ ಜನರಿಗಾಗಿ ನಾನೇನು ಮಾಡಿದ್ದೇನೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಗೆಲ್ಲಿಸಿದರೆ ಇನ್ನೂ ಹೆಚ್ಚಿನ ಸೇವೆ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.











Click it and Unblock the Notifications